ಶನಿವಾರ, ಜನವರಿ 18, 2020
20 °C
ನಾಯಿಂದ್ರಹಳ್ಳಿ ರಸ್ತೆ ವಿವಾದ ಕಗ್ಗಂಟು; ಸಂಧಾನ ವಿಫಲ

ಕಾನೂನು ಕ್ರಮಕ್ಕೆ ಅಧಿಕಾರಿಗಳ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ತಾಲ್ಲೂಕಿನ ಪೆರಮಾಚನಹಳ್ಳಿ ವ್ಯಾಪ್ತಿಯ ನಾಯಿಂದ್ರಹಳ್ಳಿ ಗ್ರಾಮದಲ್ಲಿ ಬುಗಿಲೆದ್ದಿರುವ ರಸ್ತೆ ವಿವಾದ ಬುಧವಾರವೂ ಕಗ್ಗಂಟಾಗಿ ಪರಿಣಮಿಸಿದೆ.

ಎರಡು ಗುಂಪುಗಳ ನಡುವೆ ವಿವಾದ ಉಂಟಾದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದ್ದು, ಪೊಲೀಸ್ ಕಾವಲನ್ನು ಮುಂದುವರಿಸಲಾಗಿದೆ.

ತಹಶೀಲ್ದಾರ್ ವಿಶ್ವನಾಥ್, ಡಿವೈಎಸ್ಪಿ ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರು ಸೇರಿ ವಿವಾದಿತ ರಸ್ತೆಯ ಪರಿಶೀಲನೆ ನಡೆಸಿದರು.

ನಂತರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ಅಧಿಕಾರಿಗಳು ಎರಡು ಗುಂಪುಗಳ ತಲಾ ಐವರು ಮುಖಂಡರನ್ನು ಕರೆಯಿಸಿ ಪಂಚಾಯಿತಿ ನಡೆಸಿದರು. ಎರಡು ಗುಂಪುಗಳ ವಾದವನ್ನು ಆಲಿಸಿ ಸುಮಾರು 2 ಗಂಟೆ ಕಾಲ ಸಂಧಾನ ನಡೆಸಿದರೂ ಸಮಸ್ಯೆ ಬಗೆಹರಿಯಲಿಲ್ಲ. ಸಮಸ್ಯೆ ಮತ್ತಷ್ಟು ಕಗ್ಗಂಟಾಗಿ ಪರಿಣಮಿಸಿದ್ದರಿಂದ ಯಾವುದೇ ತೀರ್ಮಾನ ಕೈಗೊಳ್ಳದೆ ಸಭೆಯನ್ನು ಅಂತ್ಯಗೊಳಿಸಲಾಯಿತು.

ಕಾರ್ಯನಿರ್ವಹಣಾಧಿಕಾರಿಗೆ ಸೂಚನೆ: ಕಲ್ಲಿನ ಚಪ್ಪಡಿಗಳನ್ನು ನೆಟ್ಟು ಸಾರ್ವಜನಿಕರಿಗೆ ಮತ್ತು ಜಾನುವಾರುಗಳಿಗೆ ದಿಗ್ಭಂದನ ಹಾಕಿರುವ ರಸ್ತೆಯ ದಾಖಲೆಗಳನ್ನು ಕೂಡಲೇ ಪರಿಶೀಲಿಸಬೇಕು. ಈ ಗ್ರಾಮ ಮೊದಲು ಚಿನ್ನಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿತ್ತು. ಅಲ್ಲಿನ ದಾಖಲೆಗಳು ಹಾಗೂ ಹಾಲಿ ಪೆರಮಾಚನಹಳ್ಳಿ ಗ್ರಾಮ ಪಂಚಾಯಿತಿಯ ದಾಖಲೆಗಳನ್ನು ಪರಿಶೀಲಿಸಿ ಸಂಪೂರ್ಣ ವರದಿ ನೀಡುವಂತೆ ತಹಶೀಲ್ದಾರ್ ವಿಶ್ವನಾಥ್ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್‌ಗೆ ಸೂಚಿಸಿದರು.

ವರದಿ ಕೈಸೇರಿದ ತಕ್ಷಣ ಸರ್ಕಾರಿ ವಕೀಲರ ಸಲಹೆ ಪಡೆದು ದಿಗ್ಬಂಧವನ್ನು ತೆರವುಗೊಳಿಸಲಾಗುವುದು ಹಾಗೂ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.

ತಾಲ್ಲೂಕು ಆಡಳಿತ ಪೊಲೀಸ್ ಬಲವನ್ನು ಪ್ರಯೋಗಿಸಿ ರಸ್ತೆಯನ್ನು ತೆರವುಗೊಳಿಸಿ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗುತ್ತಿರುವ ಕಾರಣ ರಸ್ತೆಗೆ ಅಡ್ಡಲಾಗಿ ನೆಟ್ಟಿರುವ ಕಲ್ಲು ಚಪ್ಪಡಿಗಳನ್ನು ತೆರವುಗೊಳಿಸುವುದಾಗಿ ತಿಳಿಸಿದ್ದರೂ ಬುಧವಾರ ಸಂಜೆವರೆಗೂ ತೆರವುಗೊಳಿಸಿರಲಿಲ್ಲ.

ಪ್ರತಿಕ್ರಿಯಿಸಿ (+)