ಮಂಗಳವಾರ, ಏಪ್ರಿಲ್ 20, 2021
24 °C
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಕೆಲಸಗಳಿಗೆ ಇಲ್ಲ ವೇಗ

ನನೆಗುದಿಗೆ ಬಿದ್ದಿವೆ 538 ಕಾಮಗಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ ಪ್ರಾರಂಭವಾಗಬೇಕಾದ 538 ಕಾಮಗಾರಿಗಳು ಅಧಿಕಾರಿಗಳ ನಿರ್ಲಕ್ಷ್ಯ, ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಹಾಗೂ ಜಮೀನಿನ ತಕರಾರಿನ ಕಾರಣಕ್ಕಾಗಿ ನನೆಗುದಿಗೆ ಬಿದ್ದಿವೆ.

ಈ ಯೋಜನೆಯಡಿ ಹತ್ತು ವರ್ಷಗಳ ಅವಧಿಯಲ್ಲಿ ರೂಪಿಸಿರುವ ಮೂಲಸೌಕರ್ಯ ಒದಗಿಸುವ ಕಡಿಮೆ ಮೊತ್ತದ ಕಾಮಗಾರಿಗಳು ಸಹ ಸಕಾಲಕ್ಕೆ ಪೂರ್ಣಗೊಳ್ಳುತ್ತಿಲ್ಲ. ಇದರಿಂದ ಗ್ರಾಮಾಂತರ ಪ್ರದೇಶಗಳಲ್ಲಿನ ಜನರಿಗೆ ಹೆಚ್ಚಿನ ಅನಾನುಕೂಲತೆ ಆಗುತ್ತಿದೆ. ಕಾಮಗಾರಿಗಳು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳ್ಳದೆ ಅನುದಾನದ ಕಂತುಗಳ ಬಿಡುಗಡೆಯಲ್ಲಿಯೂ ವಿಳಂಬ ಆಗುತ್ತಿದೆ.

ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಾಗ ಸ್ಥಳೀಯರೇ ಜಾಗದ ಕುರಿತು ತಕರಾರು ತೆಗೆಯುತ್ತಾರೆ. ನಿರ್ದಿಷ್ಟ ಸೌಕರ್ಯವನ್ನು ಇಲ್ಲಿ ಯಾಕೆ ಒದಗಿಸುತ್ತಿದ್ದಿರಿ, ಬೇರೆ ಜಾಗದಲ್ಲಿ ಇದರ ಅಗತ್ಯತೆ ಇದೆ. ಅಲ್ಲಿಯೇ ಸೌಕರ್ಯವನ್ನು ಒದಗಿಸಲು ಒತ್ತಾಯಿಸುತ್ತಾರೆ. ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಗುರುತಿಸಲು ನಾವು ಹೈರಾಣಾಗಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಆಗಾಗ ಬರುವ ಚುನಾವಣೆಗಳ ನಿಂತಿ ಸಂಹಿತೆಗಳು ಅಭಿವೃದ್ಧಿ ಚಟುವಟಿಕೆಗಳಿಗೆ ಅಡ್ಡಗಾಲುತ್ತಿವೆ. ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿನ ಕಾಮಗಾರಿಗಳನ್ನು ಮೇಲ್ವಿಚಾರಣೆ ಮಾಡಲು ಸಿಬ್ಬಂದಿಗಳ ಕೊರತೆಯೂ ಇಲಾಖೆಗಳಲ್ಲಿ ಇದೆ. ಆದ್ದರಿಂದ ಕಾಮಗಾರಿಗಳು ನನೆಗುದಿಗೆ ಬೀಳುತ್ತಿವೆ ಎಂದು ಅವರು ತಿಳಿಸಿದರು.

ಏನಿದು ಪ್ರದೇಶಾಭಿವೃದ್ಧಿ ಯೋಜನೆ? : ಶಾಸಕರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದಲ್ಲಿ ಮೂಲಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲು ‘ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ’ಯಡಿ ಪ್ರತಿವರ್ಷ ₹ 2 ಕೋಟಿ ಅನುದಾನ ಬಿಡುಗಡೆ ಆಗುತ್ತದೆ.

ಅನುದಾನದಲ್ಲಿ ಸಿ.ಸಿ.ರಸ್ತೆ, ಚರಂಡಿಗಳ ನಿರ್ಮಾಣ, ಶಾಲೆ ಕೊಠಡಿ ಹಾಗೂ ಆವರಣ ಗೋಡೆ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಸಮುದಾಯ ಭವನ ನಿರ್ಮಾಣ, ದೇವಸ್ಥಾನಗಳ ಆವರಣದಲ್ಲಿ ಸೌಕರ್ಯ ಕಲ್ಪಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ. ಈ ಕಾಮಗಾರಿಗಳು ಪಂಚಾಯತ್‌ ರಾಜ್‌ನ ಎಂಜಿನಿಯರಿಂಗ್‌ ವಿಭಾಗ, ಲೋಕೋಪಯೋಗಿ ಇಲಾಖೆ, ನಿರ್ಮಿತಿ ಕೇಂದ್ರ, ಮಹಾನಗರ ಪಾಲಿಕೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ(ಕೆಆರ್‌ಐಡಿಎಲ್‌), ಗ್ರಾಮೀಣ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಅವರ ಮೇಲುಸ್ತುವಾರಿಯಲ್ಲಿ ನಡೆಸಲಾಗುತ್ತದೆ.

ನಿರ್ದಿಷ್ಟ ಕಾಮಗಾರಿಯ ಕುರಿತು ಶಾಸಕರು ಆಯಾ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುತ್ತಾರೆ. ಬಳಿಕ ಸ್ಥಳ ಪರಿಶೀಲನೆ ನಡೆಸಲಾಗುತ್ತದೆ. ಅಂದಾಜು ಪಟ್ಟಿ ಸಿದ್ಧಪಡಿಸಲಾಗುತ್ತದೆ. ಜಿಲ್ಲಾಧಿಕಾರಿಯಿಂದ ಅನುಮೋದನೆ ಸಿಕ್ಕ ಬಳಿಕ, ಟೆಂಡರ್‌ ಕರೆದು ಕಾಮಗಾರಿ ಆರಂಭಿಸಲಾಗುತ್ತದೆ.

‘ಏಳು ದಿನಗಳಲ್ಲಿ ವರದಿ ಕಳುಹಿಸಿ’

ಕಾಮಗಾರಿಗಳ ವಿಳಂಬದ ಕುರಿತು ಇತ್ತೀಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪ್ರಸ್ತಾವಿತ ಕಾಮಗಾರಿ ಆರಂಭವಾಗದಿದ್ದರೆ, ನಿರ್ದಿಷ್ಟ ಕಾರಣಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿ ಒಂದು ವಾರದ ಒಳಗೆ ಜಿಲ್ಲಾಧಿಕಾರಿಯ ಕಚೇರಿಗೆ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದ್ದರು.

ಅಂಕಿ–ಅಂಶ

7,788

2008ರಿಂದ 2019ರ ವರೆಗೆ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜುರಾದ ಒಟ್ಟು ಕಾಮಗಾರಿಗಳು

6,145

ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಪೂರ್ಣಗೊಂಡ ಕಾಮಗಾರಿಗಳು

1,105

ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಪ್ರಗತಿಯಲ್ಲಿ ಇರುವ ಕಾಮಗಾರಿಗಳು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು