ಗುಬ್ಬಿ: ತಾಲ್ಲೂಕಿನಲ್ಲಿನ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳು ಸೇರಿದಂತೆ ಜಿಲ್ಲಾ ಮುಖ್ಯ ರಸ್ತೆ ಹಾಗೂ ಗ್ರಾಮೀಣ ರಸ್ತೆಗಳಲ್ಲಿ ಬಹುತೇಕ ಕಡೆ ಒತ್ತುವರಿಯಾಗಿವೆ.
ರಾಜ್ಯ ಹೆದ್ದಾರಿ 80 ಮೀಟರ್ ಹಾಗೂ ಜಿಲ್ಲಾ ಮುಖ್ಯ ರಸ್ತೆ 50 ಮೀಟರ್ ಅಗಲ ಇರಬೇಕು ಎಂಬ ನಿಯಮ ಇದ್ದರೂ, ಅದು ದಾಖಲೆಗೆ ಸೀಮಿತವಾಗಿದೆ.
ರಸ್ತೆಗಳ ಎರಡೂ ಬದಿಗಳಲ್ಲಿ ಪಕ್ಕದ ಜಮೀನಿನವರು ಒತ್ತುವರಿ ಮಾಡಿಕೊಂಡು ತೆಂಗು, ಅಡಿಕೆ, ಬಾಳೆ ಹಾಗೂ ರಾಸುಗಳಿಗೆ ಮೇವನ್ನು ಬೆಳೆಯಲು ಜಾಗ ಮಾಡಿಕೊಂಡಿದ್ದಾರೆ.
ಕೆಲವರು ಒತ್ತುವರಿ ಜಾಗದಲ್ಲಿ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಕೆಲವೆಡೆ ಮನೆಯ ಆವರಣ ಗೋಡೆಯನ್ನು ನಿರ್ಮಿಸಿದ್ದಾರೆ
ನಿಟ್ಟೂರು-ಹೊಸಕೆರೆ ರಸ್ತೆ, ನಿಟ್ಟೂರು-ಸಂಪಿಗೆ, ನಿಟ್ಟೂರು-ಕಲ್ಲೂರು ಕ್ರಾಸ್, ಎಂ.ಎಚ್ ಪಟ್ಟಣ- ಸಿ. ನಂದಿಹಳ್ಳಿ, ಚೇಳೂರು-ಹಾಗಲವಾಡಿ, ಚೇಳೂರು-ತುಮಕೂರು, ಚೇಳೂರು-ಶಿರಾ, ಸಿಎಸ್ ಪುರ- ಹೆಬ್ಬೂರು, ಕಡಬ- ಕೆಜಿ ಟೆಂಪಲ್, ಕಲ್ಲೂರ್ ಕ್ರಾಸ್ -ಸಂಪಿಗೆ, ಗುಬ್ಬಿ-ಹೆಬ್ಬೂರು, ನಿಟ್ಟೂರು-ಮೈಸೂರು, ಗುಬ್ಬಿ-ಸಿ.ಎಸ್. ಪುರ ಹೆದ್ದಾರಿಯಲ್ಲಿ ಒತ್ತುವರಿಯಾಗಿದೆ.
ರಸ್ತೆ ಅಂಚಿನವರಗೆ ಉಳಿಮೆ ಮಾಡಿದ್ದು, ಆಕಸ್ಮಿಕವಾಗಿ ವಾಹನವನ್ನು ರಸ್ತೆಯಿಂದ ಕೆಳಗೆ ಇಳಿಸಿದಲ್ಲಿ ಉಳಿಮೆ ಮಾಡಿರುವ ಜಾಗದಲ್ಲಿ ಸಿಲುಕಿಕೊಂಡು ಸಂಕಷ್ಟ ಅನುಭವಿಸುವಂತೆ ಆಗುತ್ತಿದೆ.
ವಾಹನಗಳ ಓಡಾಟ ಹೆಚ್ಚಾದಂತೆ ರಸ್ತೆ ವಿಸ್ತರಣೆ ಮಾಡುವುದು ಅನಿವಾರ್ಯವಾಗುತ್ತದೆ. ರಸ್ತೆ ಒತ್ತುವರಿಯಿಂದಾಗಿ ವಿಸ್ತರಣೆಗೂ ಅಡ್ಡಿಯಾಗುತ್ತಿದೆ.
ತಾಲ್ಲೂಕಿನ ಬಹುತೇಕ ಜಿಲ್ಲಾ ರಸ್ತೆಗಳು ತುಂಬಾ ಕಿರಿದಾಗಿವೆ. ಒಂದು ವಾಹನ ಮಾತ್ರ ಚಲಿಸಲು ಸಾಧ್ಯವಿದೆ. ಎದುರಿನಿಂದ ಅಥವಾ ಹಿಂದಿನಿಂದ ವಾಹನ ಬಂದಾಗ ರಸ್ತೆಯಿಂದ ಕೆಳಗೆ ಇಳಿಯುವುದು ಅನಿವಾರ್ಯವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ತೊಂದರೆಗೆ ಸಿಲುಕಿ, ಅನೇಕ ವೇಳೆ ದ್ವಿಚಕ್ರ ವಾಹನ ಸವಾರರು ಬಿದ್ದಿರುವ ನಿದರ್ಶನಗಳಿವೆ.
ನಿರಂತರ ಮಳೆಯಿಂದಾಗಿ ರಸ್ತೆಗಳು ಗುಂಡಿ ಬಿದ್ದು ರಸ್ತೆಯಲ್ಲಿ ಚಲಿಸಲು ಸಾಧ್ಯ ವಾಗಿಲ್ಲ. ರಸ್ತೆ ಕೆಳಗೆ ಇಳಿಯಲು ಆಗದೆ ಸಾರ್ವಜನಿಕರು ಪ್ರಯಾಸ ಪಡುವಂತಾಗುತ್ತಿದೆ.
ಗ್ರಾಮೀಣ ಭಾಗದಲ್ಲಂತೂ ರಸ್ತೆಗಾಗಿಯೇ ಮೀಸಲಿರುವ ಖರಾಬು ದಾರಿಗಳನ್ನೇ ಒತ್ತುವರಿಮಾಡಿಕೊಂಡು ಅದಕ್ಕಾಗಿ ವ್ಯಾಜ್ಯವಾಡಿಕೊಂಡು ಪೊಲೀಸ್ ಠಾಣೆ ಹಾಗೂ ನ್ಯಾಯಾ ಲಯದ ಮೆಟ್ಟಿಲೇರುತ್ತಿದ್ದಾರೆ. ಕೆಲವರು ಮಾಡುವ ತಪ್ಪಿನಿಂದಾಗಿ ಸಾರ್ವಜನಿಕರು ಹಾಗೂ ವಾಹನ ಸವಾರರು ತೊಂದರೆಯಾಗುತ್ತಿದೆ ಎನ್ನುತ್ತಾರೆ ಶಿವಕುಮಾರ್.