ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರೆಗುರುಳಿದ ವಿದ್ಯುತ್ ಕಂಬ

Last Updated 13 ಅಕ್ಟೋಬರ್ 2021, 5:21 IST
ಅಕ್ಷರ ಗಾತ್ರ

ತುರುವೇಕೆರೆ: ತಾಲ್ಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮನೆಯ ಗೋಡೆಗಳು ಮತ್ತು ವಿದ್ಯುತ್ ಕಂಬಗಳು ನೆಲ ಕಚ್ಚಿವೆ.

ಸೋಮವಾರ ರಾತ್ರಿ ಜಿಟಿ ಮತ್ತು ಹದ ಮಳೆಗೆ ಬಾಣಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎ.ಹೊಸಹಳ್ಳಿ ಕಾಲೊನಿಯ ನರಸಯ್ಯ, ಬುಗಡನಹಳ್ಳಿ ಗ್ರಾಮದ ರಾಮಮೂರ್ತಿ, ದಂಡಿನಶಿವರ ಗ್ರಾಮದ ಜಯಮ್ಮ, ಕಸಬಾ ಹೋಬಳಿಯ ದುಂಡಾ ಮಜರೆ ಲಕ್ಕಸಂದ್ರ ನಿವಾಸಿ ಷಡಕ್ಷರಯ್ಯ, ಕೊಡಗಿಹಳ್ಳಿಯ ಸದಾನಂದ ಅವರ ಮನೆಯ ಗೋಡೆ ಕುಸಿದಿದೆ.

ಮಳೆ ನೀರು ಹರಿದು ಮಾಯಸಂದ್ರ ಬೆಸ್ಕಾಂ ಶಾಖಾ ವ್ಯಾಪ್ತಿಯ ಬ್ಯಾಲಹಳ್ಳಿ ಗೇಟ್ ಮತ್ತು ಕರಡಗೆರೆ ಹತ್ತಿರ ವಿದ್ಯುತ್ ಪರಿವರ್ತಕ ಹಾಗೂ 5 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.

ಕಸಬಾ ವ್ಯಾಪ್ತಿಯ ಚಂಡೂರ ಹತ್ತಿರ ಮರ ಮುರಿದು ಬಿದ್ದು, ವಿದ್ಯುತ್ ಪರಿವರ್ತಕ ಉರುಳಿದೆ.

ದಂಡಿನಶಿವರ ಬೆಸ್ಕಾಂ ಶಾಖಾ ವ್ಯಾಪ್ತಿಯ ಸಂಪಿಗೆ ಮಲ್ಲೇನಹಳ್ಳಿ ಬಳಿ ಮರಬಿದ್ದು ವಿದ್ಯುತ್ ಪರಿವರ್ತಕ, 3 ವಿದ್ಯುತ್ ಕಂಬಗಳು ಮುರಿದಿವೆ.

ಮಂಗಳವಾರ ಮಧ್ಯಾಹ್ನ ಸುರಿದ ಹದ ಮಳೆಗೆ ಪಟ್ಟಣದ ಕೆರೆ ಕೋಡಿಯ ರಸ್ತೆ ಸೇತುವೆ ಮೇಲೆ ನೀರು ನಿಂತಿತ್ತು. ಪಟ್ಟಣದ ಬಾಣಸಂದ್ರ ರಸ್ತೆಯ ಶುದ್ಧ ಕುಡಿಯುವ ನೀರಿನ ಘಟಕದ ಎದುರಿನ ಚರಂಡಿಯ ನೀರು ತುಂಬಿ ರಸ್ತೆಗೆ ಹೊರಳಿ ವಾಹನ ಮತ್ತು ಪಾದಾಚಾರಿಗಳ ಓಡಾಟಕ್ಕೆ ತೊಂದರೆಯಾಗಿತ್ತು.

ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ತಾಲ್ಲೂಕಿನ ದಂಡಿನಶಿವರ, ಮಾಯಸಂದ್ರ, ದಬ್ಬೇಘಟ್ಟ ಮತ್ತು ಕಸಬಾ ವ್ಯಾಪ್ತಿಯಲ್ಲಿ ಬಿತ್ತನೆಯಾಗಿರುವ ಮುಂಗಾರು ಬೆಳೆಗಳಾದ ರಾಗಿ, ಜೋಳ, ತೋಗರಿ, ಅವರೆ, ಹರಳು, ಹುರುಳಿ ಸಾಸುವೆ, ಹುಚ್ಚೆಳ್ಳು ಬೆಳೆ ಹಾಗೂ ವಾಣಿಜ್ಯ ಬೆಳೆಗಳಾದ ತೆಂಗು, ಅಡಿಕೆ, ಬಾಳೆ ಗಿಡಗಳು ಚೆನ್ನಾಗಿ ಬೆಳೆದು ಹಸಿರಿನಿಂದ ಕಂಗೊಳಿಸುತ್ತಿದ್ದು ರೈತ ಮೊಗದಲ್ಲಿ ಮಂದಹಾಸ ಬೀರಿದೆ.

ತಾಲ್ಲೂಕಿನ ಹಲವೆಡೆ ರಾಗಿ ದಷ್ಟಪುಷ್ಟವಾಗಿ ಬೆಳೆದು ಅಲ್ಲಲ್ಲಿ ರಾಗಿ ತೆನೆಯೊಡೆದಿದೆ ಆದರೆ ಈಚೆಗೆ ಸುರಿಯುತ್ತಿರುವ ಹದ ಮಳೆಗೆ ರಾಗಿ ತೆನೆ ನೆಲಕ್ಕೆ ಬಾಗಿದೆ. ತೆಂಗಿನ ಸಸಿಗಳ ಗುಂಡಿ ಹಾಗೂ ಸುಳಿಯಲ್ಲಿ ನೀರು ನಿಂತು ತೆಂಗಿನ ಸಸಿಗಳು ಕೊಳೆಯುತ್ತಿರುವುದು ರೈತರಲ್ಲಿ ಆತಂಕ ಹೆಚ್ಚಿಸಿದೆ. ಹೊಲ, ತೋಟದ ಸಾಲುಗಳಲ್ಲಿ ಜೋಳದ ಮೇವು ನೆಲಕಚ್ಚಿದೆ.

ಹೊಲ, ಗದ್ದೆ, ತೋಟ, ಚೆಕ್ ಡ್ಯಾಂ, ಕೃಷಿ ಹೊಂಡ, ಹಳ್ಳ ಸಾಲು, ಕಟ್ಟೆಗಳಲ್ಲಿ ಮಳೆಯ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿದೆ. ಅರಳೀಕೆರೆ-ಮಾದಿಹಳ್ಳಿ ನಡುವಿನ ರಸ್ತೆ ಹಳ್ಳ ಮತ್ತು ಕೊಂಡಜ್ಜಿ ಕ್ರಾಸ್- ಸೋಪ್ನಹಳ್ಳಿ ಮಧ್ಯೆಯ ಕೊಂಡಜ್ಜಿ ಹಳ್ಳ ತುಂಬಿ ರಸ್ತೆಯ ಮೇಲೆ ಹರಿದು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.

ಕಸಬಾ 34, ದಂಡಿನಶಿವರ 45, ಮಾಯಸಂದ್ರ 38 ಮತ್ತು ಸಂಪಿಗೆಯಲ್ಲಿ 44 ಮಿ.ಮೀಟರ್ ಮಳೆಯಾಗಿರುವುದು ಮಳೆ ಮಾಪಕದಲ್ಲಿ ದಾಖಲಾಗಿದೆ.

ಬೆಸ್ಕಾಂ ಶಾಖಾಧಿಕಾರಿಗಳಾದ ಗಿರೀಶ್‍ ಕುಮಾರ್ ಪಿ.ಎಸ್, ನಾರಾಣಪ್ಪ, ಸೋಮಶೇಖರ್, ಗ್ರಾಮಲೆಕ್ಕಿಗರಾದ ಡಿ.ರಮೇಶ್, ರಾಮನಗೌಡ ಮತ್ತು ನಾಗರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT