ಭಾನುವಾರ, ಜುಲೈ 3, 2022
24 °C
ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ನಿವಾಸಿಗಳಿಗೆ ತೊಂದರೆ; ಆರೋಪ

ತುಮಕೂರು: ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ನಗರದ ಸರ್ವೆ ನಂ 38ರಲ್ಲಿ ನಿವೇಶನ ಖರೀದಿಸಿ ಮನೆ ನಿರ್ಮಿಸಿಕೊಂಡಿರುವವರಿಗೆ ಕೆಲವರು ಭೂ ಮಾಫಿಯಾದವರ ಜತೆ ಸೇರಿ ಕಿರುಕುಳ ನೀಡುತ್ತಿದ್ದಾರೆ. ಬಡಾವಣೆ ನಿವಾಸಿಗಳಿಗೆ ರಕ್ಷಣೆ ನೀಡಬೇಕು. ಅನಧಿಕೃತವಾಗಿ ನಿರ್ಮಿಸುತ್ತಿರುವ ಕಾಂಪೌಂಡ್ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ನೇತೃತ್ವದಲ್ಲಿ ನಿವಾಸಿಗಳು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.

ರೈತ ಮುಖಂಡ ಮೆಳೇಕಲ್ಲಹಳ್ಳಿ ಯೋಗೀಶ್ ಮಾತನಾಡಿ, ಬಟವಾಡಿಯ ಸರ್ವೆ ನಂ 38ರಲ್ಲಿ ಅಬ್ದುಲ್ ಸತ್ತಾರ್ ಹೆಸರಿನಲ್ಲಿ 16.30 ಎಕರೆ ಇತ್ತು. ಅಬ್ದುಲ್ ಸತ್ತಾರ್ ಅವರ 5 ಜನ ಮಕ್ಕಳಲ್ಲಿ ಟಿ.ಎ.ಮಹಮದ್ ಗೌಸ್ ಎಂಬುವವರಿಗೆ 7.21 ಎಕರೆ ಬಂದಿದೆ. ಈ ಭೂಮಿಯಲ್ಲಿ 2 ಎಕರೆಯನ್ನು 1981-82ರಲ್ಲಿ ಜಿಲ್ಲಾಧಿಕಾರಿ ಮೂಲಕ ಭೂ ಪರಿವರ್ತನೆ ಮಾಡಿಸಲಾಗಿದೆ. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ಪಡೆದು 42 ನಿವೇಶನಗಳಾಗಿ ಪರಿವರ್ತಿಸಿ ಮಾರಾಟ ಮಾಡಿದ್ದಾರೆ.

ಈ 42 ನಿವೇಶನಗಳಲ್ಲಿ 18 ಜನರು ಮನೆ ನಿರ್ಮಿಸಿದ್ದಾರೆ. ಆದರೆ ಇತ್ತೀಚೆಗೆ ಕೆಲವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಈ ಭೂಮಿ ನಮಗೆ ಸೇರಿದೆ. ನೀವು ಜಾಗ ಖಾಲಿ ಮಾಡಿ ಎಂದು ಹೆದರಿಸುತ್ತಿದ್ದಾರೆ. ನಿವೇಶನಗಳಿಗೆ ಹೋಗದಂತೆ ತಡೆಗೋಡೆ ನಿರ್ಮಿಸಿದ್ದಾರೆ ಎಂದು ಆರೋಪಿಸಿದರು.

2022ರವರೆಗೆ ಈ ಭೂಮಿಗೆ ಸಂಬಂಧಿಸಿದಂತೆ ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಅದನ್ನು ಉಲ್ಲಂಘಿಸಿ ಕಾಂಪೌಂಡ್ ನಿರ್ಮಿಸಿದ್ದಾರೆ. ಜಿಲ್ಲಾಡಳಿತ ನಕಲಿ ದಾಖಲೆ ಸೃಷ್ಟಿಸಿರುವ ಅಧಿಕಾರಿಗಳು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಬಂದ ‌ಪಾಲಿಕೆ ಆಯುಕ್ತೆ ರೇಣುಕಾ, ಟೂಡಾ ಆಯುಕ್ತ ಯೋಗಾನಂದ, ಫೆ.5ರಂದು ಸ್ಥಳ ಪರಿಶೀಲಿಸಿ ಎರಡು ಕಡೆಯವರ ಸಮ್ಮುಖದಲ್ಲಿಯೇ ಸರ್ವೆ ಕಾರ್ಯ ನಡೆಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

‘ನ್ಯಾಯ ದೊರೆಯದಿದ್ದರೆ ನಿವೇಶನದಾರರು ಕುಟುಂಬ ಸಮೇತ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ’ ಎಂದು ಬಡಾವಣೆಯ ಮುಖಂಡರಾದ ರಾಜಪ್ಪ ತಿಳಿಸಿದರು.

ಶ್ರೀನಿವಾಸ್, ಪ್ರಸನ್ನಕುಮಾರ್, ಅನ್ನಪೂರ್ಣ, ಉಮಾದೇವಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು