ಗುರುವಾರ , ನವೆಂಬರ್ 14, 2019
19 °C

ನಟರಾಜ್ ಬೂದಾಳು ಬರಹ | ದಲಿತ ಹೋರಾಟಕ್ಕೆ ತತ್ವಸಂಹಿತೆ ಕೊಟ್ಟ ಕೆ.ಬಿ

Published:
Updated:

ತಮ್ಮ ಬಹುಕಾಲದ ಒಡನಾಡಿಯನ್ನು ಸಾಹಿತ್ಯ ವಿಮರ್ಶಕ ನಟರಾಜ್ ಬೂದಾಳು ನೆನೆದಿರುವ ಪರಿಯಿದು.

---

ರಾಜ್ಯದಲ್ಲಿ ದಲಿತ ಹೋರಾಟಗಳಿಗೆ ತಾತ್ವಿಕ ಶಕ್ತಿಯಾಗಿದ್ದ ಕೆಲವೇ ಕೆಲವರಲ್ಲಿ ಕೆ.ಬಿ.ಸಿದ್ದಯ್ಯ ಅವರೂ ಪ್ರಮುಖರು. ಸೈದ್ಧಾಂತಿಕ ಸ್ಪಷ್ಟತೆ ಅವರಿಗೆ ಇತ್ತು. ಸಾಮಾಜಿಕ ಸಂಘರ್ಷ, ಹೋರಾಟಗಳ ಮೂಲಕ ಚಳವಳಿಗಳಿಗೆ ಪ್ರತಿಕ್ರಿಯಿಸುವವರು ತುಂಬಾ ಜನರು ಇದ್ದಾರೆ. ಆದರೆ ‘ತತ್ವಸಂಹಿತೆ’ ಇಟ್ಟುಕೊಂಡು ಪ್ರತಿಕ್ರಿಯಿಸುವವರು ತುಂಬಾ ಕಡಿಮೆ. ಹೀಗೆ ‘ತತ್ವಸಂಹಿತೆ’ಯ ಮೂಲಕ ಸಿದ್ದಯ್ಯ ಪ್ರತಿಕ್ರಿಯಿಸುತ್ತಿದ್ದರು.

ಕೆ.ಬಿ. ಕಾವ್ಯದ ಹಿಂದೆ ಈ ನೆಲದ ಬೇರೆ ಬೇರೆ ದರ್ಶನಗಳು, ಮೀಮಾಂಸೆಗಳು, ದೇಸಿ ಅಭಿವ್ಯಕ್ತಿ ಇದೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಅವರದ್ದು ಕುಪ್ಪಳಿಕೆಯ ನಡೆ. ಈ ದೇಸಿ ಮಾದರಿಯನ್ನು ತಮ್ಮ ಕಾವ್ಯದಲ್ಲಿ ಸರಿಯಾಗಿ ದುಡಿಸಿಕೊಂಡರು.

ಕನ್ನಡಲ್ಲಿ ಕಾವ್ಯದ ಮಾದರಿಗಳು ಅನೇಕ ಇವೆ. ಇವುಗಳಲ್ಲಿ ಬಹುಪಾಲು ಅಂತಿಮವಾಗಿ ದೈವದ ಕಡೆ ಕಡೆಗೆ ಕೈ ತೋರಿಸುತ್ತವೆ. ಆದರೆ ಸಿದ್ದಯ್ಯ ಅವರ ಕಾವ್ಯ ಜನ ಸಮೂಹದ ನಡುವೆ ನಿಲ್ಲುತ್ತದೆ. ಎಲ್ಲರನ್ನೂ ಕೂರಿಸಿಕೊಂಡು ಆ ಕಾವ್ಯವೂ ಕುಳಿತುಕೊಳ್ಳುತ್ತದೆ. ಅವರದ್ದು ಜಾತಿ, ವರ್ಗ ಸೇರಿದಂತೆ ಯಾವುದೇ ಬೇಲಿಗಳು ಇಲ್ಲದ ಬಯಲಿನ ಕಾವ್ಯ. ಅವರ ಕಾವ್ಯಗಳು ಸಾಮಾಜಿಕ ಹೋರಾಟಕ್ಕೆ ತಾತ್ವಿಕ ಆಕರವನ್ನು ಒದಗಿಸಿವೆ.

ದೇವನೂರ ಮಹಾದೇವ ಅವರ ‘ಸಂಬಂಜ ಅನ್ನಾದು ದೊಡ್ಡದು ಕಣಾ’ ಎನ್ನುವುದು ಮಾತಿನ ಆಚೆಗೂ ನುಡಿಯುತ್ತದೆ. ಹೀಗೆ ಸಿದ್ದಯ್ಯ ಅವರ ಕಾವ್ಯದ ಆಚೆಗಿನ ಹೊಳಹುಗಳು ಅದ್ಬುತವಾಗಿರುತ್ತಿದ್ದವು. ಅವರೂ ಸಹ ಶಬ್ದದ ಆಚೆಗೆ ನುಡಿಯಬಲ್ಲವರಾಗಿದ್ದರು. 

ಅಂಬೇಡ್ಕರ್ ಹೇಗೆ ದಲಿತರಿಗೆ ಮಾತ್ರ ಅಲ್ಲವೊ ಅದೇ ರೀತಿ ಕೆ.ಬಿ.ಸಿದ್ದಯ್ಯ ಮತ್ತು ಅವರ ಕಾವ್ಯ ದಲಿತರಿಗೆ ಮಾತ್ರವಲ್ಲದೆ ಎಲ್ಲ ತಬ್ಬಲಿ ಸಮೂಹಗಳಿಗೆ ವಿಸ್ತರಿಸಿಕೊಳ್ಳುತ್ತದೆ. ಸಿದ್ದಯ್ಯನವರ ಅಂತಃಕರಣ ಎಲ್ಲ ಶೂದ್ರ ಸಮೂಹಗಳ ಪರವಾಗಿ ತುಡಿಯುತ್ತಿತ್ತು. ಅವರಿಲ್ಲದ ಕನ್ನಡ ಕಾವ್ಯ ನಿಜಕ್ಕೂ ಬಡವಾಗುತ್ತದೆ ಎಂದರೆ ಅತಿಶಯವಲ್ಲ.

ದಲಿತರು ಸೇರಿದಂತೆ ಧ್ವನಿ ಇಲ್ಲದವರ ಪರವಾದ ಹೋರಾಟಗಳಲ್ಲಿ ಅವರು ಪಾಲ್ಗೊಳ್ಳಲು ಹಿಂದೆ ಬೀಳುತ್ತಿರಲಿಲ್ಲ. ‘ಕೆಳಕ್ಕೆ ಬಿದ್ದವರ ಕೈ ಹಿಡಿಯಬೇಕು’ ಎನ್ನುವುದಷ್ಟೇ ಅವರ ಚಿಂತನೆ ಆಗಿರುತ್ತಿತ್ತು.

ನಾನು ಮತ್ತು ಸಿದ್ದಯ್ಯ ಕೆ.ಎಂ.ಶಂಕರಪ್ಪ ಅವರ ಪ್ರೀತಿಯ ಶಿಷ್ಯರು. ಶಂಕರಪ್ಪ ಅವರು ನಮ್ಮಿಬ್ಬರನ್ನು ಪ್ರೀತಿಯಿಂದ ಕರೆಯುತ್ತಿದ್ದೇ ಚಾಂಡಾಲ ಶಿಷ್ಯರು ಎಂದು. ಶಂಕರಪ್ಪ ಅವರು ಇಬ್ಬರಿಗೂ ಬೌದ್ಧ ದರ್ಶನಗಳ ಪುಸ್ತಕಗಳನ್ನು ಕೊಟ್ಟು ಓದಿಸಿದರು. ಬೌದ್ಧ ದರ್ಶನಗಳ ಬಗ್ಗೆ ಸಿದ್ದಯ್ಯ ನನ್ನೊಂದಿಗೆ ಚರ್ಚಿಸಿದ್ದು ಇದೆ. ಆದರೆ ಆ ಚರ್ಚೆಗಳನ್ನು ಅವರು ವ್ಯವಸ್ಥಿತವಾಗಿ ಪ್ರಕಟಿಸಲಿಲ್ಲ. ಪ್ರಕಟಿಸಿದ್ದರೆ ಅವೂ ಮೌಲಿಕವಾದ ಕೃತಿ ಆಗುತ್ತಿದ್ದವು.

ಪ್ರತಿಕ್ರಿಯಿಸಿ (+)