ಬುಧವಾರ, ಆಗಸ್ಟ್ 17, 2022
28 °C
ಗುಬ್ಬಿ: ಜೆಡಿಎಸ್‌, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ನಡುವೆ ಸ್ಪರ್ಧೆ

ರಂಗೇರುತ್ತಿದೆ ಚುನಾವಣಾ ಕಣ

ಶಾಂತರಾಜು ಎಚ್.ಜಿ. Updated:

ಅಕ್ಷರ ಗಾತ್ರ : | |

Prajavani

ಗುಬ್ಬಿ: ಕೆಲ ತಿಂಗಳುಗಳಿಂದ ಕೊರೊನಾ ಗುಂಗಿನಲ್ಲಿದ್ದ ತಾಲ್ಲೂಕಿನ ಜನರು ಈಗ ಎಲ್ಲವನ್ನು ಮರೆತು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸಕ್ರಿಯರಾಗುತ್ತಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷರಹಿತವಾಗಿದ್ದರೂ, ತಾಲ್ಲೂಕಿನಲ್ಲಿ ಮೂರು ಪ್ರಮುಖ ಪಕ್ಷಗಳ ನಾಯಕರೂ ನಿಷ್ಠಾವಂತ ಕಾರ್ಯಕರ್ತರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಮುಂದಿನ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ಅಡಿಪಾಯ ಹಾಕಿಕೊಳ್ಳುವ ಯತ್ನದಲ್ಲಿದ್ದಾರೆ.

ಬಿಜೆಪಿ ಸ್ಥಳೀಯ ನಾಯಕರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಾಧನೆಗಳನ್ನು ಮುಂದಿಟ್ಟುಕೊಂಡು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರ ಮಾರ್ಗದರ್ಶನದಲ್ಲಿ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯುವ ತವಕದಲ್ಲಿದ್ದಾರೆ. ಇದಕ್ಕಾಗಿ ಬಿಜೆಪಿಯಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಸಿದ್ಧತೆ ನಡೆಯುತ್ತಿದೆ.

ಜೆಡಿಎಸ್‌ನಿಂದ ಒಂದು ಹೆಜ್ಜೆ ಹೊರಗೆ ಇಟ್ಟಂತಿರುವ ಶಾಸಕ ಎಸ್‌.ಆರ್.ಶ್ರೀನಿವಾಸ್, ತಮ್ಮ ಮುಂದಿನ ರಾಜಕೀಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಬೆನ್ನೆಲುಬಾಗಿ ನಿಲ್ಲುವಂತಹ ಕಾರ್ಯಕರ್ತರನ್ನು ಗೆಲ್ಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ತಮ್ಮದೇ ಪಡೆ ಕಟ್ಟಿಕೊಂಡು ತಾಲ್ಲೂಕಿನಾದ್ಯಂತ ಚುನಾವಣಾ ಕಣವನ್ನು ರಂಗೇರಿಸುತ್ತಿದ್ದಾರೆ.

ಕಾಂಗ್ರೆಸ್‌ನಲ್ಲಿ ಸ್ಥಳೀಯವಾಗಿ ವರ್ಚಸ್ಸುಳ್ಳ ನಾಯಕರು ಇಲ್ಲದಿರುವುದು ಪಕ್ಷಕ್ಕೆ ಹಿನ್ನಡೆಯಾಗಿದೆ. ಹೊನ್ನಗಿರಿ ಗೌಡರು ಕಾಂಗ್ರೆಸ್‌ನಲ್ಲಿದ್ದರೂ ಸ್ಥಳೀಯ ನಾಯಕರಿಂದ ಅಂತರ ಕಾಪಾಡಿಕೊಂಡಿರುವುದು ಪಕ್ಷಕ್ಕೂ ಹಿನ್ನಡೆಯಾಗಿದೆ. ಹೀಗಾಗಿ ಕಾಂಗ್ರೆಸ್‌ನಲ್ಲಿ ಜಿಲ್ಲಾಮಟ್ಟದ ನಾಯಕರಾದ ಡಾ. ಜಿ.ಪರಮೇಶ್ವರ, ಹಾಲಪ್ಪ ಹಾಗೂ ಕೆ.ಎನ್.ರಾಜಣ್ಣ ಅವರನ್ನೇ ನೆಚ್ಚಿಕೊಳ್ಳು
ವಂತಾಗಿದೆ.

ತಾಲ್ಲೂಕಿನ ಎರಡು ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ ಬಹಿಷ್ಕರಿಸಿದ್ದರೂ ಆ ಬಗ್ಗೆ ಯಾವ ಪಕ್ಷದ ನಾಯಕರು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಶೇ 50 ಸೀಟುಗಳು ಮಹಿಳೆಯರಿಗೆ ಮೀಸಲಿರುವ ಕಾರಣ ಹೊಸ ಅಭ್ಯರ್ಥಿಗಳು ಕಣಕ್ಕೆ ಬರುತ್ತಿರುವುದು ಚುನಾವಣಾ ಕಣದ ಕಳೆಯನ್ನು ಹೆಚ್ಚಿಸಿದೆ.

ತಾಲ್ಲೂಕಿನ ಕೆಲವೆಡೆ ಅವಿರೋಧ ಆಯ್ಕೆ, ಹರಾಜು ಪ್ರಕ್ರಿಯೆ ಮೂಲಕ ಆಯ್ಕೆಯಾಗುವ ಪ್ರಯತ್ನಗಳೂ ನಡೆದಿವೆ. ತಾಲ್ಲೂಕಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಣಾಹಣಿ ನಡೆಸುತ್ತಿದ್ದು, ಕಾಂಗ್ರೆಸ್ ಅಸ್ಥಿತ್ವಕ್ಕಾಗಿ ಹೋರಾಟ ನಡೆಸುವಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು