ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಾ: ಬೀದಿ ನಾಯಿ ಹಾವಳಿಗೆ ಹೈರಾಣಾದ ಜನ

Published 5 ಜುಲೈ 2024, 14:29 IST
Last Updated 5 ಜುಲೈ 2024, 14:29 IST
ಅಕ್ಷರ ಗಾತ್ರ

ಶಿರಾ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಒಂದೆಡೆ ಬೀದಿ ನಾಯಿ, ಮತ್ತೊಂದು ಕಡೆ ಕೋತಿ, ಬೀಡಾದಿ ದನಗಳ ಉಪಟಳವೂ ಹೆಚ್ಚುತ್ತಿದ್ದು ಜನ ಹೈರಾಣಾಗುತ್ತಿದ್ದಾರೆ.

ನಗರದಲ್ಲಿ ಇತ್ತೀಚೆಗೆ ಶಿರಾಣಿಮೊಹಲ್ಲಾದಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಮಕ್ಕಳು ಸೇರಿದಂತೆ ಏಳು ಜನರಿಗೆ ನಾಯಿ ಕಚ್ಚಿ ಗಾಯಗೊಳಿಸಿದ ಘಟನೆ ಮಾಸುವ ಮೊದಲೇ ಮತ್ತೆ ವಿದ್ಯಾನಗರ, ಕೋಟೆ ಬಡಾವಣೆ, ಸಪ್ತಗಿರಿ ಬಡಾವಣೆ, ಕರಾರಿ ಮೊಹಲ್ಲಾ, ಲಾಡುಪುರ, ಪೇಷ್ಮಾ ಮೊಹಲ್ಲಾ, ಜಾಮೀಯಾ ನಗರ ಸೇರಿದಂತೆ ನಗರದ ವಿವಿಧೆಡೆ ಒಂದೇ ದಿನ 23 ಜನರಿಗೆ ಹುಚ್ಚು ನಾಯಿ ಕಚ್ಚಿ ಗಾಯಗೊಳಿಸಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ನಗರದ ಪ್ರಮುಖ ರಸ್ತೆಯಲ್ಲಿ ಹಿಂಡು ಹಿಂಡಾಗಿ ಒಡಾಡುವ ಬೀದಿ ನಾಯಿಗಳಿಂದ ಸಂಚಾರಕ್ಕೂ ತೊಂದರೆಯಾಗುತ್ತಿದೆ.

ರಸ್ತೆಯಲ್ಲಿ ಚಿಕ್ಕ ಮಕ್ಕಳು, ಹಿರಿಯ ನಾಗರಿಕರು ಓಡಾಟ ನಡೆಸುವುದು ಕಷ್ಟವಾಗಿದೆ. ನಾಯಿಗಳು ಮಕ್ಕಳನ್ನು ಓಡಿಸಿಕೊಂಡು ಬರುತ್ತಿದ್ದು ಅನೇಕರು ಬಿದ್ದು ಗಾಯಗೊಂಡಿದ್ದಾರೆ.

‘ನಗರಸಭೆ ಸಾಮಾನ್ಯ ಸಭೆಯಲ್ಲಿ ಹಲವು ಬಾರಿ ಚರ್ಚೆಗೆ ಬಂದರೂ ಯಾವುದೇ ಪ್ರಯೋಜನವಾಗಿಲ್ಲ. ಬೀದಿ ನಾಯಿಗಳನ್ನು ಹಿಡಿಯಲು ಸಾಧ್ಯವಿಲ್ಲ, ಹಿಡಿದರೆ ಪ್ರಾಣಿ ದಯಾ ಸಂಘದವರು ಬರುತ್ತಾರೆ. ಆದ್ದರಿಂದ ಏನು ಮಾಡಲು ಸಾಧ್ಯವಿಲ್ಲ ಎಂದು ನಗರಸಭೆ ಅಧ್ಯಕ್ಷೆ ಪೂಜಾ ಪ್ರತಿಕ್ರಿಯಿಸುತ್ತಾರೆ. ಅವುಗಳನ್ನು ಹಿಡಿದು ಕೊಲ್ಲುವುದು ಬೇಡ, ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಿದರೆ ಅನುಕೂಲವಾಗುತ್ತದೆ ಎಂದು ಕೆಲವು ಸದಸ್ಯರು ಸಲಹೆ ನೀಡಿದರೂ ಸಹ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ’ ಎಂದು ಜನರು ಹೇಳಿದ್ದಾರೆ.

ನಗರದಲ್ಲಿ ಒಂದೇ ದಿನ 23 ಜನರಿಗೆ ಹುಚ್ಚು ನಾಯಿ ಕಚ್ಚಿ ಗಾಯಗೊಳಿಸಿದರೂ ಆ ಬಗ್ಗೆ ನಗರಸಭೆಯಲ್ಲಿ ತುರ್ತು ಸಭೆ ಕರೆದು ಚರ್ಚೆ ಮಾಡುವ ಗೋಜಿಗೂ ನಗರಸಭೆ ಚುನಾಯಿತ ಪ್ರತಿನಿಧಿಗಳು ಮುಂದಾಗಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ನಾಗರಿಕರಿಂದ ತೀವ್ರ ಒತ್ತಡ ಬಂದಿದ್ದರಿಂದ ಈಗ ಬೀದಿ ನಾಯಿಗಳಿಗೆ ರೇಬಿಸ್ ಚುಚ್ಚು ಮದ್ದು ನೀಡುತ್ತಿದ್ದಾರೆ. ಸಂತಾನ ಶ‌ಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲು ಟೆಂಡರ್ ಕರೆಯಲಾಗಿದೆ.

ಹೊಂದಾಣಿಕೆ ಕೊರತೆ: ಅಧ್ಯಕ್ಷರು ಮತ್ತು ಪೌರಾಯುಕ್ತರ ನಡುವೆ ಹೊಂದಾಣಿಕೆ ಕೊರತೆ ಕಾರಣ ನಗರಸಭೆ ಆಡಳಿತ ಬಿಗಿತಪ್ಪುವಂತಾಗಿದೆ. ಚುನಾವಣೆ ನೀತಿ ಸಂಹಿತೆ ಸಮಯದಲ್ಲಿ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ನಗರಸಭೆ ಜನರ ಮೆಚ್ಚುಗೆ ಗಳಿಸಿತ್ತು. ನಗರದಲ್ಲಿ ಹಲವು ವರ್ಷಗಳಿಂದ ಹೂಳು ತುಂಬಿದ್ದ ಚರಂಡಿಗಳನ್ನು ಸ್ವಚ್ಛಗೊಳಿಸುವ ಮೂಲಕ ಮಳೆ ಬಂದರೆ ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದಾರೆ. ನೀತಿಸಂಹಿತೆ ಮುಗಿದ ನಂತರ ಮತ್ತೆ ಸಮಸ್ಯೆ ಹೆಚ್ಚಾಗುವಂತಾಗಿದೆ ಎನ್ನುತ್ತಾರೆ ನಗರ ನಿವಾಸಿಗಳು

ಶಿರಾದ ಬಾಲಾಜಿನಗರದಲ್ಲಿ ನಾಯಿಗಳ ಹಿಂಡು
ಶಿರಾದ ಬಾಲಾಜಿನಗರದಲ್ಲಿ ನಾಯಿಗಳ ಹಿಂಡು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT