ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಶಾಸಕರ ಆರೋಪ ಶುದ್ಧ ಸುಳ್ಳು : ಡಿ.ಸಿ.ಗೌರಿಶಂಕರ್

ಆರೋಪ ಸಾಬೀತುಪಡಿಸದಿದ್ದರೆ ಮಾನನಷ್ಟ ಮೊಕದ್ದಮೆ, ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಚ್ಚರಿಕೆ
Last Updated 25 ಆಗಸ್ಟ್ 2018, 14:35 IST
ಅಕ್ಷರ ಗಾತ್ರ

ತುಮಕೂರು: ‘ನಾನು ₹ 100 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಅಡ್ಡಗಾಲು ಹಾಕಿದ್ದೇನೆ ಎಂಬ ಆರೋಪ ಶುದ್ಧ ಸುಳ್ಳು. ನಮ್ಮ ಕ್ಷೇತ್ರದಲ್ಲಿ ₹ 100 ಕೋಟಿ ಅನುದಾನವೇ ಇಲ್ಲ. ಈ ಬಗ್ಗೆ ಆರೋಪ ಮಾಡಿರುವ ಮಾಜಿ ಶಾಸಕ ಬಿ.ಸುರೇಶ್‌ಗೌಡ ಸಾಬೀತು ಪಡಿಸಬೇಕು. ಇಲ್ಲದೇ ಇದ್ದರೆ ಮಾನ ನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದು ಶಾಸಕ ಡಿ.ಸಿ.ಗೌರಿಶಂಕರ್ ಎಚ್ಚರಿಕೆ ನೀಡಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘ ನಾನು ಬಿಜೆಪಿ ಕಾರ್ಯಕರ್ತರ ಮೇಲೆ ವಿನಾಕಾರಣ ಪ್ರಕರಣ ಹಾಕಿಸಿದ್ದೇನೆ ಎಂಬ ಆರೋಪದಲ್ಲೂ ಹುರುಳಿಲ್ಲ. ಬಿದರೆಕಟ್ಟೆಯ ಬಳಿ ವಿಶ್ವವಿದ್ಯಾನಿಲಯ ಜಾಗದಲ್ಲಿ ನೀಲಗಿರಿ ಮರಗಳನ್ನು ಕದ್ದು ಮಾರಾಟ ಮಾಡುತ್ತಿದ್ದವರ ಮೇಲೆ ವಿಶ್ವವಿದ್ಯಾನಿಲಯದವರೇ ದೂರು ನೀಡಿದ್ದಾರೆ. ವಿವಿ ಜಾಗದಲ್ಲಿನ ಮಣ್ಣನ್ನು ಗುತ್ತಿಗೆದಾರರು ತೆಗೆದಿದ್ದಾರೆ. ಅದರ ವಿರುದ್ಧವೂ ವಿವಿ ದೂರು ನೀಡಿದೆ. ಇಂತಹ ವಿಷಯದಲ್ಲಿ ಪ್ರಕರಣಗಳನ್ನು ದಾಖಲು ಮಾಡಬಾರದೇ’ ಎಂದು ಹೇಳಿದರು.

‘ಯಾವುದೇ ದಾಖಲೆಗಳು ಇಲ್ಲದೇ ಭ್ರಷ್ಟಾಚಾರ, ಕಮಿಷನ್ ದಂಧೆ ಆರೋಪ ಮಾಡಿ ಮಾಜಿ ಶಾಸಕರು ನನ್ನ ತೇಜೋವಧೆ ಮಾಡಲು ಮುಂದಾಗಿದ್ದಾರೆ. ಇದರಿಂದ ನನ್ನ ಹಕ್ಕುಚ್ಯುತಿಯಾಗಿದೆ. ಮಾಜಿ ಶಾಸಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದರು.

ಯಾವುದೇ ಒಬ್ಬ ವ್ಯಕ್ತಿಯ ವಿರುದ್ಧ ಆರೋಪ ಮಾಡುವಾಗ ಸಮರ್ಪಕ ದಾಖಲೆ ಇರಬೇಕು ಎಂಬ ಕನಿಷ್ಠ ಪ್ರಜ್ಞೆಯೂ ಮಾಜಿ ಶಾಸಕರಿಗೆ ಇಲ್ಲ. ಸೋತಿರುವುದರಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡವರ ರೀತಿ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

‘ನಾನು ಶಾಸಕನಾಗಿ ಇನ್ನೂ 3 ತಿಂಗಳೂ ಆಗಿಲ್ಲ. ಈಗಿನ್ನು ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದ್ದೇನೆ. ಅಷ್ಟರಲ್ಲಿಯೇ ಭ್ರಷ್ಟಾಚಾರ, ಕಮಿಷನ್ ದಂಧೆ ಆರೋಪ ಮಾಡಿದ್ದಾರೆ. ನಾನು ಇಂತಹ ಕೆಲಸ ಮಾಡಿದ್ದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಇದರ ಬಗ್ಗೆ ತನಿಖೆ ನಡೆಸಲು ಮಾಜಿ ಶಾಸಕರೇ ಸಿಬಿಐಗೆ ವಹಿಸಲಿ. ನನ್ನದೇನೂ ಅಭ್ಯಂತರವಿಲ್ಲ. ಇದರಲ್ಲಿ ಖಂಡಿತ ನನಗೆ ನ್ಯಾಯ ಸಿಗುತ್ತದೆ ಎಂಬ ನನಗೆ ನಂಬಿಗೆ ಇದೆ. ಆರೋಪ ಸಾಬೀತಾದರೆ ನಾನು ನೇಣು ಹಾಕಿಕೊಳ್ಳುತ್ತೇನೆ. ಇಲ್ಲದೇ ಇದ್ದರೆ ಅವರು ಹಾಕಿಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದರು.

ಒಬ್ಬರೇ ವರ್ಗಾವಣೆ :ನಾನು ಶಾಸಕನಾದ ಮೇಲೆ ಒಬ್ಬ ಸಬ್ ಇನ್‌ಸ್ಪೆಕ್ಟರ್ ವರ್ಗಾವಣೆಯಾಗಿದ್ದು ಬಿಟ್ಟರೆ ಬೇರೆ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಆಗಿಲ್ಲ. ಒಂದು ವರ್ಗಾವಣೆ ದಂಧೆ ನಡೆದಿದ್ದರೆ ಅದನ್ನೂ ದಾಖಲೆ ಸಮೇತ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ಜೆಡಿಎಸ್ ಮುಖಂಡರಾದ ವಿಜಯ್‌ಕುಮಾರ್, ವೈ.ಟಿ.ನಾಗರಾಜ್, ಬೆಳಗುಂಬ ವೆಂಕಟೇಶ್, ಹಿರೇಹಳ್ಳಿ ಮಹೇಶ್, ರುದ್ರೇಶ್, ಆಜಾದ್, ನಾರಾಯಣಪ್ಪ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT