ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರುವಗಲ್‌ನ ಆಂಜನೇಯಸ್ವಾಮಿ ದೇಗುಲ: ಅರ್ಚಕರ ಬದಲಾವಣೆಗೆ ಒತ್ತಾಯ

ಗ್ರಾಮಸ್ಥರ ಪ್ರತಿಭಟನೆ
Last Updated 6 ಮಾರ್ಚ್ 2021, 3:16 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ನಿರುವಗಲ್‌ನ ಆಂಜನೇಯಸ್ವಾಮಿ ದೇವಾಲಯದ ಅರ್ಚಕರು ಭಕ್ತರೊಂದಿಗೆ ಉದ್ಧಟತನದಿಂದ ವರ್ತಿಸುತ್ತಿದ್ದಾರೆ ಅವರನ್ನು ಬದಲಾಯಿಸಿ ಬೇರೆಯವರನ್ನು ನೇಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ದುರ್ಗಮ್ಮ ಜಾತ್ರೆಯಲ್ಲಿ ಭಕ್ತರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ ಭಕ್ತರು ಶುಕ್ರವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನ, ಮುಜರಾಯಿ ಇಲಾಖೆಗೆ ಸೇರಿದ್ದು, ಪೂಜಾ ವಿಧಿ ವಿಧಾನಗಳನ್ನು ವೈಷ್ಣವ ಸಂಪ್ರದಾಯಕ್ಕೆ ಸೇರಿದ ಅರ್ಚಕರು ನಡೆಸಿಕೊಂಡು ಬರುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಅರ್ಚಕರು ದೇವರ ಪೂಜೆಗಳನ್ನು ಸರಿಯಾಗಿ ಮಾಡುತ್ತಿಲ್ಲ. ಗ್ರಾಮದಲ್ಲಿನ ಇತರೆ ದೇವರು ಉತ್ಸವ ಹೊರಟಾಗ ಆಂಜನೇಯಸ್ವಾಮಿ ದೇವಸ್ಥಾನದ ಹತ್ತಿರ ಹೋಗಿ ಪೂಜೆ ಸ್ವೀಕರಿಸುವುದು ವಾಡಿಕೆ. ಆದರೆ ಅರ್ಚಕರ ದೇವರ ಉತ್ಸವ ಬಂದಾಗ ದೇಗುಲದ ಬಾಗಿಲನ್ನು ತೆರೆದಿಲ್ಲ. ಗ್ರಾಮಸ್ಥರು ಕೇಳಿದರೆ ಉದ್ಧಟತನದ ಉತ್ತರ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.

ಗ್ರಾಮದ ದುರ್ಗಮ್ಮ ದೇವರ ಅರ್ಚಕ ರಾಜಶೇಖರ್ ಅವರ ಮನೆಯ ಹತ್ತಿರ ಹೋಗಿ ದೌರ್ಜನ್ಯ ಮಾಡಿ, ಕೊಲೆ ಬೆದರಿಕೆ ಹಾಕಿ ದಾಂದಲೆ ನಡೆಸಿದ್ದಾರೆ. ಈ ಸಂಬಂಧ ಪೋಲಿಸರು ಮೊಕದ್ದಮೆ ದಾಖಲಿಸಿದ್ದಾರೆ. ಗ್ರಾಮದ ದುರ್ಗಮ್ಮನ ಜಾತ್ರೆ ಮಾರ್ಚ್ 20ರಿಂದ 27ರವರೆಗೆ ನಡೆಯುವುದರಿಂದ ಕೂಡಲೇ ಆಂಜನೇಯಸ್ವಾಮಿ ದೇಗುಲದ ಅರ್ಚಕರನ್ನು ಬದಲಿಸಬೇಕು ಎಂದು ಒತ್ತಾಯಿಸಿದರು.

ದುರ್ಗಮ್ಮ ದೇವಾಲಯದ ಟ್ರಸ್ಟ್‌ನ ಅನಂತಯ್ಯ ಮಾತನಾಡಿ, ‘ಗ್ರಾಮದಲ್ಲಿ ಆಂಜನೇಯಸ್ವಾಮಿ ಮತ್ತು ದುರ್ಗಮ್ಮ ದೇಗುಲವಿದೆ. ಹಿಂದಿನಿಂದಲೂ ಆಂಜನೇಯ ದೇವಸ್ಥಾನದ ಅರ್ಚಕರು ಶ್ರದ್ಧೆಯಿಂದ ಪೂಜೆ ಸಲ್ಲಿಸುತ್ತಿದ್ದರು. ಆದರೆ ಈಗಿನ ಅರ್ಚಕರು ಸಂಪ್ರದಾಯ ಪಾಲಿಸುತ್ತಿಲ್ಲ. ಜನಗಳ ಮೇಲೆ ಸುಳ್ಳು ದೂರು ನೀಡಿದ್ದಾರೆ. ಜಾತ್ರೆಯಲ್ಲಿ ಗಲಾಟೆ ಮಾಡಿದ್ದಾರೆ’ ಎಂದು ದೂರಿದರು.

ದೇವಸ್ಥಾನದ ಅಧ್ಯಕ್ಷ ನಾಗರಾಜು ಮಾತನಾಡಿ, ‘ದೇವಸ್ಥಾನದಲ್ಲಿ ಜಾತ್ರೆಯ ಸಲುವಾಗಿ ಸಭೆ ನಡೆದಿತ್ತು, ಅಲ್ಲಿಗೆ ಬಂದ ಅರ್ಚಕರು ದೇವಸ್ಥಾನದ ಕೆಲವು ವಸ್ತುಗಳನ್ನು ಹೊರಹಾಕಿ ಕಾಲೊನಿಯ ಅಮಾಯಕನ ವಿರುದ್ಧ ದೂರು ನೀಡಿದ್ದಾರೆ. ಪೋಲಿಸರು ವಿಚಾರಿಸದೆ ವ್ಯಕ್ತಿಯನ್ನು ಬಂಧಿಸಿದ್ದಾರೆ’ ಎಂದರು.

ತಹಶೀಲ್ದಾರ್ ತೇಜಸ್ವಿನಿ ಪ್ರತಿಕ್ರಿಯಿಸಿ, ಪ್ರತಿವರ್ಷವೂ ಜಾತ್ರೆಯಲ್ಲಿ ಗಲಾಟೆ ನಡೆಯುವುದು ಗಮನಕ್ಕೆ ಬಂದಿದೆ. ಅರ್ಚಕರಾದ ಗೋಪಿಕೃಷ್ಣ ಮತ್ತು ಅವರ ತಮ್ಮ ಅಜಯ್ ಅವರಿಗೆ ನೋಟಿಸ್ ನೀಡಿ ಕೆಲಸ ಮಾಡಿಸುತ್ತಿದ್ದೆವು. ಆದರೂ ಅವರ ವಿರುದ್ಧ ಗ್ರಾಮಸ್ಥರು ದೂರು ನೀಡಿದ್ದು, ಎಫ್‌ಐಆರ್‌ ದಾಖಲಾಗಿದೆ. ಈ ಪ್ರಸ್ತಾವವನ್ನು ಜಿಲ್ಲಾಧಿಕಾರಿಗೆ ಅಮಾನತು ಮಾಡಲು ಕಳುಹಿಸಿದ್ದೇವೆ. ದೇವಸ್ಥಾನಕ್ಕೆ ತಾತ್ಕಾಲಿಕ ಪುರೋಹಿತರು ಬೇಕು ಎಂದು ಪ್ರಕಟಣೆ ಹೊರಡಿಸುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT