ಮಂಗಳವಾರ, ಜನವರಿ 19, 2021
21 °C
ಜ. 4ರಿಂದ ಖಾಸ‌ಗಿ ಶಾಲೆಗಳು ಆರಂಭ; ತಳಿರು ತೋರಣಗಳಿಂದ ಆವರಣ ಶೃಂಗಾರ

ಆನ್‌ಲೈನ್ ಸಾಕು, ತರಗತಿ ಪಾಠ ಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ತುಮಕೂರು ದಕ್ಷಿಣ ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯಲ್ಲಿ ಶುಕ್ರವಾರ ಆರಂಭವಾದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ತರಗತಿಗಳಿಗೆ ವಿದ್ಯಾರ್ಥಿಗಳು ಉತ್ತಮ ಸಂಖ್ಯೆಯಲ್ಲಿಯೇ ಹಾಜರಾದರು.

ವಿದ್ಯಾಗಮದ ತರಗತಿಗಳಿಗೂ ವಿದ್ಯಾರ್ಥಿಗಳು ಉತ್ತಮವಾಗಿ ಸ್ಪಂದಿಸಿದರು. ಕೆಲವು ಕಡೆಗಳಲ್ಲಿ ಮಾತ್ರ ವಿದ್ಯಾರ್ಥಿಗಳ ಹಾಜರಿ ಇರಲಿಲ್ಲ. ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲರವವಿತ್ತು.

ಬೆಳಿಗ್ಗೆ 8ರ ಸುಮಾರಿಗೆ ಶಿಕ್ಷಕರು ಶಾಲೆಗಳಿಗೆ ಬಂದಿದ್ದರು. ಎಲ್ಲ ಶಾಲೆ, ಕಾಲೇಜುಗಳ ಪ್ರವೇಶದಲ್ಲಿ ವಿದ್ಯಾರ್ಥಿಗಳಿಗೆ ಸ್ಯಾನಿಟೈಸ್ ಹಾಕಿ, ಥರ್ಮಲ್ ಸ್ಕ್ಯಾನಿಂಗ್ ಪರೀಕ್ಷೆ ಮಾಡಲಾಯಿತು. ಪೋಷಕರ ಅನುಮತಿ ಪತ್ರಗಳನ್ನು ಶಿಕ್ಷಕರು ಪಡೆದರು. ಮಾಸ್ಕ್ ಹಾಕಿಕೊಂಡೇ ವಿದ್ಯಾರ್ಥಿಗಳು ತರಗತಿಯ ಒಳಗೆ ಪ್ರವೇಶಿಸಿದರು. ಶಾಲಾ ಪ್ರವೇಶವನ್ನು ಸಂಭ್ರಮದಿಂದಲೇ ಆಚರಿಸಿದರು. ತಳಿರು ತೋರಣಗಳು, ಬಲೂನ್‌ಗಳನ್ನು ಕಟ್ಟಲಾಗಿತ್ತು. ಕೊರೊನಾದ ಬಗ್ಗೆ ಮುನ್ನೆಚ್ಚರಿಕೆ ಫಲಕಗಳನ್ನು ಪ್ರದರ್ಶಿಸಲಾಗಿತ್ತು. ಶಾಲೆ, ಕಾಲೇಜುಗಳ ಆವರಣದಲ್ಲಿದ್ದ ವಿದ್ಯಾರ್ಥಿಗಳು ಖುಷಿಯಿಂದಲೇ ಕೊಠಡಿಗಳನ್ನು ಪ್ರವೇಶಿಸಿದರು.

ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು, ಡಿಡಿಪಿಐ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೀಗೆ ಉನ್ನತ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.

ದೊಡ್ಡ ಕೊಠಡಿಗಳಲ್ಲಿ 20 ವಿದ್ಯಾರ್ಥಿಗಳನ್ನು ಕೂರಿಸಲಾಗಿತ್ತು. ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿರುವ ಎಂಪ್ರೆಸ್ ಪದವಿಪೂರ್ವ ಕಾಲೇಜಿಗೆ 100ಕ್ಕೂ ಹೆಚ್ಚು ಮಕ್ಕಳು ಬಂದಿದ್ದರು. 50ಕ್ಕೂ ಹೆಚ್ಚು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಾಜರಿದ್ದರು. ಆರು ಕೊಠಡಿಗಳಲ್ಲಿ ಪಿಯುಸಿ ತರಗತಿ ಮೂರು ಕೊಠಡಿಗಳಲ್ಲಿ ಎಸ್ಸೆಸ್ಸೆಲ್ಸಿ ತರಗತಿಗಳು ನಡೆದವು.

ಹಂತ ಹಂತವಾಗಿ ಮಕ್ಕಳ ಸಂಖ್ಯೆ ಹೆಚ್ಚುತ್ತದೆ. ಸೋಮವಾರದಿಂದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದಾರೆ ಎಂದು ಶಿಕ್ಷಕರು, ಉಪನ್ಯಾಸಕರು ಭರವಸೆ ವ್ಯಕ್ತಪಡಿಸಿದರು.

ಸರ್ಕಾರಿ ಜೂನಿಯರ್ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಕೊರೊನಾ ಸೋಂಕಿನ ಕುರಿತು ಮುನ್ನೆಚ್ಚರಿಕೆ ಕ್ರಮಗಳನ್ನು ನಾಮಫಲಕದಲ್ಲಿ ಬರೆಯಲಾಗಿದೆ. ಇಲ್ಲಿಗೆ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು. ‘ಮೂರು ದಿನಗಳಿಂದ ಆವರಣವನ್ನು ಸ್ವಚ್ಛಗೊಳಿಸಿದ್ದೆವು’ ಎಂದು ತಯಾರಿಯ ಬಗ್ಗೆ ಶಿಕ್ಷಕರು ವಿವರಿಸಿದರು. ‘ನಾವು ಶಾಲೆಗೆ ಬರುತ್ತೇವೆ. ಯಾವುದೇ ಭಯವಿಲ್ಲ’ ಎನ್ನುವುದು ಇಲ್ಲಿನ ವಿದ್ಯಾರ್ಥಿಗಳ ಒಕ್ಕೊರಲ ಅಭಿಪ್ರಾಯವಾಗಿತ್ತು.

ಹೆಬ್ಬೂರು, ನಾಗವಲ್ಲಿ, ಉರ್ಡಿಗೆರೆ, ಬೆಳ್ಳಾವಿ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿಯೂ ವಿದ್ಯಾರ್ಥಿಗಳು ಶಾಲೆಗೆ ಲವಲವಿಕೆಯಿಂದ ಬಂದರು.

4ರಿಂದ ಖಾಸಗಿ ಶಾಲೆ: ನಗರದ ಬಹಳಷ್ಟು ಖಾಸಗಿ ಶಾಲೆಗಳು ವರ್ಷಾರಂಭದ ಮೊದಲ ದಿನ ತೆರೆಯಲಿಲ್ಲ. ಸೋಮವಾರದಿಂದ ಶಾಲೆಗಳು ಆರಂಭವಾಗಲಿವೆ ಎಂದು ಪೋಷಕರಿಗೆ ತಿಳಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.