ತುಮಕೂರು: ತುಮಕೂರು- ಯಶವಂತಪುರ ಮೆಮು ರೈಲು ಸಂಚಾರಕ್ಕೆ ಸೆ. 27ರಂದು ಬೆಳಿಗ್ಗೆ 8 ಗಂಟೆಗೆ ನಗರದ ರೈಲು ನಿಲ್ದಾಣದಲ್ಲಿ ಕೇಂದ್ರ ಜಲ ಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಇಲ್ಲಿ ಬುಧವಾರ ತಿಳಿಸಿದರು.
ನಗರದಿಂದ ಬೆಳಿಗ್ಗೆ 8.45ಕ್ಕೆ ಹೊರಟು 10.25 ಗಂಟೆಗೆ ಯಶವಂತಪುರ ತಲುಪಲಿದೆ. ಅಲ್ಲಿಂದ ಸಂಜೆ 5.45ಕ್ಕೆ ಹೊರಡುವ ರೈಲು ರಾತ್ರಿ 7.05 ಗಂಟೆಗೆ ತುಮಕೂರು ಪ್ರವೇಶಿಸಲಿದೆ. ಭಾನುವಾರ ಹೊರತುಪಡಿಸಿ ಉಳಿದ ಎಲ್ಲ ದಿನ ರೈಲು ಪ್ರಯಾಣಿಕರ ಇದರ ಪ್ರಯೋಜನ ಪಡೆಯಬಹುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಮೆಮು ರೈಲು ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿದ್ದು, ಕೊನೆಗೂ ಸಂಚಾರ ಆರಂಭವಾಗುತ್ತಿದೆ. ಸೋಮಣ್ಣ ಕೇಂದ್ರ ಸಚಿವರಾದ ನಂತರ ಜಿಲ್ಲೆಯ ರೈಲ್ವೆ ಕಾಮಗಾರಿಗಳಿಗೆ ವೇಗ ನೀಡಿದ್ದಾರೆ. ₹500 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ರೈಲ್ವೆ ಕೆಳ ಸೇತುವೆ, ಮೇಲ್ಸೇತುವೆ ನಿರ್ಮಾಣ ಕಾರ್ಯವೂ ಶುರುವಾಗಿದೆ’ ಮಾಹಿತಿ ನೀಡಿದರು.
ಭೀಮಸಂದ್ರ, ಶೆಟ್ಟಿಹಳ್ಳಿ ಕೆಳ ಸೇತುವೆಗಳ ಅಭಿವೃದ್ಧಿ ಕಾರ್ಯ ಆರಂಭವಾಗಿದೆ. ರೈಲ್ವೆ ಕಾಮಗಾರಿ ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.
ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರವಿಶಂಕರ್, ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ, ಪದಾಧಿಕಾರಿಗಳಾದ ಎಂ.ರುದ್ರೇಶ್, ಸಂದೀಪ್ ಹಾಜರಿದ್ದರು.