ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | 'ಕೇಂದ್ರದ ವಿರುದ್ಧ ವಿವಿಧ ಸಂಘಟನೆಗಳಿಂದ ಪ್ರತಿಭಟನೆ'

Published 17 ಫೆಬ್ರುವರಿ 2024, 6:47 IST
Last Updated 17 ಫೆಬ್ರುವರಿ 2024, 6:47 IST
ಅಕ್ಷರ ಗಾತ್ರ

ತುಮಕೂರು: ‘ದೆಹಲಿ ಚಲೋ’ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲಿನ ಕೇಂದ್ರ ಸರ್ಕಾರದ ದಾಳಿ ಖಂಡಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಶುಕ್ರವಾರ ಸಂಯುಕ್ತ ಹೋರಾಟ ಕರ್ನಾಟಕ, ವಿವಿಧ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಪ್ರತಿಭಟನೆ ನಡೆಸಿದವು.

ಬಿಜಿಎಸ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದರು. ರೈತ, ಕಾರ್ಮಿಕ ವಿರೋಧ ಸರ್ಕಾರ ಎಂದು ಘೋಷಣೆ ಕೂಗಿದರು. ನೂರಾರು ಜನ ರೈತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಸಂಚಾಲಕ ಸಿ.ಯತಿರಾಜು ‘ಬಿಜೆಪಿ ಸರ್ಕಾರ ರೈತರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಕೇಂದ್ರ ಸರ್ಕಾರದ ವಿರುದ್ಧ ರೈತ, ಕಾರ್ಮಿಕರು ಒಂದಾಗಿ ಹೋರಾಟ ರೂಪಿಸಬೇಕು. ದೆಹಲಿಯಲ್ಲಿ ರೈತರ ಮೇಲಿನ ದಾಳಿ ಖಂಡನೀಯ’ ಎಂದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು, ‘ಕ್ವಿಂಟಲ್‌ ಕೊಬ್ಬರಿಗೆ ₹20 ಸಾವಿರ ಬೆಂಬಲ ಬೆಲೆ ನಿಗದಿಪಡಿಸಬೇಕು. ಮಿತಿ ವಿಧಿಸದೆ ಎಲ್ಲ ಕೊಬ್ಬರಿಯನ್ನು ನಾಫೆಡ್‌ ಮುಖಾಂತರ ಖರೀದಿಸಬೇಕು. ಸರ್ಕಾರ ದುಡಿಯುವ ಜನರ ಅಹವಾಲು ಆಲಿಸಿ, ಪರಿಹಾರ ಒದಗಿಸಬೇಕು’ ಎಂದು ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಮುಜೀಬ್‌, ‘ಬೆಲೆ ಏರಿಕೆ ನಿಯಂತ್ರಿಸುವುದರಲ್ಲಿ ಕೇಂದ್ರ ಸರ್ಕಾರ ಸೋತಿದೆ. ದೇಶದಲ್ಲಿ ಪ್ರತಿ ಅರ್ಧಗಂಟೆಗೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಸಿವಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಅಪೌಷ್ಟಿಕತೆ ಜಾಸ್ತಿಯಾಗುತ್ತಿದೆ’ ಎಂದರು.

ನರೇಗಾ ಯೋಜನೆಯಡಿ 200 ಮಾನವ ದಿನಗಳನ್ನು ನೀಡಿ, ₹600 ಕೂಲಿ ನಿಗದಿ ಪಡಿಸಬೇಕು. ಬಯೋಮೆಟ್ರಿಕ್ ಪದ್ಧತಿ ಕೈ ಬಿಡಬೇಕು. ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ, ಪರಿಹಾರ ಒದಗಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಖಾತ್ರಿ ಪಡಿಸಬೇಕು. ಅಂಗನವಾಡಿ, ಬಿಸಿಯೂಟ ನೌಕರರು, ಆಶಾ ಮತ್ತು ಇತರೆ ಸಿಬ್ಬಂದಿಗೆ ₹31 ಸಾವಿರ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯ, ₹10 ಸಾವಿರ ಪಿಂಚಣಿ ಕೊಡಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ರವೀಶ್‌, ಎಐಟಿಯುಸಿ ಗಿರೀಶ್‌, ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಬಿ.ಉಮೇಶ್‌, ವಿವಿಧ ಸಂಘಟನೆಗಳ ಮುಖಂಡರಾದ ಕಂಬೇಗೌಡ, ಕೆ.ಆರ್.ರಂಗಧಾಮಯ್ಯ, ಷಣ್ಮುಖಪ್ಪ, ಗೌರಮ್ಮ, ಜಬೀನಾ, ಗಂಗಾ, ಪ್ರೇಮಾ, ಮಾರುತಿ, ಮಂಜುನಾಥ, ಪ್ರಕಾಶ್‌, ದಿಲೀಪ್, ಶಿವಕುಮಾರ್‌ಸ್ವಾಮಿ, ವಾಸೀಂ ಅಕ್ರಂ, ಮುತ್ತುರಾಜು, ಕುಮಾರ್, ಶಂಕರಪ್ಪ, ಸಿ.ಚಂದ್ರಶೇಖರ್‌ ಇತರರು ಭಾಗವಹಿಸಿದ್ದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT