ಮಧುಗಿರಿ: ಪಟ್ಟಣದ ಲಾಲ್ ಬಹಾದ್ದೂರ್ ಶಾಸ್ತ್ರಿ ಮೈದಾನದಲ್ಲಿ ನಡೆಯುತ್ತಿರುವ ವಾರದ ಸಂತೆಯನ್ನು ಸ್ಥಳಾಂತರ ಮಾಡುವುದಕ್ಕೆ ಸಾರ್ವಜನಿಕರು ಮತ್ತು ವ್ಯಾಪಾರಿ ವಲಯದಲ್ಲಿ ಪರ ಮತ್ತು ವಿರೋಧ ನಡೆಯುತ್ತಿದೆ.
ಹಲವು ವರ್ಷಗಳಿಂದ ಪ್ರತಿ ಬುಧವಾರ ಲಾಲ್ ಬಹಾದ್ದೂರ್ ಶಾಸ್ತ್ರಿ ಮೈದಾನದಲ್ಲಿ ಸಂತೆ ನಡೆಯುತ್ತಿತ್ತು. ಇದರಿಂದ ಪಟ್ಟಣದ ಬಹುತೇಕ ವಾರ್ಡ್‌ನ ನಿವಾಸಿಗಳು ಹಾಗೂ ಕಸಬಾ ವ್ಯಾಪ್ತಿಯ ಗ್ರಾಮಗಳಿಗೂ ಅನುಕೂಲವಾಗುತ್ತಿತ್ತು. ಎಲ್ಲ ಗ್ರಾಮಗಳಿಗೂ ತೆರಳಲು ಆಟೊ ಹಾಗೂ ಬಸ್ ವ್ಯವಸ್ಥೆ ಇತ್ತು. ಆದರೆ ವರ್ಷಗಳು ಕಳೆದಂತೆ ವಾಹನಗಳ ಸಂಖ್ಯೆ ಹೆಚ್ಚಾಗಿ ಸಂಚಾರ ದಟ್ಟಣೆ ಎದುರಾಗಿದೆ.
ಎಲ್ಲ ಭಾಗಗಳಿಗೆ ಸಂತೆ ಮುಂಭಾಗದ ತುಮಕೂರು ರಸ್ತೆ ಮೂಲಕವೇ ಪಾವಗಡ, ಶಿರಾ, ಗೌರಿಬಿದನೂರು, ಹಿಂದೂಪುರ ಹಾಗೂ ತುಮಕೂರು ಭಾಗಗಳಿಗೆ ತೆರಳಬೇಕಿರುವುದರಿಂದ ಬುಧವಾರ ಸಾಕಷ್ಟು ದಟ್ಟಣೆಯಾಗುತ್ತದೆ. ಹಾಗಾಗಿ ಸಂತೆಯನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ.
ವಾರದ ಸಂತೆಯನ್ನು ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಿದರೆ ಉತ್ತಮ ಸ್ಥಳ, ನೆರಳು ಹಾಗೂ ಮೂಲ ಸೌಕರ್ಯವಿದ್ದು, ಯಾವುದೇ ಸಂಚಾರ ದಟ್ಟಣೆಯ ಸಮಸ್ಯೆ ಎದುರಾಗುವುದಿಲ್ಲ. ಪಟ್ಟಣ ಮತ್ತಷ್ಟು ಅಭಿವೃದ್ಧಿಯಾಗುತ್ತದೆ. ವಾರದ ಸಂತೆ ಜೊತೆಗೆ ಹೂವಿನ ಮಾರುಕಟ್ಟೆಯೂ ಇಲ್ಲಿಯೇ ನಡೆದರೆ ಜನರಿಗೆ ಮತ್ತಷ್ಟು ಅನುಕೂಲವಾಗುತ್ತದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿ ಶುಕ್ರವಾರ ಕುರಿ ಸಂತೆ ಮಾಡಬೇಕು ಎನ್ನುವುದು ಸಾರ್ವಜನಿಕರು ಮತ್ತು ಕುರಿ ಸಾಕಾಣಿಕೆಗಾರರ ಒತ್ತಾಯ. ಕುರಿ ಸಾಕಾಣಿಕೆಗಾರರ ಸಭೆ ಮಾಡಿ ಸಾಧಕ ಮತ್ತು ಬಾಧಕ ತುಲನೆ ಮಾಡಿದರೆ, ಕುರಿ ಸಂತೆಯೂ ಯಶಸ್ವಿಯಾಗುತ್ತದೆ. ಹಿಂದೂಪುರ, ಗೌರಿಬಿದನೂರು, ಬೆಂಗಳೂರು– ತುಮಕೂರು ಈ ಭಾಗದ ವ್ಯಾಪಾರಿಗಳಿಗೂ ಸಾಕಷ್ಟು ಅನುಕೂಲವಾಗುತ್ತದೆ ಎನ್ನುತ್ತಾರೆ ಸ್ಥಳೀಯರು.
ಚರ್ಚಿಸಿ ತೀರ್ಮಾನ
ಎಪಿಎಂಸಿ ಆವರಣದಲ್ಲಿ ಪ್ರತಿ ಶುಕ್ರವಾರ ಕುರಿ ಸಂತೆ ನಡೆಸಲು ತೀರ್ಮಾನಿಸಲಾಗಿದೆ. ಲಾಲ್ ಬಹಾದ್ದೂರ್ ಶಾಸ್ತ್ರಿ ಮೈದಾನದಲ್ಲಿ ನಡೆಯುತ್ತಿರುವ ಸಂತೆಯನ್ನು ಎಪಿಎಂಸಿ ಆವರಣಕ್ಕೆ ಸ್ಥಳಾಂತರ ಮಾಡಬಾರದು ಎಂದು ವ್ಯಾಪಾರಿಗಳು ಮನವಿ ಮಾಡಿದ್ದಾರೆ. ಅವರೊಂದಿಗೆ ಸಭೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು. ಅಲ್ಲಿಯವರೆಗೂ ವಾರದ ಸಂತೆ ಲಾಲ್ ಬಹಾದ್ದೂರ್ ಶಾಸ್ತ್ರಿ ಮೈದಾನದಲ್ಲಿ ನಡೆಯುತ್ತದೆ. ಕೆ.ಎನ್.ರಾಜಣ್ಣ ಸಹಕಾರ ಸಚಿವ
ಪಟ್ಟಣದ ಲಾಲ್ ಬಹಾದ್ದೂರ್ ಶಾಸ್ತ್ರಿ ಮೈದಾನದಲ್ಲಿ ನಡೆಯುತ್ತಿರುವ ಸಂತೆಯನ್ನು ಇಲ್ಲಿಯೇ ಮುಂದುವರೆಸಿದರೆ ಎಲ್ಲರಿಗೂ ಅನುಕೂಲ. ಈ ಬಗ್ಗೆ ಈಗಾಗಲೇ ಸಚಿವರ ಗಮನಕ್ಕೆ ತರಲಾಗಿದೆ.-ಕೆ.ಎಂ.ಗುರುರಾಜ್ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ
ಸದ್ಯ ಸಂತೆ ಪಟ್ಟಣದ ಹೃದಯ ಭಾಗದಲ್ಲಿ ಇರುವುದರಿಂದ ಎಲ್ಲರಿಗೂ ಅನುಕೂಲ. ಎಪಿಎಂಸಿ ಆವರಣಕ್ಕೆ ಸಂತೆ ಸ್ಥಳಾಂತರಿಸಿದರೆ ಆಟೊ ಮತ್ತು ವಾಹನಗಳನ್ನೇ ಅವಲಂಬಿಸಬೇಕಾಗುತ್ತದೆ.-ಅರುಣ್, ವ್ಯಾಪಾರಿ
ಲಾಲ್ ಬಹಾದ್ದೂರ್ ಶಾಸ್ತ್ರಿ ಮೈದಾನದಲ್ಲಿ ನಡೆಯುತ್ತಿರುವ ಸಂತೆಯಿಂದ ಪಟ್ಟಣದಲ್ಲಿ ಸಾಕಷ್ಟು ಸಂಚಾರ ದಟ್ಟಣೆಯಾಗುತ್ತಿದೆ. ಈ ಸಂತೆಯನ್ನು ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಿದರೆ ಪಟ್ಟಣವು ಅಭಿವೃದ್ಧಿಯಾಗುತ್ತದೆ.-ಮನು, ಮಂಡಿ ವರ್ತಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.