ತುಮಕೂರು: ಕೋಲ್ಕತ್ತದ ವೈದ್ಯಕೀಯ ವಿದ್ಯಾರ್ಥಿನಿ ಕೊಲೆ ಖಂಡಿಸಿ ನಗರದಲ್ಲಿ ಶನಿವಾರ ವೈದ್ಯರು ಮುಷ್ಕರ ನಡೆಸಿದರು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಭಾಗಶಃ ಸ್ತಬ್ಧವಾಗಿದ್ದವು. ತುರ್ತು ಸೇವೆ ಹೊರೆತು ಪಡಿಸಿ ಎಲ್ಲ ಆರೋಗ್ಯ ಸೇವೆಗಳು ಸ್ಥಗಿತಗೊಂಡಿದ್ದವು.
ಸದಾ ಜನರಿಂದ ತುಂಬಿರುತ್ತಿದ್ದ ಜಿಲ್ಲಾ ಆಸ್ಪತ್ರೆ ಸಾರ್ವಜನಿಕರಿಲ್ಲದೆ ಬಿಕೋ ಎನ್ನುತ್ತಿತ್ತು. ಹೊರರೋಗಿ ವಿಭಾಗದ ಎರಡು ದಿಕ್ಕಿನ ಬಾಗಿಲಿಗೆ ಬೀಗ ಜಡಿಯಲಾಗಿತ್ತು. ವೈದ್ಯರ ಮುಷ್ಕರದ ವಿಷಯ ತಿಳಿಯದೆ ಹತ್ತಾರು ಕಿ.ಮೀ ದೂರದಿಂದ ಚಿಕಿತ್ಸೆಗಾಗಿ ಬಂದವರು ಬರಿಗೈನಲ್ಲಿ ವಾಪಸಾದರು. ಕೆಲವರು ‘ಸ್ವಲ್ಪ ಹೊತ್ತಿಗೆ ಬಾಗಿಲು ತೆಗೆಯಬಹುದು’ ಎಂದು ಆಸ್ಪತ್ರೆ ಮೆಟ್ಟಿಲು ಬಳಿಯೇ ಕಾಯುತ್ತ ಕುಳಿತಿದ್ದ ದೃಶ್ಯಗಳು ಕಂಡು ಬಂದವು.
ಬೆಳಗ್ಗೆ 6 ಗಂಟೆಯಿಂದಲೇ ಸೇವೆ ಬಂದ್ ಮಾಡಲಾಗಿತ್ತು. ಬಹುತೇಕ ಜನರಿಗೆ ವೈದ್ಯರ ಮುಷ್ಕರದ ಮಾಹಿತಿ ತಲುಪಿರಲಿಲ್ಲ. ಬಾಗಿಲಿಗೆ ಹಾಕಿದ್ದ ಬೀಗ ಕಂಡು ನೂರಾರು ಜನ ಆಸ್ಪತ್ರೆಯಿಂದ ಹಿಂದಿರುಗಿದರು. ‘ಮಧುಗಿರಿಯಿಂದ ನಸುಕಿನಲ್ಲಿಯೇ ಬಸ್ ಹತ್ತಿಕೊಂಡು ಬಂದಿದ್ದೇವೆ. ಈಗ ನೋಡಿದರೆ ಡಾಕ್ಟರ್ ಇಲ್ಲ ಎನ್ನುತ್ತಿದ್ದಾರೆ. ಕನಿಷ್ಠ ಔಷಧಿ ಕೊಡುವುದಕ್ಕಾದರೂ ವ್ಯವಸ್ಥೆ ಮಾಡಬೇಕಿತ್ತು. ಇತ್ತ ಬಸ್ ಚಾರ್ಜ್ ಉಳಿಯಲಿಲ್ಲ, ಅತ್ತ ಒಂದು ದಿನ ಕೂಲಿಯೂ ಸಿಗಲಿಲ್ಲ’ ಎಂದು ಶಾಂತಮ್ಮ ಬೇಸರಿಸಿದರು.
ಹೊರ ರೋಗಿ ವಿಭಾಗದಲ್ಲಿ ಚಿಕಿತ್ಸೆ, ಔಷಧಿ ಪಡೆಯಲು ಹೆಚ್ಚಿನ ಜನರು ಪ್ರತಿ ದಿನ ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಇದೇ ವಿಭಾಗ ಬಂದ್ ಮಾಡಿದ್ದರಿಂದ ಇಡೀ ಆಸ್ಪತ್ರೆ ಖಾಲಿ ಖಾಲಿಯಾಗಿತ್ತು. ಅಪಘಾತ ಮತ್ತು ತುರ್ತು ಚಿಕಿತ್ಸೆ, ಹೆರಿಗೆ, ಶಸ್ತ್ರಚಿಕಿತ್ಸೆ ವಿಭಾಗ ತೆರೆದಿತ್ತು.
ಪ್ರತಿಭಟನೆ: ಭಾರತೀಯ ವೈದ್ಯಕೀಯ ಸಂಘದಿಂದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ವೈದ್ಯರು ಪ್ರತಿಭಟನೆ ನಡೆಸಿದರು. ನೂರಾರು ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
‘ಇಡೀ ದೇಶದಲ್ಲಿ ಮುಷ್ಕರ ನಡೆಯುತ್ತಿದೆ. ಎಲ್ಲರು ಒಗ್ಗಟ್ಟಾಗಿ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿದ್ಯಾರ್ಥಿನಿ ಕೊಲೆ ಅಮಾನವೀಯ ಕೃತ್ಯ. ಎಲ್ಲ ಸಂಘಟನೆಯವರು ಸ್ವಯಂ ಪ್ರೇರಿತವಾಗಿ ಕೈಜೋಡಿಸಬೇಕು. ವೈದ್ಯಕೀಯ ವಲಯಕ್ಕೆ ತೊಂದರೆಯಾದಾಗ ಎಲ್ಲರು ಜತೆ ನಿಲ್ಲಬೇಕು. ಕೊಲೆಯ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ರೂಪಿಸಲಾಗುವುದು’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಸ್ಗರ್‌ಬೇಗ್ ತಿಳಿಸಿದರು.
ಅತ್ಯಾಚಾರ, ಕೊಲೆ ಖಂಡನೀಯ. ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿನಿ ಕೊಲೆ ಖಂಡಿಸಿ ಶ್ರೀದೇವಿ ವೈದ್ಯಕೀಯ ಕಾಲೇಜು, ಸಿದ್ಧಗಂಗಾ ಮಹಾವಿದ್ಯಾಲಯ ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ರತಿಭಟನೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.