ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಲ್ಲರಹಟ್ಟಿಯಲ್ಲಿ ಶಾಸಕರ ವಾಸ್ತವ್ಯ

Last Updated 16 ಅಕ್ಟೋಬರ್ 2021, 11:09 IST
ಅಕ್ಷರ ಗಾತ್ರ

ಕುಣಿಗಲ್: ಗ್ರಾಮೀಣ ಪ್ರದೇಶದ ಜನರಿಗೆ ಸರ್ಕಾರಿ ಸೌಲಭ್ಯಗಳ ಅರಿವು ಮೂಡಿಸಿ, ಸಕಾಲದಲ್ಲಿ ದಾಖಲೆಗಳನ್ನು ಪಡೆದು, ಸೌಲಭ್ಯಗಳನ್ನು ವಿತರಿಸುವಂತೆ ಶಾಸಕ ಡಾ.ರಂಗನಾಥ್ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನ ನಡೆಮಾವಿನಪುರ ಗೊಲ್ಲರಹಟ್ಟಿಯಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯ ಮತ್ತು ಶಾಸಕರ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲ್ಲೂಕಿನಲ್ಲಿ 20 ಗೊಲ್ಲರಹಟ್ಟಿಗಳಿದ್ದು, ವಿದ್ಯಾವಂತರಲ್ಲದಿದ್ದರೂ ಪ್ರಜ್ಞಾವಂತರಿದ್ದಾರೆ. ಕಂದಾಚಾರಗಳಿಂದ ಹೊರಬರಲು ಜನಜಾಗೃತಿ ಕಾರ್ಯಕ್ರಮಗಳನ್ನು ಮತ್ತು ಮಹಿಳೆಯರಿಗಾಗಿ ವೈದ್ಯಕೀಯ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಾಗಬೇಕು ಎಂದರು.

ಗೊಲ್ಲರಹಟ್ಟಿಗಳಲ್ಲಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಾವತಿಗೆ ವ್ಯವಸ್ಥೆ ಮಾಡಲು ಸಮಾಜ ಕಲ್ಯಾಣ ಮತ್ತು ಬಿಸಿಎಂ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಪಡಿತರ ವಿತರಣೆಯಲ್ಲಿ ಲೋಪಗಳಿದ್ದು, ಸಕಾಲದಲ್ಲಿ ಹಂಚಿಕೆ ಮಾಡದ, ಕಡಿಮೆ ತೂಕದ ವಿತರಣೆ ಮತ್ತು ಹಣ ಪಡೆಯುತ್ತಿರುವ ಬಗ್ಗೆ ಗ್ರಾಮಸ್ಥರಿಂದ ದೂರು ಬಂದ ಕಾರಣ ವ್ಯವಸ್ಥೆ ಸರಿಪಡಿಸುವಂತೆ ಆಹಾರ ಶಿರಸ್ತೇದಾರ್ ಮಲ್ಲಿಕಾರ್ಜುನ ಅವರಿಗೆ ಸೂಚಿಸದರು.

ಅವ್ಯವಹಾರ ತಡೆಗಟ್ಟಲು ಸಿಸಿ ಟಿ.ವಿ ಕ್ಯಾಮೆರಾ ಅಳವಡಿಸಲು ಸೂಚನೆ ನೀಡಿದರು.

ಪೌತಿ ಖಾತೆ ಮಾಡಲು ತಹಶೀಲ್ದಾರ್ ಸಿದ್ಧವಿದ್ದರೂ, ಕೆಳ ಹಂತದ ಸಿಬ್ಬಂದಿಯ ಧನದಾಹದಿಂದಾಗಿ ಪೌತಿ ಖಾತೆಗಳಿಗೆ ವಿಳಂಬವಾಗಿದೆ ಎಂದರು.

ತಾಲ್ಲೂಕಿನಲ್ಲಿ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರಾರಂಭದಲ್ಲಿಯೇ ಎಚ್ಚರಿಕೆವಹಿಸಿ ಮಾತ್ರೆ ತೆಗೆದುಕೊಳ್ಳದಿದ್ದರೆ ಜೀವನವಿಡೀ ಅನಾರೋಗ್ಯದಿಂದ ಬಳಲಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗ್ರಾಮಸ್ಥರು ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸುವಂತೆ, ಸ್ಮಶಾನ, ಪಶು ಆಸ್ಪತ್ರೆ, ಶುದ್ಧ ಕುಡಿಯುವ ನೀರಿಗಾಗಿ ಮನವಿ ಮಾಡಿದರು.

ತಹಶೀಲ್ದಾರ್ ಮಹಬಲೇಶ್ವರ್ ಮಾತನಾಡಿ, ಗ್ರಾಮ ವಾಸ್ತವ್ಯದಿಂದಾಗಿ ಗ್ರಾಮೀಣ ಪ್ರದೇಶದ ಸಮಸ್ಯೆಗಳನ್ನು ಅರಿಯಲು ಸಾಧ್ಯವಾಗಿದೆ. ನಡೆಮಾವಿನಪುರ ಗೊಲ್ಲರಹಟ್ಟಿಯಲ್ಲಿ 20 ಪಿಂಚಣಿಗಳಿಗೆ ಶನಿವಾರ ಮಂಜೂರಾತಿ ನೀಡಲಾಗಿದೆ. ಪೌತಿ ಖಾತೆಗಾಗಿ 41 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದರು.

ಗ್ರಾಮ ವಾಸ್ತವ್ಯ ಕಾರ್ಯಕ್ರಮ ಶುಕ್ರವಾರ ರಾತ್ರಿ ಪ್ರಾರಂಭವಾಗಿದ್ದು, ಶಾಸಕ ಡಾ.ರಂಗನಾಥ್ ಮತ್ತು ತಹಶೀಲ್ದಾರ್ ಮಹಬಲೇಶ್ವರ್ ಅವರನ್ನು ಕಾಡುಗೊಲ್ಲರ ಸಂಪ್ರದಾಯದಂತೆ ಕರಿಕಂಬಳಿ ಹೊದ್ದಿಸಿ ಹಟ್ಟಿಯ ನಿವಾಸಿಗಳು ಸ್ವಾಗತಿಸಿದರು. ಕಾಡುಗೊಲ್ಲರ ಸಂಸ್ಕೃತಿ ಬಿಂಬಿಸುವ ಕಲೆಗಳನ್ನು ಪ್ರದರ್ಶಿಸಿ, ಕಾಡುಗೊಲ್ಲರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧ, ಪಿಡಿಒ ಹರೀಂದ್ರ ಗೋಪಾಲ್, ಕಾಡುಗೊಲ್ಲರ ಅಸ್ಮಿತೆ ಹೋರಾಟ ಸಮಿತಿಯ ಜಿ.ಕೆ.ನಾಗಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT