ಸೋಮವಾರ, ಆಗಸ್ಟ್ 8, 2022
24 °C
ಉತ್ತಮ ಮಳೆ: ಒಳ್ಳೆಯ ಫಸಲಿನ ನಿರೀಕ್ಷೆಯಲ್ಲಿ ರೈತರು

ಕಾಳು ಕಟ್ಟುವ ಹಂತದಲ್ಲಿ ಹೆಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಳಿಯಾರು: ಹೋಬಳಿ ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷದ ಪೂರ್ವ ಮುಂಗಾರು ಹೆಸರು ಬೆಳೆ ಕಾಳು ಕಟ್ಟುವ ಹಂತ ತಲುಪಿದೆ. ಇನ್ನೊಂದು ಹದ ಮಳೆಯಾದರೆ ಉತ್ತಮ ಫಸಲು ಬರುವ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಈ ವರ್ಷ ಹೆಸರು ಬಿತ್ತನೆ ಕುಂಠಿತವಾಗಿದ್ದರೂ ಸೋನೆ ಮಳೆಗೆ ಬಿತ್ತನೆ ಮಾಡಿರುವ ಕಡೆ ಬೆಳೆ ಹುಲುಸಾಗಿ ಬೆಳೆದಿದೆ. ಬಿತ್ತನೆಯ ನಂತರ ಮಳೆ ಕೃಪೆ ತೋರಿರುವುದು ಬೆಳೆಗೆ ಶುಕ್ರದೆಸೆ ತಿರುಗಿದೆ.

ಭರಣಿ ಮಳೆಯ ಸೋನೆಯ ಸಿಂಚನಕ್ಕೆ ಕೆಲ ರೈತರು ಹೆಸರು ಬಿತ್ತನೆ ಮಾಡಿದ್ದರು. ನಂತರ ಕೃತಿಕಾ ಮಳೆಯು ಅಲ್ಲಲ್ಲಿ ಸೋನೆ ಮಳೆ ಬಿದ್ದು ಬೆಳೆಗೆ ಪೂರಕವಾಗಿತ್ತು. ಬಿತ್ತನೆ ಆದ ತರುವಾಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವುದು ಹೆಸರು ಬೆಳೆ ಹೂವು ಮೂಡಲು ಅನುಕೂಲವಾಗಿತ್ತು. ಈಗಾಗಲೇ ಕೆಲ ಕಡೆ ಕಾಯಿಯಾಗಿ ಕಾಳು ಕಟ್ಟುವ ಹಂತ ತಲುಪಿದೆ. ಹಂದನಕೆರೆ ಮತ್ತು ಶೆಟ್ಟಿಕೆರೆ ಹೋಬಳಿ ವ್ಯಾಪ್ತಿಯಲ್ಲಿ ಹೆಸರು ಉತ್ತಮವಾಗಿ ಬೆಳೆದಿದ್ದು ಹೂವಿನ ಹಂತದಲ್ಲಿದೆ. ಚಿಕ್ಕನಾಯಕನಹಳ್ಳಿ ಸುತ್ತ ಮುತ್ತ ಹಾಗೂ ಹುಳಿಯಾರು ಹೋಬಳಿಯಲ್ಲೂ ಹೆಸರು ಹುಲುಸಾಗಿ ಬೆಳೆದಿದೆ.

ಹೆಸರು ಕೇವಲ ಮೂರು ತಿಂಗಳ ಬೆಳೆಯಾಗಿದ್ದು, ಇನ್ನೂ ಒಂದೇ ಒಂದು ಹದ ಮಳೆ ಬಂದರೆ ಉತ್ತಮ ಫಸಲು ಪಡೆಯುವ ನಿರೀಕ್ಷೆ ರೈತರಲ್ಲಿದೆ. ಕಳೆದ ನಾಲ್ಕೈದು ವರ್ಷಗಳಿಂದ ಭೂಮಿಗೆ ಹಾಕಿದ ಬೀಜ ಹಿಂದಿರುಗದ ಸ್ಥಿತಿ ಬಂದಿತ್ತು. ಆದರೆ ಈ ವರ್ಷದ ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆ ಆಗಿದೆ. ಬಿತ್ತನೆಯ ನಂತರ ಕಾಲ ಕಾಲಕ್ಕೆ ಬಿದ್ದ ಹದ ಮಳೆಯಿಂದ ಫಸಲು ಚನ್ನಾಗಿದೆ. ಮುಂದೆ ಯಾವುದೇ ಕೀಟಬಾಧೆ ಕಾಡದೆ ಹೋದರೆ ರೈತರು ನಿರೀಕ್ಷೆ
ಸುಳ್ಳಾಗದು ಎಂಬುದು ಕೆಲವರ ಅಭಿಪ್ರಾಯವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.