ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಪಾರ್ಕ್ ಪ್ರಗತಿ ಮರೆತ ಪಾಲಿಕೆ

ಉದ್ಯಾನ ಜಾಗದಲ್ಲಿ ಮನೆ, ಶೆಡ್‌ ನಿರ್ಮಾಣ: ಒತ್ತುವರಿ ತೆರವಿಗೆ ನಿರಾಸಕ್ತಿ
ಮೈಲಾರಿ ಲಿಂಗಪ್ಪ
Published 29 ಜೂನ್ 2024, 6:13 IST
Last Updated 29 ಜೂನ್ 2024, 6:13 IST
ಅಕ್ಷರ ಗಾತ್ರ

ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 520 ಉದ್ಯಾನವನಗಳಿದ್ದು, ಇದರಲ್ಲಿ ಬಹುತೇಕ ಒತ್ತುವರಿಯಾಗಿವೆ. ಪಾರ್ಕ್‌ಗಳ ಸಮೀಕ್ಷೆ ನಡೆಸಿ ಹಲವು ವರ್ಷಗಳು ಕಳೆದಿದ್ದು, ಒತ್ತುವರಿಗೆ ಸಂಬಂಧಿಸಿದ ಮಾಹಿತಿಯೇ ಅಧಿಕಾರಿಗಳ ಬಳಿ ಇಲ್ಲ!

ಪಾಲಿಕೆಯ ಆಸ್ತಿಯಾಗಿರುವ ಉದ್ಯಾನಗಳು ಎಲ್ಲೆಲ್ಲಿ ಇವೆ? ಅದರ ಸ್ಥಿತಿಗತಿ ಹೇಗಿದೆ? ತೆರವು, ರಕ್ಷಣೆಗೆ ಏನೆಲ್ಲ ಕ್ರಮಕೈಗೊಳ್ಳಬೇಕು ಎಂಬುವುದರ ಬಗ್ಗೆ ನಿಗಾ ವಹಿಸಿಲ್ಲ. ಪಾರ್ಕ್‌ ಒತ್ತುವರಿ ಮಾಡಿಕೊಂಡವರು ಮನೆ, ಕಾಂಪೌಂಡ್‌, ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ. ಕೆಲವು ಕಡೆಗಳಲ್ಲಿ ಮಾತ್ರ ಒತ್ತುವರಿ ತೆರವು ಮಾಡಲಾಗಿದೆ.

ಬಡ್ಡಿಹಳ್ಳಿ, ಎಸ್‌.ಎಸ್‌.ಪುರಂ, ಸಪ್ತಗಿರಿ ಬಡಾವಣೆ, ಮರಳೂರು ಭಾಗದಲ್ಲಿ ಒತ್ತುವರಿ ತೆರವು ಮಾಡಲಾಗಿದೆ. ತೆರವು ಕಾರ್ಯಾಚರಣೆ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಕೆಲವು ಕಡೆಗಳಲ್ಲಿ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದು, ತೆರವುಗೊಳಿಸಲು ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ. ಸಾರ್ವಜನಿಕರ ಆಸ್ತಿಯನ್ನು ರಕ್ಷಿಸಲು ಪಾಲಿಕೆಗೆ ಸಾಧ್ಯವಾಗುತ್ತಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪಾಲಿಕೆ, ಸಾರ್ಟ್‌ ಸಿಟಿ, ನಗರಾಭಿವೃದ್ಧಿ ಪ್ರಾಧಿಕಾರದಿಂದ 150 ಪಾರ್ಕ್‌ ಅಭಿವೃದ್ಧಿ ಪಡಿಸಲಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಸುಂದರಗೊಳಿಸಿದ ನಂತರ ಅದರ ನಿರ್ವಹಣೆ ಮಾಡುತ್ತಿಲ್ಲ. ಸಂರಕ್ಷಣೆಗೆ ಸಿಬ್ಬಂದಿಯನ್ನೂ ನಿಯೋಜಿಸಿಲ್ಲ. ಉದ್ಯಾನವನಗಳು ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿವೆ. ‘ಅಧಿಕಾರಿಗಳು ಆಗಾಗ ಹತ್ತಿರದ ಪಾರ್ಕ್‌ಗಳಿಗೆ ಭೇಟಿ ಕೊಟ್ಟು ಹೋಗುತ್ತಾರೆ. ಇದರಿಂದ ಯಾವುದೇ ಬದಲಾವಣೆ ಸಾಧ್ಯವಿಲ್ಲ’ ಎಂದು ನಗರದ ನಿವಾಸಿ ಅಮ್ಜಾದ್‌ ದೂರಿದರು.

ನಗರದ ಹೃದಯ ಭಾಗವಾದ ಜೂನಿಯರ್‌ ಕಾಲೇಜು ಆವರಣದಲ್ಲಿರುವ ಆಲದ ಮರದ ಪಾರ್ಕ್‌ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಯಿತು. ‘ಪ್ರವಾಸಿ ತಾಣವಾಗಿ ಬದಲಾಯಿಸಲಾಗುವುದು’ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಭಾಷಣ ಬಿಗಿದರು. ಅವರ ಮಾತುಗಳು ಕೇವಲ ಕಾರ್ಯಕ್ರಮಕ್ಕೆ ಸೀಮಿತವಾದವು. ಈಗ ಇದೇ ಪಾರ್ಕ್‌ ತ್ಯಾಜ್ಯ ಸಂಗ್ರಹಣೆಯ ಸ್ಥಳವಾಗಿ ಬದಲಾಗಿದೆ. ರಾತ್ರಿಯ ಸಮಯದಲ್ಲಿ ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ತಲೆಯೂ ಹಾಕುತ್ತಿಲ್ಲ.

ಪಾಲಿಕೆ ವ್ಯಾಪ್ತಿಯ ಬಹುತೇಕ ಪಾರ್ಕ್‌ಗಳ ಸ್ಥಿತಿ ಇದೇ ರೀತಿ ಇದೆ. ಇವುಗಳ ರಕ್ಷಣೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಹಲವು ಕಡೆ ಪಾರ್ಕ್‌ ಸುತ್ತ ಭದ್ರತೆ ಸಲುವಾಗಿ ಅಳವಡಿಸಿರುವ ತಂತಿಗಳು ರಸ್ತೆಗೆ ಉರುಳಿವೆ. ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್‌ ದೀಪಗಳು ಹಾಳಾಗಿವೆ. ಉದ್ಯಾನದಲ್ಲಿ ಕಸ ತುಂಬಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸ್ವಚ್ಛತೆಗೆ ಆದ್ಯತೆ ನೀಡಿಲ್ಲ.

ತುಮಕೂರು ಎಸ್‌.ಎಸ್‌.ಪುರಂ ಪಾರ್ಕ್‌ನ ತಂತಿ ಬೇಲಿ ರಸ್ತೆಗೆ ವಾಲಿರುವುದು
ತುಮಕೂರು ಎಸ್‌.ಎಸ್‌.ಪುರಂ ಪಾರ್ಕ್‌ನ ತಂತಿ ಬೇಲಿ ರಸ್ತೆಗೆ ವಾಲಿರುವುದು

‘ವಿಶ್ರಾಂತಿ ಪಡೆಯಲು, ಮನಃಶಾಂತಿಗಾಗಿ ಪಾರ್ಕ್‌ಗಳಿಗೆ ಹೋದರೆ ಅಲ್ಲಿನ ಅವ್ಯವಸ್ಥೆ, ಸೊಳ್ಳೆ ಕಾಟದಿಂದ ಆರೋಗ್ಯ ಹದಗೆಡುತ್ತದೆ. ಇಲ್ಲಿನ ಗಿಡಗಂಟಿಗಳನ್ನು ತೆರವುಗೊಳಿಸಿಲ್ಲ, ಉದ್ಯಾನಗಳು ಹಾವುಗಳ ವಾಸ ಸ್ಥಾನಗಳಾಗಿವೆ. ನಿರ್ವಹಣೆಗೆ ಒತ್ತಾಯಿಸಿ ಹಲವು ಬಾರಿ ಪಾಲಿಕೆಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಎಸ್‌.ಎಸ್‌.ಪುರಂ ನಿವಾಸಿ ಜಗದೀಶ್‌ ಅಸಮಾಧಾನ ವ್ಯಕ್ತಪಡಿಸಿದರು.

ತುಮಕೂರಿನ ರಾಮಕೃಷ್ಣ ನಗರದ ಪಾರ್ಕ್‌ನಲ್ಲಿ ಗಿಡ ಬಳ್ಳಿ ಹಬ್ಬಿರುವುದು
ತುಮಕೂರಿನ ರಾಮಕೃಷ್ಣ ನಗರದ ಪಾರ್ಕ್‌ನಲ್ಲಿ ಗಿಡ ಬಳ್ಳಿ ಹಬ್ಬಿರುವುದು

ಪಾರ್ಕ್‌ ಕೆರೆ ಅಭಿವೃದ್ಧಿಗೆ ₹25 ಕೋಟಿ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯ ಕೆರೆ ಪಾರ್ಕ್‌ಗಳ ಅಭಿವೃದ್ಧಿಗೆ ₹25 ಕೋಟಿ ವೆಚ್ಚ ಮಾಡಲಾಗುತ್ತಿದೆ. ₹5 ಕೋಟಿಯಲ್ಲಿ ಉದ್ಯಾವನನಗಳ ಅಭಿವೃದ್ಧಿ ಕಾರ್ಯ ನಡೆಯಲಿದೆ. ಉಳಿದ ₹20 ಕೋಟಿಯಲ್ಲಿ ಉಪ್ಪಾರಹಳ್ಳಿ ಸತ್ಯಮಂಗಲ ಬಡ್ಡಿಹಳ್ಳಿ ಸಿದ್ಧನಕಟ್ಟೆ ಕೆರೆಯ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಕೆರೆಗಳಿಗೆ ಕೊಳಚೆ ನೀರು ಹರಿದು ಹೋಗುವುದನ್ನು ತಡೆದು ಮಳೆ ನೀರು ಮಾತ್ರ ಸಂಗ್ರಹವಾಗುವಂತೆ ಮಾಡಲಾಗುತ್ತಿದೆ. ವಾಕಿಂಗ್‌ ಪಾತ್‌ ಹೂಳು ತೆಗೆಯುವುದು ಪಾರ್ಕ್‌ ನಿರ್ಮಾಣ ಮತ್ತು ಗಿಡ ನೆಡಲು ಹಣ ವಿನಿಯೋಗಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT