ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಲ್ಲಿ ಜಾತಿ ಕೋಟಾ ಇಲ್ಲ: ಬಿ.ಸಿ. ನಾಗೇಶ್‌

ಮಠಕ್ಕೆ ರಾಜಕಾರಣಿಗಳ ದಂದು
Last Updated 6 ಆಗಸ್ಟ್ 2021, 4:25 IST
ಅಕ್ಷರ ಗಾತ್ರ

ತುಮಕೂರು: ಬಿಜೆಪಿಯಲ್ಲಿ ಯಾವುದೇ ಜಾತಿ ಕೋಟಾ ಎಂಬುದು ಇಲ್ಲ. ಈ ವಿಚಾರಕ್ಕೆ ಮಾಧ್ಯಮದವರು ಹಾಗೂ ಕೆಲವರು ಹೊಸ ಬಣ್ಣ ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ನೂತನ ಸಚಿವ ಬಿ.ಸಿ.ನಾಗೇಶ್ ಗುರುವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನು ಯಾವುದೇ ಕೋಟಾದಿಂದಲೂ ಸಚಿವನಾಗಿಲ್ಲ. ಪಕ್ಷ ನನ್ನನ್ನು ಗುರುತಿಸಿ ಅವಕಾಶ ನೀಡಿದೆ. ಪಕ್ಷ ನಿಷ್ಠೆಯಿಂದ ಕೆಲಸ ಮಾಡುತ್ತೇನೆ’ ಎಂದು ಸ್ಪಷ್ಟಪಡಿಸಿದರು.

‘ಬ್ರಾಹ್ಮಣ ಕೋಟಾದಡಿ ಮಾಜಿ ಸಚಿವ ಸುರೇಶ್‍ ಕುಮಾರ್ ಅವರನ್ನು ಕೈಬಿಟ್ಟು ನಿಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ’ ಎಂಬ ಪ್ರಶ್ನೆಗೆ ಉತ್ತರಿಸಿ, ‘ಸುರೇಶ್‍ ಕುಮಾರ್ ಅವರಷ್ಟು ಅನುಭವ, ಸಾಮರ್ಥ್ಯ, ಹೋರಾಟ ಶಕ್ತಿ ನನಗಿಲ್ಲ. ನನ್ನನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಅವರನ್ನು ಕೈಬಿಟ್ಟಿದ್ದಾರೆ ಎಂಬುದು ಸರಿಯಲ್ಲ’ ಎಂದು ವಿವರಿಸಿದರು.

‘ಕೋವಿಡ್ 3ನೇ ಅಲೆ ಬರಲಿದೆ ಎಂಬ ಬಗ್ಗೆ ತಜ್ಞರು ವರದಿ ನೀಡಿದ್ದಾರೆ. ಹಾಗಾಗಿ ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನನಗೆ ಯಾದಗಿರಿ ಜಿಲ್ಲೆಯ ಹೊಣೆ ನೀಡಿದ್ದಾರೆ. ನಾಳೆ ಅಥವಾ ನಾಡಿದ್ದು ಅಲ್ಲಿನ ಶಾಸಕರು, ಜಿಲ್ಲಾಧಿಕಾರಿ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜತೆ ಚರ್ಚಿಸಲಾಗುವುದು. ಅಲ್ಲಿನ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡು ನಿರ್ದೇಶನ ನೀಡಲಾಗುವುದು. ಶೀಘ್ರದಲ್ಲೇ ಯಾದಗಿರಿಗೆ ತೆರಳುತ್ತೇನೆ’ ಎಂದು ತಿಳಿಸಿದರು.

ಯಾವ ಜಿಲ್ಲೆಯ ಉಸ್ತುವಾರಿ ಬಯಸುತ್ತೀರಿ ಎಂಬ ಪ್ರಶ್ನೆಗೆ, ‘ಇನ್ನು ಆ ಬಗ್ಗೆ ಚರ್ಚೆಯಾಗಿಲ್ಲ. ಸದ್ಯಕ್ಕೆ ಕೋವಿಡ್ ಪರಿಸ್ಥಿತಿ ನಿಭಾಯಿಸುವ ಹೊಣೆಯನ್ನು ಮಾತ್ರ ವರಿಷ್ಠರು ನೀಡಿದ್ದಾರೆ. ಮುಖ್ಯಮಂತ್ರಿ, ವರಿಷ್ಠರು ಯಾವ ಖಾತೆ ನೀಡಿದರೂ ಅದನ್ನು ನಿಭಾಯಿಸುತ್ತೇನೆ. ನಾನು ಮಂತ್ರಿಗಿರಿಯನ್ನೇ ನಿರೀಕ್ಷೆ ಮಾಡಿರಲಿಲ್ಲ. ಇಂತಹದ್ದೇ ಖಾತೆ ಬೇಕು ಎಂಬ ಅಪೇಕ್ಷೆಯನ್ನೂ ಹೊಂದಿಲ್ಲ’ ಎಂದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಮುಖಂಡ ಸೊಗಡು ಶಿವಣ್ಣ, ಮೇಯರ್ ಬಿ.ಜಿ.ಕೃಷ್ಣಪ್ಪ, ಟೂಡಾ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ, ಮುಖಂಡರಾದ ರವಿ ಹೆಬ್ಬಾಕ, ಎಂ.ಬಿ.ನಂದೀಶ್, ಕೊಪ್ಪಲ್ ನಾಗರಾಜು, ದಿಲೀಪ್‍ಕುಮಾರ್, ಮಲ್ಲಸಂದ್ರ ಶಿವಣ್ಣ, ವೇದಮೂರ್ತಿ, ರುದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.

ಮಠಕ್ಕೆ ರಾಜಕಾರಣಿಗಳ ದಂಡು

ತುಮಕೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟ ವಿಸ್ತರಣೆ ಮಾಡುತ್ತಿದ್ದಂತೆ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಚಿವರು ಸಿದ್ಧಗಂಗಾ ಮಠಕ್ಕೆ ಸಾಲುಸಾಲಾಗಿ ಭೇಟಿ ನೀಡುತ್ತಿದ್ದಾರೆ.

ಬುಧವಾರ ರಾತ್ರಿ ಜೆ.ಸಿ.ಮಾಧುಸ್ವಾಮಿ ಮಠಕ್ಕೆ ಭೇಟಿನೀಡಿ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡರು. ಗುರುವಾರ ಬೆಳಿಗ್ಗೆ ಪ್ರಭು ಚೌವ್ಹಾಣ್, ನಂತರ ಬಿ.ಸಿ.ನಾಗೇಶ್ ಭೇಟಿ ನೀಡಿದ್ದರು. ಸಂಜೆ ವೇಳೆಗೆ ವಿ.ಸೋಮಣ್ಣ ಭೇಟಿನೀಡಿ ಆಶೀರ್ವಾದ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT