ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಇನ್ನೂ ಬಾರದ ಕೋವಿಡ್‌ ಪರಿಹಾರ: 84 ಕುಟುಂಬಕ್ಕೆ ಹಣ ಪಾವತಿಯಾಗಿಲ್ಲ

ಇನ್ನೂ 84 ಕುಟುಂಬಕ್ಕೆ ಹಣ ಪಾವತಿಯಾಗಿಲ್ಲ
Published 24 ಜನವರಿ 2024, 6:44 IST
Last Updated 24 ಜನವರಿ 2024, 6:44 IST
ಅಕ್ಷರ ಗಾತ್ರ

ತುಮಕೂರು: ಕೋವಿಡ್‌ನಿಂದ ಮೃತಪಟ್ಟು ವರ್ಷಗಳೇ ಕಳೆದಿದ್ದರೂ ಮೃತಪಟ್ಟವರ ಕುಟುಂಬದವರಿಗೆ ಪರಿಹಾರದ ಹಣ ಇನ್ನೂ ತಲುಪಿಲ್ಲ. ಮೃತರ ಅವಲಂಬಿತರು ಸರ್ಕಾರಿ ಕಚೇರಿಗಳಿಗೆ ಅಲೆದು ಚಪ್ಪಲಿ ಸವೆಸಿದ್ದು ಬಿಟ್ಟರೆ ಪರಿಹಾರ ಮಾತ್ರ ಸಿಕ್ಕಿಲ್ಲ.

ಕೋವಿಡ್‌ ಮೊದಲನೇ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಒಟ್ಟು 3,060 ಜನ ಕೋವಿಡ್‌ ವೈರಾಣುವಿನಿಂದ ಸಾವನ್ನಪ್ಪಿದ್ದರು. ಇದರಲ್ಲಿ 2,976 ಮಂದಿಯ ಕುಂಟುಬಸ್ಥರಿಗೆ ಪರಿಹಾರದ ಹಣ ಪಾವತಿಯಾಗಿದ್ದು, ಇನ್ನೂ 84 ಜನ ಅವಲಂಬಿತರ ಖಾತೆಗಳಿಗೆ ಹಣ ವರ್ಗಾವಣೆಯಾಗಿಲ್ಲ. ತುಮಕೂರು ತಾಲ್ಲೂಕಿನಲ್ಲಿಯೇ ಇನ್ನೂ 37 ಜನರಿಗೆ ಹಣ ಬರಬೇಕಿದೆ.

ಬಿಪಿಎಲ್‌ ಕುಟುಂಬದವರಿಗೆ ₹1 ಲಕ್ಷ, ಇತರರಿಗೆ ₹50 ಸಾವಿರ ಪರಿಹಾರ ಘೋಷಣೆ ಮಾಡಿತ್ತು. ಜಿಲ್ಲೆಯಲ್ಲಿ ಬಿಪಿಎಲ್‌ ಕಾರ್ಡ್‌ ಹೊಂದಿದ 785 ಮಂದಿ ಕೋವಿಡ್‌ಗೆ ಬಲಿಯಾಗಿದ್ದು, ಅವರ ಕುಟುಂಬಕ್ಕೆ ತಲಾ ₹1 ಲಕ್ಷ ಪರಿಹಾರದ ಚೆಕ್‌ ವಿತರಿಸಲಾಗಿದೆ. ಪರಿಹಾರದ ಹಣಕ್ಕಾಗಿ ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಅರ್ಜಿಯ ಜತೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದವರ ಖಾತೆಗಳಿಗೆ ಈಗಾಗಲೇ ಹಣ ವರ್ಗವಾಣೆ ಮಾಡಲಾಗಿದೆ.

ಕೋವಿಡ್‌ ಸಮಯದಲ್ಲಿ ಮನೆಯ ಆಧಾರಸ್ತಂಭ ಆಗಿದ್ದವರನ್ನು ಕಳೆದುಕೊಂಡ ಕುಟುಂಬಗಳು ಅಕ್ಷರಶಃ ಬೀದಿಗೆ ಬಂದಿದ್ದವು. ಒಂದೊತ್ತಿನ ಊಟಕ್ಕೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಲವರು ಕೋವಿಡ್‌ ನೀಡಿದ ಹೊಡೆತದಿಂದ ಇನ್ನೂ ಸುಧಾರಿಸಿಕೊಂಡಿಲ್ಲ. ಸರ್ಕಾರದ ನೆರವನ್ನು ನಂಬಿ ಕೂತವರಿಗೆ ಇದುವರೆಗೂ ಪರಿಹಾರದ ಹಣ ಕೈ ಸೇರಿಲ್ಲ. ತಮ್ಮವರನ್ನು ಕಳೆದುಕೊಂಡ ತುಂಬಾ ಜನ ಮಕ್ಕಳ ವಿದ್ಯಾಭ್ಯಾಸ ಹಾಗೂ ಕುಟುಂಬವನ್ನು ಮುಂದುವರಿಸಲು ಹೆಣಗಾಡುತಿದ್ದಾರೆ.

ಪರಿಹಾರದ ಹಣ ನೀಡುವ ಕೆಲಸಕ್ಕೆ ವೇಗ ಕೊಟ್ಟು, ಅರ್ಹರಿಗೆ ಹಣ ತಲುಪಿಸಿ ಅವರ ಜೀವನ ಸುಧಾರಣೆಗೆ ಸಹಾಯದ ಹಸ್ತ ಚಾಚಬೇಕಿದ್ದ ಅಧಿಕಾರಿಗಳು ಕಚೇರಿ ಬಿಟ್ಟು ಹೊರಗಡೆ ಬರುತ್ತಿಲ್ಲ. ಸಮಸ್ಯೆ ಕೇಳಲು ಕಚೇರಿಗೆ ಬಂದವರಿಗೆ ‘ಬ್ಯಾಂಕ್‌ ಖಾತೆ ಅಪ್‌ಡೇಟ್‌, ಆಧಾರ್‌ ಲಿಂಕ್‌ ಜೋಡಣೆ ಮಾಡಬೇಕು’ ಎಂದು ಇಲ್ಲ–ಸಲ್ಲದ ಸಬೂಬು ಹೇಳಿ ವಾಪಸ್‌ ಕಳುಹಿಸುತ್ತಿದ್ದಾರೆ ಎಂದು ಪರಿಹಾರಕ್ಕೆ ಅಲೆಯುತ್ತಿರುವ ವ್ಯಕ್ತಿಯೊಬ್ಬರು ಆರೋಪಿಸುತ್ತಾರೆ.

‘ಬ್ಯಾಂಕ್‌ ಖಾತೆ ಹಾಗೂ ಆಧಾರ್‌ ಸಂಖ್ಯೆ ಜೋಡಣೆ ಆಗದಿರುವುದು, ಈ ಎರಡೂ ಸಂಖ್ಯೆಗಳು ಎನ್‌ಪಿಸಿಐ ಪೋರ್ಟಲ್‌ನಲ್ಲಿ ಮ್ಯಾಪಿಂಗ್‌ ಆಗದಿರುವುದರಿಂದ ಹಣ ಪಾವತಿ ವಿಳಂಬವಾಗುತ್ತಿದೆ. ಸಂತ್ರಸ್ತರಿಗೆ ಇದನ್ನು ಸರಿ ಮಾಡಿಸುವಂತೆ ಹಲವು ಬಾರಿ ಹೇಳಿದರೂ ಹೆಚ್ಚಿನ ಪ್ರಯೋಜನವಾಗಿಲ್ಲ’ ಎಂಬುವುದು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳ ವಿವರಣೆ.

**

ಕೋವಿಡ್‌ ಪರಿಹಾರ ಬಾಕಿ

ತಾಲ್ಲೂಕು;ಬಾಕಿ

ಚಿಕ್ಕನಾಯಕನಹಳ್ಳಿ;2

ಗುಬ್ಬಿ;2

ಕೊರಟಗೆರೆ;8

ಕುಣಿಗಲ್‌;1

ಮಧುಗಿರಿ;3

ಪಾವಗಡ;7

ಶಿರಾ;7

ತಿಪಟೂರು;9

ತುಮಕುರು;37

ತುರುವೇಕೆರೆ;8

ಒಟ್ಟು;84

ಎನ್‌ಪಿಸಿಐ ಮ್ಯಾಪಿಂಗ್‌ ಸಮಸ್ಯೆಯಿಂದ ತಡ ತುಮಕೂರಿನಲ್ಲಿ 37 ಕುಟುಂಬಗಳಿಗೆ ಬಾರದ ಹಣ ಜಿಲ್ಲೆಯ ಅಧಿಕಾರಿಗಳ ನಿರ್ಲಕ್ಷ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT