ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಷ್ಠ ವೇತನ: ₹ 26 ಸಾವಿರಕ್ಕೆ ಹೆಚ್ಚಿಸಿ

ಸಿಐಟಿಯು ಜಿಲ್ಲಾ ಘಟಕದ ಆಗ್ರಹ
Last Updated 21 ಜನವರಿ 2022, 7:13 IST
ಅಕ್ಷರ ಗಾತ್ರ

ತುಮಕೂರು: ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಕೂಲಿ ಕಾರ್ಮಿಕರ ಸಂಬಳ ಮಾತ್ರ ಏರಿಕೆಯಾಗುತ್ತಿಲ್ಲ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸೈಯದ್‍ ಮುಜೀಬ್ ತಿಳಿಸಿದರು.

ನಗರದ ಜನ ಚಳವಳಿ ಕೇಂದ್ರದಲ್ಲಿ ಮೊದಲ ಸಾರ್ವತ್ರಿಕ ಮುಷ್ಕರದಲ್ಲಿ ಸಾವನ್ನಪ್ಪಿದ ಕಾರ್ಮಿಕರ 40ನೇ ವರ್ಷದ ಹುತಾತ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ರೈತ, ಕೂಲಿ ಕಾರ್ಮಿಕರ ಚಳವಳಿಯಲ್ಲಿ ಸಿಐಟಿಯು ಪ್ರಮುಖ ಪಾತ್ರವಹಿಸಿದ್ದು, ರಾಜ್ಯ ಸರ್ಕಾರ ಕೂಡಲೇ ಎಲ್ಲಾ ವರ್ಗದ ಅಕುಶಲ ಕಾರ್ಮಿಕರ ಕನಿಷ್ಠ ವೇತನವನ್ನು ಮಾಸಿಕ ₹26 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಇತ್ತೀಚಿನ ದಿನಗಳಲ್ಲಿ ಮಾನವ ಹಕ್ಕುಗಳ ಮೇಲಿನ ದಾಳಿ ನಿರಂತರವಾಗಿ ನಡೆಯುತ್ತಿದೆ. ಕೆಲವು ಗೂಂಡಾ ವರ್ತನೆಯ ಸಂಸ್ಥೆಗಳು ದೇಶದ ಅಲ್ಪಸಂಖ್ಯಾತರು, ದಲಿತರನ್ನೇ ಗುರಿಯಾಗಿಸಿಕೊಂಡು, ಸಣ್ಣಪುಟ್ಟ ಕಾರಣಗಳಿಗೆ ನಿರಂತರ ಹಲ್ಲೆ, ದೌರ್ಜನ್ಯ ನಡೆಸುತ್ತಿವೆ. ದೇಶ ಉಳಿಸಿ, ಜನತೆಯನ್ನು ಉಳಿಸಿ ಎಂಬ ಘೋಷಣೆಯೊಂದಿಗೆ ನಿರಂತರ ಹೋರಾಟಕ್ಕೆ ಸಿಐಟಿಯು ಮುಂದಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ರೈತರ ಹೋರಾಟಕ್ಕೆ ಮಣಿದು ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದೆ. ಆದರೆ, ರಾಜ್ಯ ಸರ್ಕಾರ ಜಾರಿಗೆ ತಂದ ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಮತಾಂತರ ನಿಷೇಧ ಕಾಯ್ದೆಗಳನ್ನು ಹಿಂಪಡೆಯುತ್ತಿಲ್ಲ. ಜೊತೆಗೆ ಎಲ್‍ಐಸಿ, ರೈಲ್ವೆ, ಬ್ಯಾಂಕಿಂಗ್ ಕ್ಷೇತ್ರವನ್ನು ಖಾಸಗಿಯವರ ಕೈಗಿಟ್ಟು, ಅಲ್ಲಿ ದುಡಿಯುತ್ತಿದ್ದ ಕಾರ್ಮಿಕರನ್ನು ಬೀದಿ ಪಾಲು ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಇಂತಹ ಜನವಿರೋಧಿ, ದೇಶ ವಿರೋಧಿ ನೀತಿಗಳ ವಿರುದ್ಧ ‘ದೇಶ ಉಳಿಸಿ, ಜನರನ್ನು ಉಳಿಸಿ’ ಎಂಬ ಘೋಷವಾಕ್ಯದೊಂದಿಗೆ ಜ. 31ರವರೆಗೆ ಜಿಲ್ಲೆಯಾದ್ಯಂತ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿ ಕರಪತ್ರ ನೀಡಲಾಗುವುದು. ಆ ಮೂಲಕ ಫೆ. 22-23ರಂದು ನಡೆಯುವ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸಿಐಟಿಯು ಮುಖಂಡರಾದ ಎನ್.ಕೆ. ಸುಬ್ರಮಣ್ಯ, ಷಣ್ಮುಗಪ್ಪ, ಖಲೀಲ್, ಜಬೀನಾ, ಮಂಗಳಾ, ರಂಗಧಾಮಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT