ಭಾನುವಾರ, ಜೂನ್ 26, 2022
23 °C

ಮಡಿವಾಳರ ಶಕ್ತಿ ಪ್ರದರ್ಶನ; ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ಹಕ್ಕೊತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ನಗರದ ಹೊರ ವಲಯದ ಹೆಗ್ಗೆರೆ ಬಳಿ ಭಾನುವಾರ ರಾಜ್ಯ ಮಡಿವಾಳರ ಸಂಘ ಹಮ್ಮಿಕೊಂಡಿದ್ದ ಬೃಹತ್ ಜಾಗೃತಿ ಸಮಾವೇಶದ ಮೂಲಕ ಸಮುದಾಯದ ಶಕ್ತಿ, ಒಗ್ಗಟ್ಟು ಪ್ರದರ್ಶನ ನಡೆಯಿತು.

ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಮಂದಿ ಸಮಾವೇಶದಲ್ಲಿ ಪಾಲ್ಗೊಂಡು ತಮ್ಮ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಮಾಡಿಕೊಂಡರು. ಕಾಂಗ್ರೆಸ್‌ನ ಪ್ರಮುಖ ನಾಯಕರು ಭಾಗವಹಿಸಿದ್ದು, ಒಂದು ರೀತಿಯಲ್ಲಿ ಪಕ್ಷದ ಕಾರ್ಯಕ್ರಮದಂತೆ ಕಂಡು ಬಂತು.

ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕು. ಜತೆಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಸಮುದಾಯದ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಬೇಕು. ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡಬೇಕು, ಸಮುದಾಯದ ಮುಖಂಡ ಗೋಪಿಕೃಷ್ಣ ಅವರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ನೀಡಬೇಕು ಎಂಬ ಹಕ್ಕೊತ್ತಾಯ ಮಂಡಿಸಿದರು.

ಸಮಾವೇಶಕ್ಕೆ ಚಾಲನೆ ನೀಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರೊ.ಅನ್ನಪೂರ್ಣಮ್ಮ ವರದಿಯ ಅನ್ವಯ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು‘ ಎಂದು ಭರವಸೆ ನೀಡಿದರು.

‘ಈ ಹಿಂದೆ ಕಾಂಗ್ರೆಸ್‌ ಸರ್ಕಾರದ ಸಮಯದಲ್ಲಿ ನಿಗಮ, ಮಂಡಳಿಗಳಿಗೆ ಸಮುದಾಯದವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಹಲವರಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸಲಾಗಿತ್ತು. ದೇವರ ಹಿಪ್ಪರಗಿಯ ಅಭಿವೃದ್ಧಿಗೆ ₹3 ಕೋಟಿ ನೀಡಲಾಗಿತ್ತು. ರಾಜ್ಯ ಸರ್ಕಾರದಿಂದ ಮಡಿವಾಳ ಮಾಚಿದೇವರ ಜಯಂತಿ ಆಚರಣೆಗೆ ಆದೇಶ ಹೊರಡಿಸಿದ್ದೆ‘ ಎಂದು ನೆನಪಿಸಿಕೊಂಡರು.

ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರ ಅವಧಿ ಮುಗಿದು ಒಂದು ವರ್ಷ ಒಂಬತ್ತು ತಿಂಗಳು ಕಳೆದರೂ ಚುನಾವಣೆ ನಡೆಸಿಲ್ಲ. ಈಗ ಮೀಸಲಾತಿ ಸಮಸ್ಯೆಯೂ ಎದುರಾಗಿದೆ. ಈ ಹಿಂದೆಯೇ ಚುನಾವಣೆ ನಡೆಸಿದ್ದರೆ ಮಡಿವಾಳರು ಸೇರಿದಂತೆ ಎಲ್ಲಾ ಸಮುದಾಯದವರಿಗೂ ಅವಕಾಶ ಲಭಿಸುತ್ತಿತ್ತು ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ‘ವಿಧಾನಸಭೆ ಚುನಾವಣೆಯಲ್ಲಿ ಅವಕಾಶ ನೀಡಬೇಕು ಎನ್ನುವ ಸಮುದಾಯದ ಕೂಗನ್ನು ಪರಿಗಣಿಸಲಾಗುವುದು. ಸಮುದಾಯದ ಮುಖಂಡ ಗೋಪಿಕೃಷ್ಣ ಅವರಿಗೆ ಟಿಕೆಟ್ ನೀಡುವ ಕುರಿತು ಸದ್ಯದಲ್ಲೇ ಮಾಹಿತಿ ನೀಡಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು