ಶನಿವಾರ, ಸೆಪ್ಟೆಂಬರ್ 25, 2021
22 °C

ಅಭಿವೃದ್ಧಿಗೆ ಹೊಸ ಶಿಕ್ಷಣ ನೀತಿ ಪೂರಕ: ಚಿದಾನಂದ್ ಎಂ. ಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ: ದೇಶದ ಹಲವಾರು ಶಿಕ್ಷಣ ತಜ್ಞರ, ಶಿಕ್ಷಣ ಪ್ರೇಮಿಗಳ ಹಾಗೂ ಲಕ್ಷಾಂತರ ಮಂದಿ ವಿದ್ಯಾರ್ಥಿ, ಪೋಷಕರ ಅಭಿಪ್ರಾಯ ಸಂಗ್ರಹ ಮಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದಾರೆ. ಇದರಿಂದ ದೇಶದಲ್ಲಿ ಮಹತ್ತರ ಬದಲಾವಣೆ ಕಾಣಲಿದೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ. ಗೌಡ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕ ರಾಜ್ಯ ಮೊದಲನೆ ಹೆಜ್ಜೆಯಾಗಿ ಎಲ್ಲಾ ಪೂರ್ವ ತಯಾರಿ ಮಾಡಿಕೊಂಡು ಪ್ರಾರಂಭಿಸುತ್ತಿದೆ. ಆದರೆ, ವಿರೋಧ ಪಕ್ಷದ ನಾಯಕರು ಇದರ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಎತ್ತಿದ್ದಾರೆ. ದೇಶದ ಭವಿಷ್ಯದ ಹಿತದೃಷ್ಟಿಯಿಂದ ಜನರಿಗೆ ತಪ್ಪು ಸಂದೇಶ ಹೋಗಬಾರದು. ಈ ನಿಟ್ಟಿನಲ್ಲಿ ವಿರೋಧ ಪಕ್ಷದವರು ಅನವಶ್ಯಕ ಟೀಕೆ ಮಾಡುವುದು ಸರಿಯಲ್ಲ ಎಂದರು.

ವಿಜ್ಞಾನಿ ಕಸ್ತೂರಿ ರಂಗಪ್ಪ ಅವರ ನೇತೃತ್ವದಲ್ಲಿ ಶಿಕ್ಷಣ ತಜ್ಞ ಡಾ.ಕೆ. ಶ್ರೀಧರ್ ಅವರು ಹಾಗೂ ಲಕ್ಷಾಂತರ ಮಂದಿ ಶಿಕ್ಷಣ ತಜ್ಞರ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಹಲವಾರು ವರ್ಷಗಳ ಕಾಲ ಎಲ್ಲಾ ಪೂರ್ವ ತಯಾರಿ ಮಾಡಿಕೊಂಡು ಈ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಸಣ್ಣಪುಟ್ಟ ದೋಷಗಳು ಇದ್ದರೆ ಅದನ್ನು ಸರಿಪಡಿಸಲು ಅವಕಾಶ ಇದೆ ಎಂದು ಹೇಳಿದರು.

ಇಷ್ಟು ದಿನ ಮೆಕಾಲೆ ಶಿಕ್ಷಣ ನೀತಿಯನ್ನು ಅನುಸರಿಸುತ್ತಿದ್ದೇವೆ. ಅದನ್ನು ಬದಲಾಯಿಸಿ ಹೊಸ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ನಂತಹ ಭಾರತೀಯ ಆಡಳಿತ ಸೇವೆ ಪರೀಕ್ಷೆ ಎದುರಿಸಲು ಅನುಕೂಲವಾಗುತ್ತದೆ. ಇಂತಹ ವ್ಯವಸ್ಥೆ ಇರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸುವುದು ಸರಿಯಲ್ಲ ಎಂದರು.

ಗಡಿನಾಡ ಶಾಲೆಗಳಿಗೆ ₹ 1.30 ಕೋಟಿ ಅನುದಾನ: ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ರಾಜ್ಯ ಗಡಿನಾಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಶೇಖರ್ ಅವರಲ್ಲಿ ಮನವಿ ಮಾಡಿ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ₹ 1.30 ಕೋಟಿ ಅನುದಾನ ಪಡೆಯಲಾಗಿದೆ. ಈ ಅನುದಾನದಲ್ಲಿ ಶಿರಾ ತಾಲ್ಲೂಕಿನ ಹಲವು ಶಾಲೆಗಳು ಹಾಗೂ ಚಳ್ಳಕೆರೆ, ಗೌರಿಬಿದನೂರು, ಮಧುಗಿರಿ ಸೇರಿದಂತೆ ಆಗ್ನೇಯ ಪದವೀಧರ ಕ್ಷೇತ್ರದ ಹಲವು ಶಾಲೆಗಳಿಗೆ ಅನುದಾನ ನೀಡಲಾಗುವುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು