ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಂತ್ರಿ ವಜಾ ಮಾಡಿ, ಕೊಲೆಗಡುಕರ ಬಂಧಿಸಿ’

Last Updated 6 ಅಕ್ಟೋಬರ್ 2021, 3:59 IST
ಅಕ್ಷರ ಗಾತ್ರ

ತುಮಕೂರು: ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ವಾಹನ ಹರಿಸಿ ಅವರ ಸಾವಿಗೆ ಕಾರಣವಾಗಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಹಾಗೂ ಆತನ ಸಹಚರರ ವಿರುದ್ಧ ಪ್ರಕರಣ ದಾಖಲಿಸಿ ತಕ್ಷಣ ಬಂಧಿಸಬೇಕು. ಮಿಶ್ರಾ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.

ಇದೊಂದು ರೀತಿಯಲ್ಲಿ ರೈತರ ಹತ್ಯೆಯಾಗಿದ್ದು, ಕೊಲೆಗಡುಕರನ್ನು ಬಂಧಿಸಬೇಕು ಎಂದು ಒತ್ತಾಯಿಸುವ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ‘ಸಂಯುಕ್ತ ಹೋರಾಟ– ಕರ್ನಾಟಕ’ ಸಂಘಟನೆ ಮುಖಂಡರು ಮಂಗಳವಾರ ಸಲ್ಲಿಸಿದರು. ಸಂಘಟನೆ ಜಿಲ್ಲಾ ಸಂಚಾಲಕ ಸಿ.ಯತಿರಾಜು, ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು, ರವೀಶ್, ಪ್ರಾಂತ ರೈತ ಸಂಘದ ಬಿ.ಉಮೇಶ್, ಆರ್‌ಕೆಎಸ್ಎಸ್ಎನ್ ಸ್ವಾಮಿ, ಸಿಐ
ಟಿಯು ಮುಖಂಡ ಸೈಯದ್ ಮುಜೀಬ್, ಕಟ್ಟಡ ಕಾರ್ಮಿಕರ ಸಂಘದ ಬೆಟ್ಟಪ್ಪ ಇತರರು ನಿಯೋಗದಲ್ಲಿ ಇದ್ದರು.

ಇಂತಹದೊಂದು ಬರ್ಬರ, ಅಮಾನುಷ, ತೀವ್ರ ಸ್ವರೂಪದ ಘಟನೆ ನಡೆದಿದ್ದರೂ ಪ್ರಧಾನಿ ನರೇಂದ್ರ ಮೋದಿ ಖಂಡಿಸದೇ ಇರುವುದು ಸಂಚಿನ ವಾಸನೆಯನ್ನು ಬಹಿರಂಗ ಪಡಿಸುತ್ತದೆ ಎಂದು ಟೀಕಿಸಿದ್ದಾರೆ.

ರೈತ ಚಳವಳಿ ಹತ್ತಿಕ್ಕಲು ದಾಳಿ ನಡೆಸುವಂತೆ ಬಿಜೆಪಿ ಹಾಗೂ ಸಂಘ ಪರಿವಾರದ ಗೂಂಡಾಗಳಿಗೆ ಹರಿಯಾಣ ಮುಖ್ಯಮಂತ್ರಿ ಕರೆ ನೀಡುವ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರು ಒಟ್ಟಾಗಿ ಸೇರಿಕೊಂಡು ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳವಳಿಯನ್ನು ನಿಂದಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಬೇಕು. ಹರಿಯಾಣ ಮುಖ್ಯಮಂತ್ರಿಯನ್ನು ಆ ಸ್ಥಾನದಿಂದ ವಜಾಗೊಳಿಸಬೇಕು, ಕೊಲೆಯಾದ ಹುತಾತ್ಮ ರೈತ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ನೀಡಬೇಕು. ತೀವ್ರವಾಗಿ ಗಾಯಗೊಂಡವರಿಗೂ ಅಗತ್ಯ ಉಚಿತ ಚಿಕಿತ್ಸೆ, ಸೂಕ್ತ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಜಂಟಿ ಸಭೆ ಕರೆಯಬೇಕು. ನೀರಾವರಿ ವಿಚಾರಗಳನ್ನು ಚರ್ಚಿಸಬೇಕು. ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ಒದಗಿಸುವಂತೆ ರೈತ ಮುಖಂಡರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT