ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿಕ್ಷುಕರಂತೆ ಪಟ್ಟು ಹಿಡಿದು ಮತ ಕೇಳಿ: ಬಿಜೆಪಿ ಕಾರ್ಯಕರ್ತರಿಗೆ ಮಾಧುಸ್ವಾಮಿ ಸಲಹೆ

ಮುಖದ ಮೇಲೆ ಮತ ಬಿಸಾಕುವವರೆಗೂ ಬಿಡಬಾರದು: ಕಾರ್ಯಕರ್ತರಿಗೆ ಮಾಧುಸ್ವಾಮಿ ಸಲಹೆ
Last Updated 6 ಜನವರಿ 2023, 7:30 IST
ಅಕ್ಷರ ಗಾತ್ರ

ತುಮಕೂರು: ‘ನಮ್ಮ ಮುಖದ ಮೇಲೆ ಜನರು ವೋಟು ಬಿಸಾಕುವವರೆಗೂ ಬಿಡಬಾರದು. ಆ ರೀತಿ ಬಿಜೆಪಿ ಕಾರ್ಯಕರ್ತರು ಕೆಲಸ ಮಾಡಬೇಕು’ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಕರೆ ನೀಡಿದರು.

ನಗರದಲ್ಲಿ ಗುರುವಾರ ಬಿಜೆಪಿ ಹಮ್ಮಿಕೊಂಡಿದ್ದ ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಪದಾಧಿಕಾರಿಗಳ ಸಭೆಯಲ್ಲಿ
ಮಾತನಾಡಿದರು.

ಭಿಕ್ಷೆ ಬೇಡುವ ಭಿಕ್ಷುಕರಂತಾಗಬೇಕು. ತಿರುಪೆ ಬೇಡುವವನಿಗೆ ಏನೂ ಕೊಡದಿದ್ದರೆ ‘ಏನಾದರೂ ಕೊಡಿ, ಎಷ್ಟಾದರೂ ಕೊಡಿ’ ಎಂದು ಗೋಗರೆಯುತ್ತಾನೆ. ಕೊನೆಗೆ ತೊಲಗಿದರೆ ಸಾಕೆಂದು ಏನಾದರೂ ಕೊಟ್ಟು ಕಳುಹಿಸುತ್ತೇವೆ. ಅದೇ ರೀತಿ ಜನರ ಮನೆ ಬಾಗಿಲಿನಲ್ಲಿ ನಿಂತು ಮತ ಭಿಕ್ಷೆ ಕೇಳಬೇಕು. ಕೊಡದಿದ್ದರೆ ಬಿಡಬಾರದು. ಐದರಲ್ಲಿ ಕೊನೆಗೆ ಎರಡು–ಮೂರಾದರೂ ವೋಟು ಬರುವಂತೆ ನೋಡಿಕೊಳ್ಳಬೇಕು. ಪಕ್ಷದ ಪರವಾದ ಅಲೆ ಸೃಷ್ಟಿಸಿದರೆ ಗೆಲುವು ಸುಲಭವಾಗುತ್ತದೆ ಎಂದು ಸಲಹೆ
ಮಾಡಿದರು.

ರಾಜ್ಯದಲ್ಲಿ ಬಿಜೆಪಿ ಮುಗಿದೇ ಹೋಯಿತು ಎಂಬ ಸ್ಥಿತಿ ನಿರ್ಮಾಣ ಮಾಡಲು ಕೆಲವರು ಹೊರಟಿದ್ದಾರೆ. ಅಪಾಪೋಲಿಗಳು ಹೇಳುತ್ತಿರುವ ಮಾತಿಗೆ ತಲೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ಸಂಪನ್ಮೂಲಕ್ರೋಡೀಕರಿಸುವ ರಾಜ್ಯವನ್ನಾಗಿ ಮಾಡಿಕೊಳ್ಳುತ್ತಾರೆ. ಮುಂದೆ ರಾಜ್ಯವನ್ನು ಒತ್ತೆ ಇಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಅದಕ್ಕೆ ಈಗಿನಿಂದಲೇ ಎಚ್ಚರ ವಹಿಸಬೇಕು
ಎಂದರು.

ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ ಆ ಪಕ್ಷದ ನಾಯಕರು ಹೇಳುತ್ತಿದ್ದಾರೆ. 75 ವರ್ಷಗಳ ಕಾಲ ಜನರನ್ನು ಭಿಕ್ಷುಕರನ್ನಾಗಿ ಮಾಡಿಕೊಂಡು, ಈಗ ಅಕ್ಕಿ ಕೊಡುವುದಾಗಿ ಹೇಳುತ್ತಿದ್ದಾರೆ. ಹಾಗಾದರೆ ಇಷ್ಟು ವರ್ಷ ಏನು ಮಾಡಿದರು’ ಎಂದು ಪ್ರಶ್ನಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ, ‘ಪ್ರಧಾನಿಯಾಗಿದ್ದ ಸಮಯದಲ್ಲಿ ರಾಜೀವ್‌ ಗಾಂಧಿ ಅವರು ಬಿಜೆಪಿಯೂ ಒಂದು ರಾಜಕೀಯ ಪಕ್ಷವೇ ಎಂದು ಕೇಳಿದ್ದರು. ಈಗ ನಾವು ಕಾಂಗ್ರೆಸ್ ಒಂದು ಪಕ್ಷವೇ ಎಂದು ಕೇಳುವಷ್ಟರ ಮಟ್ಟಿಗೆ ಬೆಳೆದಿದ್ದೇವೆ’ ಎಂದು
ಹೇಳಿದರು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್, ‘ಹಿಂದೂ ಸಮಾಜವನ್ನು ಒಡೆದು ಯಾರೂ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಅಡಳಿತ ವಿರೋಧಿ ಅಲೆ ಎದುರಾದರೂ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ಕಾರ್ಯಕರ್ತರು ವೃತ್ತಿನಿರತ ರಾಜಕಾರಣಿಗಳಾಗದೆ ಜನರನ್ನು ತಲುಪುವ ಕೆಲಸ ಮಾಡಬೇಕು’ ಎಂದು ಮನವಿ ಮಾಡಿದರು.

ಮುಂದಿನ ವಿಧಾನಸಭಾ ಚುನಾವಣೆಗೆ ಹಳೆ ಮೈಸೂರು ಭಾಗವನ್ನು ಈ ಬಾರಿ ಪ್ರಮುಖವಾಗಿ ಕೇಂದ್ರೀಕರಿಸಿದ್ದೇವೆ. ಮಂಡ್ಯಕ್ಕೆ ಗೃಹ ಸಚಿವ ಅಮಿತ್ ಶಾ ಬಂದು ಹೋದ ನಂತರ ವಾತಾವರಣ ಬದಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.

ಜೋಡೊ ಯಾತ್ರೆ, ಪಂಚರತ್ನ ರಥಯಾತ್ರೆಗಳು ನಡೆದವು. ಇದರಿಂದ ಏನೂ ಆಗಲಿಲ್ಲ. ಆದರೆ ಅಮಿತ್ ಶಾ ಬಂದು ಹೋದ ನಂತರ ಬದಲಾವಣೆಯಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವುದೇ ನಮ್ಮ ಗುರಿಯಾಗಿದೆ ಎಂದರು.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಮಸಾಲೆ ಜಯರಾಮ್, ಡಾ.ಸಿ.ಎಂ.ರಾಜೇಶ್‌ಗೌಡ, ಚಿದಾನಂದಗೌಡ, ಜಿಲ್ಲಾ ಘಟಕದ ಅಧ್ಯಕ್ಷರಾದ ಎಚ್.ಎಸ್.ರವಿಶಂಕರ್, ಬಿ.ಕೆ.ಮಂಜುನಾಥ್, ಮುಖಂಡರಾದ ಅಶ್ವತ್ಥನಾರಾಯಣ, ಎಂ.ಬಿ.ನಂದೀಶ್, ಬಿ.ಸುರೇಶ್‌ಗೌಡ, ಎಸ್.ಪಿ.ಮುದ್ದಹನುಮೇಗೌಡ, ಸೊಗಡು ಶಿವಣ್ಣ, ಗಂಗಹನುಮಯ್ಯ, ಲಕ್ಷ್ಮಿನಾರಾಯಣ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT