ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರು–ತುಮಕೂರು ಮೆಟ್ರೊ ಯೋಜನೆ

ನಗರದ ಅಭಿವೃದ್ಧಿ, ₹500 ಕೋಟಿಗೆ ಬೇಡಿಕೆ: ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಕಾರ್ಯಗತ
Published 27 ಜನವರಿ 2024, 0:30 IST
Last Updated 27 ಜನವರಿ 2024, 0:30 IST
ಅಕ್ಷರ ಗಾತ್ರ

ತುಮಕೂರು: ಬೆಂಗಳೂರು– ತುಮಕೂರು ನಡುವಿವ ಮೆಟ್ರೊ ಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಇಲ್ಲಿ ಶುಕ್ರವಾರ ತಿಳಿಸಿದರು.

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಂಪರ್ಕ ವ್ಯವಸ್ಥೆ ಸುಧಾರಿಸಿದರೆ ಬೆಂಗಳೂರು ಮೇಲಿನ ಒತ್ತಡ ಕಡಿಮೆ ಮಾಡಬಹುದು. ಅದಕ್ಕಾಗಿ ತುಮಕೂರಿಗೆ ಮೆಟ್ರೊ ವಿಸ್ತರಣೆಗೆ ಉದ್ದೇಶಿಸಿದ್ದು, ಈಗಾಗಲೇ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ’ ಎಂದರು.

ಮೆಟ್ರೋ ರೈಲು ಮಾರ್ಗದ ಕಾಮಗಾರಿಗೆ ಸರ್ಕಾರಗಳು ಹಣ ಕೊಡಬೇಕಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಪ್ಪಿಗೆ ಕೊಟ್ಟರೆ ಸಾಕು. ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಲು ಸಾಕಷ್ಟು ಕಂಪನಿಗಳು ಮುಂದೆ ಬಂದಿವೆ. ಖಾಸಗಿಯವರ ಸಹಭಾಗಿತ್ವದಲ್ಲಿ ಯೋಜನೆ ಕಾರ್ಯಗತ ಮಾಡಲಾಗುವುದು ಎಂದು ಹೇಳಿದರು.

₹697 ಕೋಟಿ: ನಿರ್ಮಾಣಗೊಂಡಿರುವ ನಗರದ ಬಸ್ ನಿಲ್ದಾಣ, ವಿಶ್ವವಿದ್ಯಾಲಯ ನೂತನ ಕ್ಯಾಂಪಸ್ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗೆ ಅಡ್ಡಿಗಲ್ಲು ಹಾಕುವುದು ಸೇರಿದಂತೆ ಒಟ್ಟು ₹697 ಕೋಟಿ ಮೊತ್ತದ ಯೋಜನೆಗಳಿಗೆ ನಗರದಲ್ಲಿ ಫೆ. 29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದರು.

ಸ್ಮಾರ್ಟ್ ಸಿಟಿ ಯೋಜನೆಯಿಂದ ಇಡೀ ನಗರಕ್ಕೆ ಅನುಕೂಲವಾಗಿಲ್ಲ. ಅಭಿವೃದ್ಧಿ ಕೆಲಸಗಳು ಕೇವಲ 6 ವಾರ್ಡ್‌ಗಳಿಗೆ ಮಾತ್ರ ಸೀಮಿತವಾಗಿದೆ. ಉಳಿದ ವಾರ್ಡ್‌ಗಳು ಅಭಿವೃದ್ಧಿ ಆಗಬೇಕಿದ್ದು, ‘ಗ್ರೇಟರ್ ತುಮಕೂರು’ ನಿರ್ಮಾಣಕ್ಕೆ ₹500 ಕೋಟಿ ಕೊಡುವಂತೆ ಮುಖ್ಯಮಂತ್ರಿಗೆ ಬೇಡಿಕೆ ಸಲ್ಲಿಸಲಾಗುವುದು. ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಮತ್ತಷ್ಟು ಅಭಿವೃದ್ಧಿಯಾಗಬೇಕಿದ್ದು, ಹೆಚ್ಚುವರಿಯಾಗಿ ಹಣ ನೀಡುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ನರೇಗಾ ಯೋಜನೆಯಲ್ಲಿ ಒಂದು ಸಾವಿರ ಶಾಲೆಗಳ ಅಭಿವೃದ್ಧಿಗೆ ₹85 ಕೋಟಿ ವೆಚ್ಚ ಮಾಡಲಾಗುತ್ತಿದೆ. ಶಾಲೆಗಳ ದುರಸ್ತಿ, ಆವರಣಗೋಡೆ, ಆಟದ ಮೈದಾನ ನಿರ್ಮಿಸಲಾಗುತ್ತಿದೆ. ಬಹುತೇಕ ಕೆಲಸಗಳು ಮುಗಿಯುತ್ತಾ ಬಂದಿವೆ. ನರೇಗಾ ಯೋಜನೆ ಜಾರಿಯಲ್ಲಿ ಜಿಲ್ಲೆ ಮೊದಲ ಸ್ಥಾನಕ್ಕೆ ಏರಿದೆ. ಕಳೆದ ಏಳು ತಿಂಗಳಲ್ಲಿ 55 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ₹450 ಕೋಟಿ ಮೊತ್ತದ ಕಾಮಗಾರಿಗಳು ನಡೆದಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT