ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಮಗ - ಸೊಸೆಯಿಂದಲೇ ಗೃಹ ಬಂಧನದಲ್ಲಿದ್ದ ವೃದ್ಧೆಯ ರಕ್ಷಣೆ

Published 16 ಫೆಬ್ರುವರಿ 2024, 15:39 IST
Last Updated 16 ಫೆಬ್ರುವರಿ 2024, 15:39 IST
ಅಕ್ಷರ ಗಾತ್ರ

ತುಮಕೂರು: ನಗರದಲ್ಲಿ ಮಗ ಮತ್ತು ಸೊಸೆಯಿಂದಲೇ ಗೃಹ ಬಂಧನದಲ್ಲಿದ್ದ ವೃದ್ಧೆಯನ್ನು ರಕ್ಷಿಸಿ ಮತ್ತೆ ಕುಟುಂಬ ಸದಸ್ಯರಿಗೆ ಒಪ್ಪಿಸಲಾಗಿದೆ.

ನಿವೃತ್ತ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪಂಕಜಾಕ್ಷ ಎಂಬುವರನ್ನು ಹಿರಿಯ ಮಗ, ಸೊಸೆ ಗೃಹ ಬಂಧನದಲ್ಲಿ ಇರಿಸಿದ್ದರು. ವೃದ್ಧೆ ಪ್ರತಿ ತಿಂಗಳು ₹54 ಸಾವಿರ ಪಿಂಚಣಿ ಪಡೆಯುತ್ತಿದ್ದರು. ವೃದ್ಧೆಯ ಪತಿ ನಿವೃತ್ತ ಸಹಾಯಕ ಸಬ್‌ ಇನ್ಸ್‌ಪೆಕ್ಟರ್ ಆಗಿದ್ದರು. ಮಗ, ಸೊಸೆ ಸೇರಿ ವೃದ್ಧೆಯನ್ನು ಮನೆಯಲ್ಲಿಟ್ಟು, ಹೊರಗಡೆ ಹೋಗದಂತೆ ಬಾಗಿಲಿಗೆ ಬೀಗ ಹಾಕಿದ್ದರು.

ಜಿಲ್ಲಾ ಆಸ್ಪತ್ರೆಯಲ್ಲಿರುವ ‘ಸಖಿ’ ಕೇಂದ್ರಕ್ಕೆ ವೃದ್ಧೆಯು ಗೃಹ ಬಂಧನದಲ್ಲಿರುವ ವಿಷಯ ಗೊತ್ತಾಗಿದೆ. ಕೂಡಲೇ ಕೇಂದ್ರದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಆಕೆಯನ್ನು ರಕ್ಷಿಸಿ, 2 ದಿನ ಸಖಿ ಕೇಂದ್ರದಲ್ಲಿ ಆರೈಕೆ ಮಾಡಿದ್ದಾರೆ. ನಂತರ ಹಿರಿಯ ನಾಗರಿಕರ ಸಾಂತ್ವನ ಕೇಂದ್ರ ಹಾಗೂ ಪೊಲೀಸ್ ಇಲಾಖೆಯ ಮೂಲಕವೂ ವೃದ್ಧೆಯ ಮಗ–ಸೊಸೆಯನ್ನು ಸಂಪರ್ಕಿಸಿ ಆಕೆಯನ್ನು ಮತ್ತೆ ಮನೆಗೆ ಕರೆದುಕೊಂಡು ಹೋಗುವಂತೆ ತಿಳಿಸಲಾಗಿತ್ತು. ಇದಕ್ಕೆ ಅವರಿಬ್ಬರೂ ಒಪ್ಪಿರಲಿಲ್ಲ.

ಸಖಿ ಕೇಂದ್ರದ ಸಿಬ್ಬಂದಿ ಗುರುವಾರ ವೃದ್ಧೆಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಗೆ ಕರೆ ತಂದಿದ್ದಾರೆ. ವೃದ್ಧೆಯು ತನ್ನನ್ನು ಮಗನ ಮನೆಗೆ ಸೇರಿಸುವಂತೆ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರು.

ಪ್ರಾಧಿಕಾರದ ಜಿಲ್ಲಾ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಶುಕ್ರವಾರ ವೃದ್ಧೆಯನ್ನು ಆಕೆಯ ಮಗನ ಮನೆಗೆ ಬಿಟ್ಟು ಬಂದಿದ್ದಾರೆ. ‘ಚೆನ್ನಾಗಿ ನೋಡಿಕೊಳ್ಳಬೇಕು. ಆಕೆಯನ್ನು ಮತ್ತೆ ನಿರ್ಲಕ್ಷ್ಯ ಮಾಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ’ ಪೊಲೀಸರಿಗೆ ಸೂಚಿಸಿದರು.

ನಗರ ಸಾಂತ್ವನ ಕೇಂದ್ರದ ಸಾಮಾಜಿಕ ಕಾರ್ಯಕರ್ತೆ ಪಾರ್ವತಮ್ಮ ರಾಜಕುಮಾರ, ಯುವರಾಣಿ, ಸಖಿ ಕೇಂದ್ರದ ಸಮಾಲೋಚಕಿ ರಾಧಾಮಣಿ, ಶ್ವೇತಾ, ಹಿರಿಯ ನಾಗರಿಕ ಸಹಾಯವಾಣಿ ಕೇಂದ್ರದ ಲಕ್ಷ್ಮಿನಾರಾಯಣಶೆಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂರಕ್ಷಣಾಧಿಕಾರಿ ಕಲ್ಪನಾ, ಕಾನೂನು ಸೇವಾ ಪ್ರಾಧಿಕಾರದ ಆಡಳಿತಾಧಿಕಾರಿ ನರಸಿಂಹಪ್ಪ ಮೊದಲಾದವರ ತಂಡ ಜಂಟಿಯಾಗಿ ವೃದ್ಧೆಯನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.

181ಕ್ಕೆ ಕರೆ ಮಾಡಿ

ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಜಿಲ್ಲಾ ಆಸ್ಪತ್ರೆಯಲ್ಲಿರುವ ‘ಸಖಿ’ ಸೆಂಟರ್‌ನಿಂದ ಆಪ್ತ ಸಮಾಲೋಚನೆ ವೈದ್ಯಕೀಯ ಪೊಲೀಸ್ ಮತ್ತು ಕಾನೂನು ನೆರವು ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲಾಗಿದೆ. ನೊಂದ ಮಹಿಳೆಯರು ಸಹಾಯವಾಣಿ 181ಕ್ಕೆ ಕರೆ ಮಾಡಿ ಸಖಿ ಅಥವಾ ಸಾಂತ್ವನ ಕೇಂದ್ರದ ನೆರವು ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT