ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಜೆಸಿಬಿಯಿಂದ ಎಕ್ಸ್‌ಪ್ರೆಸ್‌ ಕೆನಾಲ್‌ಗೆ ಮಣ್ಣು

ಕೆನಾಲ್‌ ಮುಚ್ಚಿ ಪ್ರತಿಭಟನೆ, ಪೊಲೀಸರ ಜತೆ ಮಾತಿನ ಚಕಮಕಿ
Published 21 ಮೇ 2024, 6:05 IST
Last Updated 21 ಮೇ 2024, 6:05 IST
ಅಕ್ಷರ ಗಾತ್ರ

ತುಮಕೂರು: ಗುಬ್ಬಿ ತಾಲ್ಲೂಕಿನ ಸಿ.ಎಸ್‌.ಪುರ ಹೋಬಳಿಯ ಚೆನ್ನೇನಹಳ್ಳಿ ಬಳಿ ಸೋಮವಾರ ‘ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌’ಗೆ ಜೆಸಿಬಿ ವಾಹನಗಳ ಮುಖಾಂತರ ಹೋರಾಟಗಾರರು ಮಣ್ಣು ಮುಚ್ಚಿ, ಕಾಮಗಾರಿಗೆ ತಡೆಯೊಡ್ಡಿದರು.

ಲಿಂಕ್‌ ಕೆನಾಲ್‌ ಕಾಮಗಾರಿ ವಿರೋಧಿಸಿ ಹಲವು ದಿನಗಳಿಂದ ಹೋರಾಟ ನಡೆಯುತ್ತಿದೆ. ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ನೂರಾರು ಜನರು ಚೆನ್ನೇನಹಳ್ಳಿ ಬಳಿ ಕೆನಾಲ್‌ಗೆ ಮಣ್ಣು ಮುಚ್ಚಿದರು. ಈ ವೇಳೆ ಜೆಸಿಬಿ ವಾಹನಗಳಿಗೆ ಪೊಲೀಸರು ತಡೆಯೊಡ್ಡಿದರು. ಪ್ರತಿಭಟನಕಾರರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ವಿ.ಮರಿಯಪ್ಪ ಅವರು ಹಾಗೂ ಡಿವೈಎಸ್‌ಪಿ ಶೇಖರ್‌ ಮಧ್ಯಪ್ರವೇಶಿಸಿ ಪ್ರತಿಭಟನಕಾರರ ಮನವೊಲಿಸಿದರು.

ತಾಲ್ಲೂಕಿನ ಡಿ.ರಾಂಪುರ ಸಮೀಪದ ಸುಂಕಾಪುರ ಗ್ರಾಮದ ಬಳಿ ಕಳೆದ ಗುರುವಾರ ಕಾಮಗಾರಿ ವಿರೋಧಿಸಿ ಪ್ರತಿಭಟನೆ ನಡೆಸಿ ನಾಲೆಗೆ ಮಣ್ಣು ಹಾಕಲಾಗಿತ್ತು. ಬಿಜೆಪಿ, ಜೆಡಿಎಸ್ ಶಾಸಕರು, ಮಾಜಿ ಶಾಸಕರು, ಜನಪ್ರತಿನಿಧಿಗಳು, ವಿವಿಧ ಮಠಗಳ ಸ್ವಾಮೀಜಿಗಳು, ರೈತರು ಒಟ್ಟಾಗಿ ಕೊಳವೆ ಮಾರ್ಗದ ಮೂಲಕ ಮಾಗಡಿಗೆ ನೀರು ತೆಗೆದುಕೊಂಡು ಹೋಗುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸಾಂಕೇತಿಕವಾಗಿ ನಾಲೆಗೆ ಮಣ್ಣು ಹಾಕಿ ಆಕ್ರೋಶ ಹೊರ ಹಾಕಿದ್ದರು. ಪ್ರತಿಭಟನೆ ನಂತರವೂ ಕಾಮಗಾರಿ ಮುಂದುವರಿದಿತ್ತು.

‘ಜಿಲ್ಲೆಗೆ ಹೆಚ್ಚುವರಿ ನೀರು ಹಂಚಿಕೆ ಮಾಡಿದ ನಂತರ ಮಾಗಡಿಗೆ ಹೇಮಾವತಿ ನಾಲೆಯಲ್ಲಿ ನೀರು ತೆಗೆದುಕೊಂಡು ಹೋಗಲು ನಮ್ಮ ವಿರೋಧವಿಲ್ಲ. ಲಿಂಕ್‌ ಕೆನಾಲ್‌ ಮೂಲಕ ಪೈಪ್‌ಲೈನ್‌ನಲ್ಲಿ ನೀರು ಬಿಡಲು ಒಪ್ಪುವುದಿಲ್ಲ. ಇದರಿಂದ ಜಿಲ್ಲೆಯ ಜನರಿಗೆ ಅನ್ಯಾಯವಾಗಲಿದೆ’ ಎಂದು ಸೊಗಡು ಶಿವಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಈಗಿರುವ ನಾಲೆಯ ಮೂಲಕವೇ ಗುಬ್ಬಿ, ತುರುವೇಕೆರೆ, ತುಮಕೂರು, ಮಧುಗಿರಿ, ಕೊರಟಗೆರೆ ಹಾಗೂ ತಿಪಟೂರು ತಾಲ್ಲೂಕಿನ ಅನೇಕ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲಾಗುತ್ತಿದೆ. ಪೈಪ್‌ಲೈನ್‌ ಮೂಲಕ ನೀರು ತೆಗೆದುಕೊಂಡು ಹೋಗುವುದರ ಜತೆಗೆ ನಮ್ಮ ನೀರಿಗೂ ಕಿಂಡಿ ತೋಡುತ್ತಿದ್ದಾರೆ ಎಂದರು.

ಶಾಸಕ ಎಂ.ಟಿ.ಕೃಷ್ಣಪ್ಪ, ‘ಯೋಜನೆಯು ಅವೈಜ್ಞಾನಿಕವಾಗಿದ್ದು, ಕಾನೂನು ಬಾಹಿರವಾಗಿ ಕಾಮಗಾರಿ ನಡೆಸುತ್ತಿದ್ದಾರೆ. ಸರ್ಕಾರದ ಮಾರ್ಗಸೂಚಿ ಅನ್ವಯ ಭೂಸ್ವಾಧೀನ ಪಡಿಸಿಕೊಳ್ಳದೆ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ಭೂಸ್ವಾಧೀನ ಇಲ್ಲದೆ ಕಾಮಗಾರಿ ನಡೆಸಿರುವ ಗುತ್ತಿಗೆದಾರ ಹಾಗೂ ಸಂಬಂಧಪಟ್ಟ ಮುಖ್ಯ ಎಂಜಿನಿಯರ್‌, ಕಾರ್ಯಪಾಲಕ ಎಂಜಿನಿಯರ್‌ ವಿರುದ್ಧ ಮೊಕದ್ದಮೆ ದಾಖಲಿಸಬೇಕು’ ಎಂದು ಒತ್ತಾಯಿಸಿದರು.

ಮಾಜಿ ಶಾಸಕ ಮಸಾಲೆ ಜಯರಾಂ, ಕನ್ನಡ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಧನಿಯಕುಮಾರ್, ಮುಖಂಡರಾದ ಪ್ರಭಾಕರ, ಹೊಸಹಳ್ಳಿ ಕುಮಾರಸ್ವಾಮಿ, ಕೆ.ಪಿ.ಮಹೇಶ್‌, ಆಟೊ ನವೀನ್‌ ಇತರರು ಹೋರಾಟದಲ್ಲಿ ಭಾಗವಹಿಸಿದ್ದರು.

ಗುಬ್ಬಿ ತಾಲ್ಲೂಕಿನ ಚೆನ್ನೇನಹಳ್ಳಿ ಬಳಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿದರು. ಶಾಸಕ ಎಂ.ಟಿ.ಕೃಷ್ಣಪ್ಪ ಮಾಜಿ ಶಾಸಕ ಮಸಾಲೆ ಜಯರಾಂ ಮೊದಲಾದವರು ಪಾಲ್ಗೊಂಡಿದ್ದರು
ಗುಬ್ಬಿ ತಾಲ್ಲೂಕಿನ ಚೆನ್ನೇನಹಳ್ಳಿ ಬಳಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿದರು. ಶಾಸಕ ಎಂ.ಟಿ.ಕೃಷ್ಣಪ್ಪ ಮಾಜಿ ಶಾಸಕ ಮಸಾಲೆ ಜಯರಾಂ ಮೊದಲಾದವರು ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT