ಪಾವಗಡ: ಜೀತದಾಳು ಪುನರ್ವಸತಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಆರ್‌ಎಫ್‌ಎಫ್ ನೇತೃತ್ವದಲ್ಲಿ ಜೀತವಿಮುಕ್ತರು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಸ್ವತಂತ್ರ್ಯ ಬಂದು 76 ವರ್ಷ ಕಳೆದರೂ ಜೀತಪದ್ಧತಿ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ. ಜೀತವಿಮುಕ್ತರಿಗೆ ಸಿಗಬೇಕಾದ ಸವಲತ್ತುಗಳೂ ಸಿಗುತ್ತಿಲ್ಲ. ಬಗರ್ ಹುಕುಂ ಅಡಿ ಜೀತವಿಮುಕ್ತರಿಗೆ, ಅರ್ಜಿದಾರರಿಗೆ ಸಾಗುವಳಿ ಚೀಟಿ ನೀಡದೆ ಅನ್ಯಾಯ ಎಸಗಲಾಗುತ್ತಿದೆ ಎಂದು ಪ್ರತಿಭಟನನಿರತರು ಆರೋಪಿಸಿದರು.
2019ರ ಪಟ್ಟಿಯಲ್ಲಿ ಗುರುತಿಸಿರುವ ಜೀತವಿಮುಕ್ತರಿಗೆ ಈವರೆಗೆ ಪರಿಹಾರ ನೀಡಿಲ್ಲ. ಸಾಕಷ್ಟು ಮಂದಿ ಜೀತವಿಮುಕ್ತರು ನಿರ್ಗತಿಕರಾಗಿದ್ದಾರೆ. ಜೀತವಿಮುಕ್ತರಿಗೆ ನಿವೇಶನ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಚಿಕ್ಕ ಜಾಲೋಡು ಸೇರಿದಂತೆ ವಿವಿದೆಡೆ ಸಾಗುವಳಿ ಚೀಟಿ ನೀಡಬೇಕು. 2019ರ ಪಟ್ಟಿಯಲ್ಲಿನ ಜೀತದಾಳುಗಳಿಗೆ ಬಿಡುಗಡೆ ಪತ್ರ ನೀಡಬೇಕು. ಈಗಾಗಲೇ ಬಿಡುಗಡೆಗೊಂಡ ಜೀತದಾಳುಗಳಿಗೆ ಸಮಗ್ರ ಪುನರ್ವಸತಿ ನೀಡಬೇಕು. ಜೀತದಾಳುಗಳಿಗೆ ನಿವೇಶನ ನೀಡಬೇಕು. ಬಾಲಕಾರ್ಮಿಕ ಪದ್ಧತಿ ನಿಯಂತ್ರಿಸಲು ಕ್ರಮ ತೆಗೆದುಕೊಳ್ಳಬೇಕು. ಜೀತದಾಳುಗಳಿಗೆ ಎರಡು ಎಕರೆ ಜಮೀನು ಮಂಜೂರು ಮಾಡಬೇಕು. ತಮಟೆ ಕಲಾವಿದರಿಗೆ ಮಾಸಾಶನ ನೀಡಬೇಕು ಎಂದು ಒತ್ತಾಯಿಸಿದರು.
ಪಟ್ಟಣದ ನಿರೀಕ್ಷಣಾ ಮಂದಿರದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನ ಮೆರವಣಿಗೆ ನಡೆಸಿ ತಹಶೀಲ್ದಾರ್ ಕಚೇರಿ ಮುಂಭಾಗ ಕೆಲಕಾಲ ಪ್ರತಿಭಟನೆ ನಡೆಸಲಾಯಿತು.
ಆರ್‌ಎಪ್‌ಎಫ್ ರಾಜ್ಯ ಮಹಿಳಾ ಸಂಚಾಲಕಿ ಜೀವಿಕಾ ರತ್ನಮ್ಮ, ಜಿಲ್ಲಾ ಸಂಚಾಲಕ ಚಂದ್ರಪ್ಪ, ತಾಲ್ಲೂಕು ಸಂಚಾಲಕ ನರಸಿಂಹಯ್ಯ, ಪವಿತ್ರ, ಚಂದ್ರು, ರಾಮಮೂರ್ತಿ, ಡಿಜೆಎಸ್ ನಾರಾಯಣಪ್ಪ, ಟಿಎನ್ ಪೇಟೆ ರಮೇಶ್, ಹನುಮಂತರಾಯಪ್ಪ, ಮದ್ಲೇಟಪ್ಪ, ಗೋಪಾಲ್ ಉಪಸ್ಥಿತರಿದ್ದರು.