ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕಾಟ್ ಗಾರ್ಮೆಂಟ್ ವಿರುದ್ಧ ಕ್ರಮಕ್ಕೆ ಸೂಚನೆ

ಬಾಕಿ ವೇತನ, ಪಿಎಫ್‌ಗೆ ಆಗ್ರಹ; ಜಿಲ್ಲಾಧಿಕಾರಿ ಕಚೇರಿ ಎದುರು ಕಾರ್ಮಿಕರ ಪ್ರತಿಭಟನೆ
Last Updated 16 ಆಗಸ್ಟ್ 2019, 11:22 IST
ಅಕ್ಷರ ಗಾತ್ರ

ತುಮಕೂರು: ಬಾಕಿ ಉಳಿಸಿಕೊಂಡಿರುವ ಮೂರು ತಿಂಗಳ ಸಂಬಳ, ಪಿಎಫ್ ಹಣ ಸೇರಿದಂತೆ ಇತರ ಕಾನೂನುಬದ್ದ ಬಾಕಿಗಳ ಇತ್ಯರ್ಥಕ್ಕೆ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಬೇಕು. ಸೂಕ್ತ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿ ಸ್ಕಾಟ್ ಗಾರ್ಮೆಂಟ್ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಿದರು.

ಕಾರ್ಮಿಕ ಭವಿಷ್ಯ ನಿಧಿ ಸಂಘಟನೆಯ ಅಧಿಕಾರಿ ಶ್ರೀನಿಧಿ, ಕಾರ್ಖಾನೆಗಳ ಇಲಾಖೆಯ ಅಧಿಕಾರಿ ಪಾರ್ಥಸಾರಧಿ, ಸಿಪಿಐ ಚಂದ್ರಶೇಖರ್, ಕಾರ್ಮಿಕ ಮುಖಂಡ ಸೈಯದ್ ಮುಜೀಬ್ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಸಭೆ ನಡೆಸಿದರು. ಸ್ಕಾಟ್ ಗಾರ್ಮೆಂಟ್ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾರ್ಮಿಕ ಅಧಿಕಾರಿಗಳಿಗೆ ಸೂಚಿಸಿದರು.

ಭವಿಷ್ಯನಿಧಿಗೆ ಸಂಬಂಧಿಸಿದಂತೆ ಗಾರ್ಮೆಂಟ್ ವಿರುದ್ಧದ ಮೊಕದ್ದಮೆ ವಿಚಾರಣೆ ನಡೆದಿದೆ. ಬಾಕಿ ಪಾವತಿಸುವಂತೆ ಆಡಳಿತ ಮಂಡಳಿಗೆ ಆದೇಶಿಸಲಾಗಿದೆ. ವೇತನ ಪಾವತಿ ಮೊಕದ್ದಮೆ ಶೀಘ್ರವೇ ಇತ್ಯರ್ಥ ಮಾಡಲು ಪ್ರಕ್ರಿಯೆ ಚಾಲನೆಯಲ್ಲಿದೆ. ಈ ಆದೇಶ ಬಂದ ನಂತರ ನ್ಯಾಷನಲ್ ಕಂಪನಿ ಕಾನೂನು ನ್ಯಾಯಾಧೀಕರಣದ ಮುಂದೆ ಕಾರ್ಮಿಕರ ಬಾಕಿ ಇರುವ ಅರ್ಜಿಗಳನ್ನು ಆದ್ಯತೆ ಮೇಲೆ ಇತ್ಯರ್ಥಪಡಿಸಲು ಜಿಲ್ಲಾಡಳಿತ ಕೋರಿದೆ ಎಂದು ಸಭೆಯಲ್ಲಿ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು 11 ಗಂಟೆಯಿಂದ ಮಧ್ಯಾಹ್ನ 2.30ರವರೆಗೆ ಪ್ರತಿಭಟಿಸಿದ ಕಾರ್ಮಿಕರು ಸತ್ಯಮಂಗಲ ಕೈಗಾರಿಕಾ ಪ್ರದೇಶದಲ್ಲಿದ್ದ ಸ್ಕಾಟ್ ಗಾರ್ಮೆಂಟ್ ರಾತ್ರೋರಾತ್ರಿ ಬೀಗಮುದ್ರೆ ಹಾಕಿದೆ. ನಮಗೆ ನೀಡಬೇಕಾಗಿದ್ದ ಬಾಕಿಯನ್ನೂ ನೀಡದೆ ಆಡಳಿತ ಮಂಡಳಿಯವರು ವಿಳಂಬ ಅನುಸರಿಸುತ್ತಿದ್ದಾರೆ ಎಂದು ದೂರಿದರು.

ಕಾರ್ಮಿಕರಿಗೆ ಆಡಳಿತ ಮಂಡಳಿಯವರು ನೀಡಿರುವ ಚೆಕ್‌ಗಳು ಬೌನ್ಸ್ ಆಗಿವೆ. ಕೆಲವು ಕಾರ್ಮಿಕರಿಗೆ ನೀಡಿದ್ದ ಚೆಕ್‌ಗಳನ್ನು ಆಡಳಿತ ಮಂಡಳಿ ಅವರೇ ವಾಸಪ್ ಪಡೆದಿದ್ದಾರೆ. ಜಿಲ್ಲಾಡಳಿತ ಅಡಳಿತ ಮಂಡಳಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಬಾಕಿ ಕೊಡಿಸಬೇಕು ಎಂದು ಕೋರಿದರು.

***

ಕುಟುಂಬಗಳು ಬೀದಿಪಾಲು

‘ಕಾರ್ಖಾನೆ ಮುಚ್ಚಿರುವುದರಿಂದ ಕುಟುಂಬಗಳು ಬೀದಿ ಪಾಲಾಗಿವೆ. ಜೀವನ ನಡೆಸಲು ಕಷ್ಟವಾಗಿದೆ. ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗಿದೆ. ಬೇರೆ ಕೆಲಸವೂ ಇಲ್ಲವಾಗಿದೆ. ಮನೆ ಬಾಡಿಗೆ ಕಟ್ಟಲು ಆಗುತ್ತಿಲ್ಲ ಎಂದು ಗಾರ್ಮೆಂಟ್ ಕಾರ್ಮಿಕ ಪ್ರಮುಖರು ಅಳಲು ತೋಡಿಕೊಂಡರು.

ಜಿಲ್ಲೆಯ ವಿವಿಧ ತಾಲೂಕುಗಳ ಹಳ್ಳಿಗಳಿಂದ ಬಂದಿದ್ದ ಮಹಿಳೆಯರು ಮೂರೂವರೆ ಗಂಟೆ ಪ್ರತಿಭಟಿಸಿ ತಮಗೆ ಆಗಿರುವ ಅನ್ಯಾಯ ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT