ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ | ಶಿಥಿಲಾವಸ್ಥೆಯಲ್ಲಿ ನಾಗಲಮಡಿಕೆ ದೇಗುಲ

Published 15 ಜನವರಿ 2024, 6:29 IST
Last Updated 15 ಜನವರಿ 2024, 6:29 IST
ಅಕ್ಷರ ಗಾತ್ರ

ಪಾವಗಡ: ಅಂತ್ಯ ಸುಬ್ರಹ್ಮಣ್ಯೇಶ್ವರ ಕ್ಷೇತ್ರ ಎಂದೇ ಖ್ಯಾತಿ ಪಡೆದಿರುವ ತಾಲ್ಲೂಕಿನ ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ದೇಗುಲ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಮೂಲ ಸೌಕರ್ಯಗಳಿಲ್ಲದೆ ಭಕ್ತರು ಪರದಾಡುತ್ತಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ, ಆದಿ ಸುಬ್ರಹ್ಮಣ್ಯ, ಘಾಟಿ ಸುಬ್ರಹ್ಮಣ್ಯ ಕ್ಷೇತ್ರವನ್ನು ಮಧ್ಯ ಸುಬ್ರಹ್ಮಣ್ಯ, ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ಕ್ಷೇತ್ರವನ್ನು ಅಂತ್ಯ ಸುಬ್ರಹ್ಮಣ್ಯ ಎಂದು ಕರೆಯಲಾಗುತ್ತದೆ.

500 ವರ್ಷಗಳ ಇತಿಹಾಸ ಇರುವ ಇಲ್ಲಿನ ದೇಗುಲಕ್ಕೆ ಆಂಧ‍್ರ ಪ್ರದೇಶ, ತಮಿಳುನಾಡು, ಕೇರಳ, ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳ ಲಕ್ಷಾಂತರ ಭಕ್ತರು ವರ್ಷವಿಡೀ ಬರುತ್ತಾರೆ. ಸರ್ಪ ಸಂಸ್ಕಾರ, ಕಲ್ಯಾಣೋತ್ಸವ, ಆಶ್ಲೇಷ ಬಲಿ, ಶಾಂತಿ, ಅಭಿಷೇಕ, ನಾಗ ಪ್ರತಿಷ್ಠಾಪನೆಯನ್ನು ನಿರಂತರವಾಗಿ ಮಾಡಿಸುತ್ತಾರೆ..

ಮುಜರಾಯಿ ಇಲಾಖೆಯ ‘ಎ’ ಶ್ರೇಣಿ ದೇಗುಲವಾಗಿದ್ದರೂ ಕಟ್ಟಡ, ಶೌಚಾಲಯ, ವಸತಿ ಗೃಹ, ಕುಡಿಯುವ ನೀರು, ಸ್ವಚ್ಛತೆ ಮೂಲ ಸೌಕರ್ಯಗಳಿಲ್ಲದೆ ಸೊರಗುತ್ತಿದೆ.

ಉತ್ತರ ಪಿನಾಕಿನಿ ನದಿ ದಡದಲ್ಲಿ ದೇಗುಲವಿದ್ದರೂ ಕುಡಿಯುವ ನೀರು, ಶೌಚಾಲಯ, ಸ್ನಾನ ಇತ್ಯಾದಿ ನಿತ್ಯ ಕರ್ಮಗಳಿಗಾಗಿ ಪರದಾಡಬೇಕಿದೆ. ಮಹಿಳೆಯರ ಪಾಡು ಹೇಳತೀರದು. ಜಾತ್ರೆ, ಹಬ್ಬ, ವಿಶೇಷ ದಿನಗಳಂದು ಸಹಸ್ರಾರು ಸಂಖ್ಯೆಯಲ್ಲಿ ಬರುವ ಭಕ್ತರು ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ.

ಮಳೆ ಬಂದರೆ ದೇಗುಲ ಸಂಪೂರ್ಣವಾಗಿ ಸೋರುತ್ತದೆ. ಕಳೆದ ವರ್ಷ ಮಳೆ ಬಂದು ಅಡುಗೆ ಮಂಟಪದ ಗೋಡೆ ಬಿದ್ದುಹೋಗಿತ್ತು. ಭಕ್ತರು ಯಾರೂ ಇಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿರಲಿಲ್ಲ. ಮಳೆ ಬಂದರೆ ಮಳೆ ನೀರಿನಲ್ಲಿಯೇ ಅರ್ಚಕರು ಪೂಜೆ ನಡೆಸಬೇಕು. ಗೋಡೆ, ನೆಲದ ಮೇಲೆ ನೀರು ಹರಿದು ವಿದ್ಯುತ್ ಶಾರ್ಟ್‌ ಸರ್ಕೀಟ್‌ ಸಂಭವಿಸಿ ಸಾಕಷ್ಟು ಅನಾಹುತ ನಡೆದಿರುವ ನಿದರ್ಶನಗಳಿವೆ.

ಕೋಟ್ಯಂತರ ರೂಪಾಯಿ ಆದಾಯವಿದ್ದರೂ ಶಿಥಿಲವಾಗಿರುವ ದೇಗುಲದ ಜೀರ್ಣೋದ್ಧಾರ ಕೆಲಸವಾಗುತ್ತಿಲ್ಲ. ಕೋಟ್ಯಂತರ ರೂಪಾಯಿ ಖಾತೆಯಲ್ಲಿದ್ದರೂ ಬೀಳುವ ಹಂತದಲ್ಲಿರುವ ದೇಗುಲ ಕಟ್ಟಡಕ್ಕೆ ಮುಕ್ತಿ ಸಿಕ್ಕಿಲ್ಲ. ವಿವಿಧ ಸರ್ಕಾರಗಳು ಅಧಿಕಾರದಲ್ಲಿದ್ದಾಗ ಸಚಿವರು, ರಾಜ್ಯಮಟ್ಟದ ಅಧಿಕಾರಿಗಳು ದೇಗುಲದ ಸ್ಥಿತಿಯನ್ನು ನೋಡಿ ಕಟ್ಟಡ ಜೀರ್ಣೋದ್ಧಾರ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ದೇಗುಲದ ಒಂದೇ ಒಂದು ಸಮಸ್ಯೆಯೂ ಬಗೆಹರಿದಿಲ್ಲ.

2011ರಿಂದ ಈವರೆಗೆ ನಾಲ್ಕು ಬಾರಿ ಜೀರ್ಣೊದ್ಧಾರ ಕೆಲಸಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಕಾಮಗಾರಿ ನಡೆಸಲು ಅನುಮತಿ ನೀಡಿಲ್ಲ.

ಮುಜರಾಯಿ ಇಲಾಖೆ, ಸಚಿವರು, ಸರ್ಕಾರ, ದೇಗುಲದ ಹಣ ಬಳಸಿಕೊಳ್ಳದೆ ಸ್ವಂತ ಖರ್ಚಿನಿಂದ ಕಲ್ಲಿನಿಂದ ಸಂಪೂರ್ಣ ಕಟ್ಟಡ ಕಟ್ಟಿಸಲಾಗುವುದು, ₹25 ಕೋಟಿ ಅಂದಾಜು ಪಟ್ಟಿ ತಯಾರಿಸಿ ಕಾಮಗಾರಿಗೆ ಅನುಮತಿ ಕೊಡಿಸಿಕೊಡಿ ಎಂದು ಕೆಲ ದಾನಿಗಳು ಮನವಿ ಸಲ್ಲಿಸಿದ್ದಾರೆ. ಆದರೆ ಈವರೆಗೆ ಅನುಮತಿ ನೀಡಿಲ್ಲ ಎನ್ನುತ್ತಾರೆ.

ದೇಗುಲದ ಸಮೀಪದ ಯಾತ್ರಿ ನಿವಾಸ, ವಸತಿ ಗೃಹ ಸ್ವಚ್ಛತೆ, ನಿರ್ವಹಣೆ ಇಲ್ಲದೆ ಪಾಳು ಕೊಂಪೆಯಂತಾಗಿದೆ. ಹಾಸಿಗೆಗಳು ಹಾಳಾಗಿವೆ. ಶೌಚಾಲಯಗಳು ದುರ್ನಾತ ಬೀರುತ್ತಿವೆ. ಕೆಲವೇ ವರ್ಷಗಳ ಕಟ್ಟಡ ಸಮರ್ಪಕ ಮೇಲ್ವಿಚಾರಣೆ ಇಲ್ಲದೆ ಶಿಥಿಲಾವಸ್ಥೆ ತಲುಪಿದೆ.

ದೇಗುಲದ ಬಲ ಭಾಗದಲ್ಲಿ ಉತ್ತರ ಪಿನಾಕಿನಿ ನದಿಗೆ ಹೋಗುವ ಹಾದಿಯಲ್ಲಿ ₹1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 16 ಕೊಠಡಿ, ಊಟದ ಕೊಠಡಿ ಇರುವ ವಸತಿ ಗೃಹ ಉದ್ಘಾಟನೆಯಾಗಿ ಏಳು ವರ್ಷ ಕಳೆದ ನಂತರ ಕೆಲ ತಿಂಗಳಿನಿಂದ ಭಕ್ತರ ಬಳಕೆಗೆ ನೀಡಲಾಗಿದೆ. ಇಲ್ಲಿಯೂ ಆವರಣ ಗೋಡೆ ನಿರ್ಮಿಸದ ಕಾರಣ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ನೀರು ಸಂಗ್ರಹಣಾ ತೊಟ್ಟಿಗೆ ಮುಚ್ಚಳ ಅಳವಡಿಸದಿರುವುದು ಅನಾಹುತಗಳಿಗೆ ಆಹ್ವಾನ ನೀಡುವಂತಿದೆ. ಪೀಠೋಪಕರಣ, ಸ್ವಚ್ಛತೆ ಇಲ್ಲದ ಕಾರಣ ಸವಲತ್ತು ಹೊರತಾಗಿಯೂ ಭಕ್ತರು ಅನಿವಾರ್ಯವಾಗಿ ಉಳಿದುಕೊಳ್ಳಬೇಕಿದೆ.

ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತರಿಗೆ ಬೆರಳೆಣಿಕ ವಸತಿ ಗೃಹಗಳು ಸಾಕಾಗುವುದಿಲ್ಲ. ಹೀಗಾಗಿ ಪಟ್ಟಣದ ವಸತಿ ಗೃಹಗಳಲ್ಲಿ ಉಳಿದುಕೊಳ್ಳಬೇಕಿದೆ. ಕ್ಷೇತ್ರದಲ್ಲಿ ಉಳಿದುಕೊಳ್ಳಬೇಕು ಎಂಬ ಭಕ್ತರ ಹರಕೆ ಈಡೇರುತ್ತಿಲ್ಲ.

ಇರುವ ಶೌಚಾಲಯಗಳು ಸಾಕಾಗುತ್ತಿಲ್ಲ. ಹೀಗಾಗಿ ಉತ್ತರ ಪಿನಾಕಿನಿ ನದಿ ದಡದಲ್ಲಿ ಸ್ನಾನಗೃಹ, ಶೌಚಾಲಯ ಸಂಕೀರ್ಣ ನಿರ್ಮಿಸಿದಲ್ಲಿ ಭಕ್ತರಿಗೆ ಅನುಕೂಲವಾಗುತ್ತದೆ ಎನ್ನುವುದು ಭಕ್ತರ ಆಶಯ.

ದೇಗುಲದ ಸುತ್ತಲಿನ ಪ್ರದೇಶದಲ್ಲಿ ಅನಧಿಕೃತವಾಗಿ ಉದ್ಯಾನ ಸೇರಿದಂತೆ ವಿವಿಧ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ದೇಗುಲದ ಅಭಿವೃದ್ಧಿ ಕಾಮಗಾರಿಗಳಿಗೆ ಸ್ಥಳ ಇಲ್ಲದಂತಾಗುವ ಸಾಧ್ಯತೆ ಇದೆ ಎನ್ನುವುದು ಭಕ್ತರ ಆರೋಪ.

ಹರಕೆ ತೀರಿಸಲು ಅವಕಾಶವಿರಲಿ

ದೇಗುಲದಲ್ಲಿ ವಿವಿಧ ಹರಕೆ ಈಡೇರಿಸಲು ಭಕ್ತರಿಗೆ ಇಲಾಖೆ ಅವಕಾಶ ನೀಡಬೇಕು. ಕುಕ್ಕೆ ಸುಬ್ರಹ್ಮಣ್ಯೇಶ್ವರ ದೇಗುಲದಲ್ಲಿ ಹಲವು ವರ್ಷಗಳಿಂದ ಎಡೆ ಸ್ನಾನಕ್ಕೆ ಅವಕಾಶ ನೀಡಲಾಗಿದೆ. ನಾಗಲಮಡಿಕೆಯಲ್ಲಿಯೂ ಎಡೆ ಸ್ನಾನಕ್ಕೆ ಅವಕಾಶ ನೀಡಬೇಕು - ಎನ್.ಆರ್. ಅಶ್ವತ್ಥಕುಮಾರ್‌, ಆರ್ಯ ವೈಶ್ಯ ಸಂಘದ ಅಧ್ಯಕ್ಷ

ಪ್ರವಾಸೋದ್ಯಮ ಕ್ಷೇತ್ರವಾಗಲಿ

ವಿವಿಧೆಡೆಯಿಂದ ಬರುವ ಭಕ್ತರಿಗೆ ಕುಡಿಯುವ ನೀರು, ವಸತಿ ಗೃಹ, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಇದೆ. ಸರ್ಕಾರ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕು. ಉತ್ತರಪಿನಾಕಿನಿ ನದಿ, ಪುರಾತನ ದೇಗುಲ ಇರುವ ಕ್ಷೇತ್ರವನ್ನು ಪ್ರವಾಸೋದ್ಯಮ ಪ್ರದೇಶವಾಗಿ ಘೋಷಿಸಬೇಕು - ಕೆ.ಎಸ್.ಪವನ್ ಕುಮಾರ್, ಲೆಕ್ಕ ಪರಿಶೋಧಕ

ವ್ಯಾಪಾರಕ್ಕೆ ಅವಕಾಶ ಕೊಡಿ

ಭಕ್ತರಿಗೆ ದೇಗುಲ ಸಮೀಪ ಪೂಜಾ ಸಾಮಗ್ರಿ ಸಿಗುತ್ತಿಲ್ಲ. ಗ್ರಾಮದ ಬಸ್ ನಿಲ್ದಾಣಕ್ಕೆ ಹೋಗಿ ತರಬೇಕಿದೆ. ದೇಗುಲದ ಸಮೀಪ ವ್ಯಾಪಾರಿಗಳು ಪೂಜಾ ಸಾಮಗ್ರಿ ಮಾರಾಟಕ್ಕೆ ಅವಕಾಶ ನೀಡಬೇಕು - ಪಿ.ಬಿ. ದಿನೇಶ್ ಕುಮಾರ್, ಅಧ್ಯಕ್ಷ, ಪಳವಳ್ಳಿ ಗ್ರಾ.ಪಂ

ಉದ್ಯಾನ ನಿರ್ಮಾಣ ಸರಿಯಲ್ಲ

ದೇಗುಲದ ಸುತ್ತಲಿನ ಖಾಲಿ ಪ್ರದೇಶದಲ್ಲಿ ಬಿಲ್ ಮಾಡಿಕೊಳ್ಳುವ ಉದ್ದೇಶದಿಂದ ಉದ್ಯಾನ ಸೇರಿದಂತೆ ಹಲವು ಕಾಮಗಾರಿ ನಡೆಸಲಾಗುತ್ತಿದೆ. ಮುಜರಾಯಿ ಇಲಾಖೆ ಅನುಮತಿ ನೀಡಿದೆಯೇ ಎಂಬ ಪ್ರಶ್ನೆ ಇದೆ. ಮುಂದಿನ ದಿನಗಳಲ್ಲಿ ದೇಗುಲಕ್ಕೆ ಸಂಬಂಧಿಸಿದ ಕಟ್ಟಡ ನಿರ್ಮಾಣಕ್ಕೆ ಸಮಸ್ಯೆಯಾಗಲಿದೆ- ಎಸ್.ಕೆ.ಸುಬ್ರಹ್ಮಣ್ಯ, ಪಾವಗಡ

ಜೀರ್ಣೋದ್ಧಾರಕ್ಕೆ ಬೇಕು ಅನುಮತಿ

ದೇಗುಲ ಜೀರ್ಣೋದ್ಧಾರ ಕಾಮಗಾರಿಯನ್ನು ಸರ್ಕಾರದ ಅನುದಾನ, ದೇಗುಲದ ಹಣ ಬಳಸದೆ ನಿರ್ಮಿಸಲು ಭಕ್ತರು ಸಿದ್ಧರಿದ್ದಾರೆ. ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ. ಮುಜರಾಯಿ ಇಲಾಖೆ ಜೀರ್ಣೋದ್ಧಾರ ಕಾಮಗಾರಿಗೆ ಅನುಮತಿ ನೀಡಬೇಕು - ರವಿ ಕುಮಾರ್, ಪಾವಗಡ

ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ದೇಗುಲ ಧ್ವಾರ
ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ದೇಗುಲ ಧ್ವಾರ
ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ದೇಗುಲ ಬಳಿಯ ಉತ್ತರ ಪಿನಾಕಿನಿ ನದಿ
ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ದೇಗುಲ ಬಳಿಯ ಉತ್ತರ ಪಿನಾಕಿನಿ ನದಿ
ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ದೇಗುಲ ಬಳಿ ಬಳಕೆಗೂ ಮುನ್ನವೇ ಶಿಥಿಲಾವಸ್ಥೆ ತಲುಪಿರುವ ವಸತಿಗೃಹ
ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ದೇಗುಲ ಬಳಿ ಬಳಕೆಗೂ ಮುನ್ನವೇ ಶಿಥಿಲಾವಸ್ಥೆ ತಲುಪಿರುವ ವಸತಿಗೃಹ
ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ದೇಗುಲ ಬಳಿ ಬಳಕೆಯಾಗದ ಶೌಚಾಲಯ
ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ದೇಗುಲ ಬಳಿ ಬಳಕೆಯಾಗದ ಶೌಚಾಲಯ
ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ದೇಗುಲ ಬಳಿ ಬಳಕೆಯಾಗದ ಶೌಚಾಲಯ ಹಾಳಾಗಿರುವುದು
ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ದೇಗುಲ ಬಳಿ ಬಳಕೆಯಾಗದ ಶೌಚಾಲಯ ಹಾಳಾಗಿರುವುದು
ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ದೇಗುಲದ ಆವರಣದಲ್ಲಿರುವ ಕೈ ತೊಳೆಯುವ ಸ್ಥಳ
ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ದೇಗುಲದ ಆವರಣದಲ್ಲಿರುವ ಕೈ ತೊಳೆಯುವ ಸ್ಥಳ
ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ದೇಗುಲದ ಮುಂಭಾಗದ ನಾಗರಕಟ್ಟೆ
ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ದೇಗುಲದ ಮುಂಭಾಗದ ನಾಗರಕಟ್ಟೆ
ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ದೇಗುಲದ ಬಳಿಯ ಕಾಲು ತೊಳಡಯುವ ಸ್ಥಳ ಸ್ವಚ್ಚತೆಯಿಲ್ಲದಿರುವುದು.
ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ದೇಗುಲದ ಬಳಿಯ ಕಾಲು ತೊಳಡಯುವ ಸ್ಥಳ ಸ್ವಚ್ಚತೆಯಿಲ್ಲದಿರುವುದು.
ದೇಗುಲಕ್ಕೆ ಸೇರಿದ ಕಲ್ಯಾಣ ಮಂಟಪದ ಊಟದ ಕೊಠಡಿ
ದೇಗುಲಕ್ಕೆ ಸೇರಿದ ಕಲ್ಯಾಣ ಮಂಟಪದ ಊಟದ ಕೊಠಡಿ
ಶಿಥಿಲಾವಸ್ಥೆ ತಲುಪಿರುವ ದೇಗುಲದ ಬಳಿಯ ವಸತಿ ಗೃಹ
ಶಿಥಿಲಾವಸ್ಥೆ ತಲುಪಿರುವ ದೇಗುಲದ ಬಳಿಯ ವಸತಿ ಗೃಹ
ದೇಗುಲದ ಸ್ಥಳದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಉದ್ಯಾನ
ದೇಗುಲದ ಸ್ಥಳದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಉದ್ಯಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT