ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಶಾನದಲ್ಲಿ ಪೈಪ್‌ಲೈನ್‌: ಸಾರ್ವಜನಿಕರ ಆಕ್ರೋಶ

Published 24 ಮಾರ್ಚ್ 2024, 7:54 IST
Last Updated 24 ಮಾರ್ಚ್ 2024, 7:54 IST
ಅಕ್ಷರ ಗಾತ್ರ

ಶಿರಾ: ನಗರದ ಸ್ಮಶಾನದಲ್ಲಿ ಶುಕ್ರವಾರ ಗ್ಯಾಸ್‌ ಪೈಪ್‌ಲೈನ್ ಕಾಮಗಾರಿ ನಡೆಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ‌ ಕಾರಣವಾಗಿದೆ.

ಪೈಪ್‌ಲೈನ್‌ ಕಾಮಗಾರಿ ಪ್ರಾರಂಭದಿಂದಲೂ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ನಗರಸಭೆ ತುರ್ತು ಸಭೆಯಲ್ಲಿ ಸಹ ಚರ್ಚೆ ನಡೆಸಿ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಲಾಗಿತ್ತು. ಗ್ಯಾಸ್ ಏಜೆನ್ಸಿ ಅವರು ತೆಗೆದುಕೊಂಡಿರುವ ಮುಂಜಾಗ್ರತೆ ಕ್ರಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟು ಕಾಮಗಾರಿ ನಡೆಸುವಂತೆ ಸೂಚಿಸಿದ್ದರು.

ನಗರದಲ್ಲಿರುವ ಏಕೈಕ ಹಿಂದೂ ಸ್ಮಶಾನದಲ್ಲಿ ಯಾವುದೇ ಮುಂಜಾಗ್ರತೆ ವಹಿಸದೆ ಏಕಾಏಕಿ ಕಾಮಗಾರಿ ನಡೆಸಿದ್ದಾರೆ. ಕೇವಲ ಮೂರು ಅಡಿಗಳಷ್ಟು ಆಳದಲ್ಲಿ ಪೈಪ್‌ ಹಾಕಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಮುಂದಿನ ದಿನಗಳಲ್ಲಿ ಅಂತ್ಯಕ್ರಿಯೆ ನಡೆಸುವ ಸಮಯದಲ್ಲಿ ಮೃತದೇಹ ಹೂಳಲು ಗುಂಡಿ ತೆಗೆದಾಗ ಪೈಪ್‌ಲೈನ್‌ಗೆ ಏನಾದರೂ ಹಾನಿಯಾಗಿ ಅನಿಲ ಸೋರಿಕೆಯಾದರೆ ಯಾರು ಹೊಣೆಯಾಗುತ್ತಾರೆ? ಪೈಪ್‌ಲೈನ್ ನಾಲ್ಕು ಅಡಿ ಆಳದಲ್ಲಿ‌ ಹಾಕಿದ್ದು ಗುಣಿಯನ್ನು ಅದಕ್ಕಿಂತ ಆಳ ತೆಗೆಯುವುದರಿಂದ ಅನಾಹುತವಾಗುವ ಸಾಧ್ಯತೆ ಹೆಚ್ಚಿದೆ ಎನ್ನುವುದು ಸ್ಥಳೀಯರ ದೂರು.

ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಗುರುಮೂರ್ತಿ ಗೌಡ ಮಾತನಾಡಿ, ನ್ಯಾಯಾಲಯದ ಕಟ್ಟಡ, ಸ್ಮಶಾನ, ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ವಿದ್ಯಾರ್ಥಿ ನಿಲಯ, ಪೋಲಿಸ್ ಉಪ-ಅಧೀಕ್ಷಕರ ಕಚೇರಿ, ನ್ಯಾಯಾಧೀಶರ ವಸತಿ ಗೃಹ, ಪ್ರಾಥಮಿಕ ಕೃಷಿ ಅಭಿವೃದ್ಧಿ ಬ್ಯಾಂಕ್, ಬೆಸ್ಕಾಂ, ರಾಮ ದೇವಾಲಯ, ಸಾರ್ವಜನಿಕ ವಸತಿ ಗೃಹಗಳು ಹಾಗೂ ಪ್ರೆಸಿಡೆನ್ಸಿ ಶಾಲೆ ಇರುವ ಜನ ನಿಬಿಡ ಪ್ರದೇಶದ ಮೂಲಕ‌ ಪೈಪ್‌ಲೈನ್ ಹಾದು ಹೋಗುವುದರಿಂದ ಮುಂದಿನ‌ ದಿನಗಳಲ್ಲಿ ಅಪಾಯಕಾರಿಯಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ನಗರದ ಹೊರವಲಯದಲ್ಲಿ ಸುರಕ್ಷತಾ ಕ್ರಮಗಳ ಮೂಲಕ ಕಾಮಗಾರಿ ಕೈಗೊಳ್ಳುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡುವಂತೆ ವಕೀಲರ ಸಂಘದಿಂದ ತಹಶೀಲ್ದಾರ್ ಹಾಗೂ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದರು.

ಸ್ಮಶಾನದಲ್ಲಿ ಕಾಮಗಾರಿ ಕೈಗೊಳ್ಳಲು ನಗರಸಭೆ ಅನುಮತಿ ನೀಡಿದೆಯೇ ಎಂದು ಪ್ರಶ್ನಿಸಿದರೆ ಸಮರ್ಪಕವಾಗಿ ಯಾರೂ ಉತ್ತರ ನೀಡುತ್ತಿಲ್ಲ ಎಂದು ನಗರ ನಿವಾಸಿಗಳು ದೂರಿದ್ದಾರೆ.

ಶಿರಾದ ಹಿಂದೂ ರುದ್ರ ಭೂಮಿಯಲ್ಲಿ ಗ್ಯಾಸ್ ಪೈಫ್ ಲೈನ್ ಕಾಮಗಾರಿಯನ್ನು ಕೈಗೊಂಡಿರುವುದು.
ಶಿರಾದ ಹಿಂದೂ ರುದ್ರ ಭೂಮಿಯಲ್ಲಿ ಗ್ಯಾಸ್ ಪೈಫ್ ಲೈನ್ ಕಾಮಗಾರಿಯನ್ನು ಕೈಗೊಂಡಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT