ಶುಕ್ರವಾರ, ಮಾರ್ಚ್ 5, 2021
24 °C
ಉದ್ದೇಶಿತ ಸಾಮಾಜಿಕ ಸುರಕ್ಷಾ ಮಸೂದೆಗೆ ವಿರೋಧ

ಕಾರ್ಮಿಕರ ಸಂಘಟನೆಗಳ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕೇಂದ್ರ ಸರ್ಕಾರದ ಉದ್ದೇಶಿತ ಸಾಮಾಜಿಕ ಸುರಕ್ಷಾ ಕಲ್ಯಾಣ ಮಸೂದೆ-2018 ಕೈ ಬಿಡಬೇಕು. ಕಟ್ಟಡ ಕಾರ್ಮಿಕರ ಕಾನೂನು 1996 ರಕ್ಷಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಕಟ್ಟಡ ಕಾರ್ಮಿಕ ಸಂಘಟನೆಗಳ ಸಮನ್ವಯ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಲಾಯಿತು.

ಎಐಟಿಯುಸಿ ಮತ್ತು ಸಿಐಟಿಯು ನೇತೃತ್ವದ ಪ್ರತಿಭಟನೆಯಲ್ಲಿ ನೂರಾರು ಕಟ್ಟಡ ಕಾರ್ಮಿಕರು ಭಾಗವಹಿಸಿದ್ದರು. ನಂತರ ಈ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಕಟ್ಟಡ ನಿರ್ಮಾಣ ಮತ್ತು ಕ್ವಾರಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಗಿರೀಶ್ ಮಾತನಾಡಿ, ದುಡಿಯುವ ವರ್ಗಕ್ಕೆ ಅನುಕೂಲ ಕಲ್ಪಿಸುತ್ತಿರುವ 1996ರ ಕಾಯ್ದೆಯನ್ನು ಕೇಂದ್ರ ಸರ್ಕಾರ ಬದಿಗಿರಿಸಿ ಉದ್ಯಮಿಗಳಿಗೆ ಅನುಕೂಲ ಆಗುವಂತಹ ಸಾಮಾಜಿಕ ಸುರಕ್ಷಾ ಕಲ್ಯಾಣ ಮಸೂದೆ ಜಾರಿಗೊಳಿಸಲು ಮುಂದಾಗಿದೆ ಎಂದು ದೂರಿದರು.

ಇದರಿಂದ ದೇಶದ 4 ಕೋಟಿ, ಕರ್ನಾಟಕದ 15 ಲಕ್ಷ ಕಟ್ಟಡ ಕಾರ್ಮಿಕರಿಗೆ ನೀಡಿರುವ ಗುರುತಿನ ಚೀಟಿಗಳು ರದ್ದಾಗಲಿವೆ. ತೆರಿಗೆ ರೂಪದಲ್ಲಿ ಸಂಗ್ರಹಿಸಿರುವ ₹ 70 ಸಾವಿರ ಕೋಟಿ ಉದ್ಯಮಿಗಳ ಪಾಲಾಗಲಿದೆ. ದುಡಿಯುವ ವರ್ಗದ ಹೊಟ್ಟೆಯ ಮೇಲೆ ಹೊಡೆಯುವ ಇಂತಹ ಕಾನೂನನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಉಮೇಶ್, ಪ್ರಧಾನಮಂತ್ರಿ ಅಧ್ಯಕ್ಷತೆಯಲ್ಲಿ ತರಲು ಉದ್ದೇಶಿಸಿರುವ ಮಸೂದೆಯಿಂದ ರಾಜ್ಯದ ಹಿಡಿತ ಹೋಗಿ, ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಕಡೆ ಮುಖ ಮಾಡಬೇಕಾಗುತ್ತದೆ. ಇದು ಉದ್ಯಮಿಗಳಿಗೆ ವರ್ಷಕ್ಕೆ ಸಾವಿರಾರು ಕೋಟಿ ಲಾಭ ಮಾಡಿಕೊಡುವ ಮತ್ತೊಂದು ಫಸಲ್ ಬಿಮಾ ಯೋಜನೆ ಆಗುವ ಸಾಧ್ಯತೆ ಇದೆ ಎಂದು ದೂರಿದರು.

ಎಐಟಿಯುಸಿ ಸಂಘಟನಾ ಸಂಚಾಲಕ ಶಶಿಕಾಂತ್, ಮುಖಂಡರಾದ ಸತ್ಯನಾರಾಯಣ, ದೊಡ್ಡತಿಮ್ಮಯ್ಯ ಗುಬ್ಬಿ, ದೇವರಾಯಪಟ್ಟಣದ ರಂಗನಾಥ್, ಸಿಐಟಿಯು ಗೌರವಾಧ್ಯಕ್ಷ ಗೋವಿಂದರಾಜು, ಶಂಕರಪ್ಪ, ಲಕ್ಷ್ಮಣ್, ಖಲೀಲ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.