ಶನಿವಾರ, ಮಾರ್ಚ್ 6, 2021
32 °C

ತುಮಕೂರು:ಕುರುಬರ ಪಾದಯಾತ್ರೆ ಸ್ವಾಗತಕ್ಕೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿರುವ ಕುರುಬ ಸಮುದಾಯದ ಜಾಗೃತಿ ಪಾದಯಾತ್ರೆ ಜ. 28ರಂದು ಜಿಲ್ಲೆ ಪ್ರವೇಶಿಸಲಿದ್ದು, ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಆರ್.ಸುರೇಶ್ ತಿಳಿಸಿದರು.

ಕಾಗಿನೆಲೆ ಕನಕ ಪೀಠದ ನಿರಂಜನಾಪುರಿ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. 28ಕ್ಕೆ ಪಾದಯಾತ್ರೆ ಜಿಲ್ಲೆ ಪ್ರವೇಶಿಸಲಿದ್ದು, ಸಂಘದಿಂದ ಪೂರ್ಣಕುಂಭ ಸ್ವಾಗತ ನೀಡಲಾಗುವುದು. ಶಿರಾ ತಾಲ್ಲೂಕು ತಾವರೆಕೆರೆಯಲ್ಲಿ ಸಾರ್ವಜನಿಕರ ಸಮಾವೇಶ ನಡೆಯಲಿದ್ದು, ನಂತರ ಶಿರಾ ನಗರ ಪ್ರವೇಶಿಸಲಿದೆ. ಅಲ್ಲಿನ ಸೋಮೇಶ್ವರ ಕಲ್ಯಾಣ ಮಂಟಪದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ಶಿರಾದಿಂದ ಜ. 29ರಂದು ಹೊರಡುವ ಪಾದಯಾತ್ರೆ 11 ಗಂಟೆಗೆ ದೊಡ್ಡಾಲದಮರ ಬಳಿ ನಡೆಯುವ ಸಾರ್ವಜನಿಕ ಸಮಾವೇಶದಲ್ಲಿ ‍ಪಾಲ್ಗೊಳ್ಳಲಿದೆ. ಸೀಬಿ ನರಸಿಂಹಸ್ವಾಮಿ ದೇವಾಲಯದಲ್ಲಿ ವಾಸ್ತವ್ಯ ಮಾಡಲಿದೆ. ಜ. 30ರಂದು ಕೋರದಲ್ಲಿ ಸಮಾವೇಶ ನಡೆಸಲಿದೆ. ನಂತರ ತುಮಕೂರು ನಗರದ ಶಿರಾಗೇಟ್‌ನಲ್ಲಿರುವ ಕಾಳಿದಾಸ ಪದವಿಪೂರ್ವ ಕಾಲೇಜಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಜ. 31ರಂದು ಬೆಳಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಪ್ರಯಾಣ ಬೆಳೆಸಿ, ಮಂಚಕಲ್ಲುಕುಪ್ಪೆ, ನಂದಿಹಳ್ಳಿ ಮೂಲಕ ದಾಬಸ್‌ಪೇಟೆಗೆ ತರಳಿ ವಾಸ್ತವ್ಯ ಮಾಡಲಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ನಾಲ್ಕು ದಿನಗಳ ಕಾಲ ಪಾದಯಾತ್ರೆ ಸಂಚರಿಸಲಿದ್ದು, ಭಾಗವಹಿಸುವ ಸಮುದಾಯದ ಜನರಿಗೆ ಊಟ, ವಸತಿ ವ್ಯವಸ್ಥೆಯನ್ನು ಕುರುಬರ ಸಂಘ, ಕಾಳಿದಾಸ ವಿದ್ಯಾವರ್ಧಕ ಸಂಘ ಮಾಡಲಿದೆ. ಪಾದಯಾತ್ರೆಯಲ್ಲಿ ಸುಮಾರು 5 ಸಾವಿರ ಜನರು ಭಾಗವಹಿಸುತ್ತಿದ್ದು, ಕೊವಿಡ್‌–19ನಿಂದಾಗಿ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು.

ಫೆ.7ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, 10 ಲಕ್ಷ ಜನರು ಭಾಗವಹಿಸುವರು. ಜಿಲ್ಲೆಯಿಂದ ಒಂದು ಲಕ್ಷ ಜನರು ತೆರಳಲಿದ್ದಾರೆ ಎಂದು ಹೇಳಿದರು.

ಕುರುಬ ಸಮುದಾಯದ ಮುಖಂಡರಾದ ಆರ್‌ಎಂಸಿ ರಾಜು, ಮಾಲೂರಪ್ಪ, ಮಲ್ಲಿಕಾರ್ಜುನ, ಎಂ.ಪಿ.ಕುಮಾರಸ್ವಾಮಿ, ಅನಿಲ್, ನರಸಿಂಹಮೂರ್ತಿ, ಟಿ.ಇ.ರಘುರಾಮ್, ಪಟ್ಟಣ್ಣಯ್ಯ, ಚಂದ್ರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.