ಗುರುವಾರ , ಜನವರಿ 30, 2020
20 °C
ಮನೆ ಮನೆಗೆ ತೆರಳಿ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಆರ್‌.ಅಶೋಕ ಹೇಳಿಕೆ

‘ಪೌರತ್ವ’ ಕಾಯ್ದೆ; ಮುಸ್ಲಿಮರಿಗೆ ತೊಂದರೆ ಆಗದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಿಂದ ನಮ್ಮ ದೇಶದ ಮುಸ್ಲಿಮರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ ಸ್ಪಷ್ಟಪಡಿಸಿದರು.

ಇಲ್ಲಿನ ಅಶೋಕ ನಗರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಮನೆ ಮನೆಗೆ ತೆರಳಿ ಜನಜಾಗೃತಿ ಮೂಡಿಸುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲು ಸಮಾರು ವರ್ಷಗಳಿಂದ ಹಲವಾರು ನಾಯಕರು ಪ್ರಯತ್ನಪಟ್ಟಿದ್ದಾರೆ. ಆದರೆ, ಆ ಕೆಲಸ ಈಗ ಸಾಧ್ಯವಾಗಿದೆ ಎಂದರು.

ಈ ಕಾಯ್ದೆ ಬಗ್ಗೆ ಮೊದಲು ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಲೋಕಸಭೆಯಲ್ಲಿ ಮಾತನಾಡಿದ್ದರು. ನರೇಂದ್ರ ಮೋದಿಯವರು ಈಗ ಈ ಕಾಯ್ದೆ ಜಾರಿಗೆ ತಂದಿದ್ದಾರೆ. ಏನೋ ಆಗೋಗುತ್ತದೆ ಎಂದು ಕಾಂಗ್ರೆಸ್‍ನವರು ಗುಲ್ಲೆಬ್ಬಿಸುತ್ತಿರುವುದರಲ್ಲಿ ಹುರುಳಿಲ್ಲ ಎಂದರು.

ಈ ಕಾಯ್ದೆಯಲ್ಲಿ ನಮ್ಮ ದೇಶದ ಮುಸ್ಲಿಮರನ್ನು ಓಡಿಸುವಂತಿಲ್ಲ. ಪಾಕಿಸ್ತಾನದಿಂದ ಯಾರೂ ಬರುವಂತಿಲ್ಲ ಅಷ್ಟೆ. ಹೀಗಿರುವಾಗ ಈ ಕಾಯ್ದೆ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಏಕೆ ಎಂದು ಅವರು ಪ್ರಶ್ನಿಸಿದರು.

‘ಪಾಕಿಸ್ತಾನದಿಂದ ಬರುವವರೊಂದಿಗೆ ಬೇಕಾದಷ್ಟು ಮಂದಿ ಉಗ್ರಗಾಮಿಗಳು ಬಂದಿದ್ದಾರೆ. ಅಂಥವರಿಂದಲೇ ಗಲಭೆಗಳು ನಡೆಯುತ್ತಿವೆ. ನಾವು ಇಲ್ಲಿರುವ ಯಾರ ದಾಖಲಾತಿಯನ್ನೂ ಕೇಳಿಲ್ಲ, ಕೇಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ನಮ್ಮ ದೇಶವನ್ನು ಯಾವತ್ತೂ ಸಹ ಪಾಕಿಸ್ತಾನ ಮಾಡಲು ಸಾಧ್ಯವಿಲ್ಲ. ಹೊರಗಡೆಯಿಂದ ಬರುವವರನ್ನು ಸೇರಿಸುವ ಅವಶ್ಯಕತೆ ಇಲ್ಲ ಎಂಬುದು ಈ ಕಾಯ್ದೆಯ ಅಂಶವಾಗಿದೆ ಎಂದರು.

ದೇಶದ ಕಾನೂನಿಗೆ ಗೌರವ ಕೊಡುವಂತಹ ಮನೋಭಾವವನ್ನು ಎಲ್ಲರಲ್ಲೂ ಮೂಡಿಸುವ ಕೆಲಸ ಆಗಬೇಕಿದೆ. ದೇಶ ಭಾರತೀಯರಿಗೆ ಸೇರಿದ್ದು. ಪಾಕಿಸ್ತಾನ, ಆಫ್ಗಾನಿಸ್ಥಾನಕ್ಕೆ ಸೇರಿದ್ದಲ್ಲ. ಇದನ್ನು ಪ್ರತಿಯೊಬ್ಬ ನಾಗರಿಕರು ಅರ್ಥ ಮಾಡಿಕೊಂಡು ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು. ಯಾವುದೇ ಕಾರಣಕ್ಕೂ ಈ ಕಾಯ್ದೆಯನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ಈ ಕಾಯ್ದೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ಆಗಲಿದೆ ಎಂದರು.

ಶಾಸಕ ಜಿ.ಬಿ. ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಡಾ. ಹುಲಿನಾಯ್ಕರ್, ಪಾಲಿಕೆ ಸದಸ್ಯರಾದ ಸಿ.ಎನ್. ರಮೇಶ್, ಮಲ್ಲಿಕಾರ್ಜುನಯ್ಯ, ಶಿಪವ್ರಸಾದ್, ಲಕ್ಷ್ಮೀಶ್, ಕೊಪ್ಪಲ್ ನಾಗರಾಜು, ಡಾ. ಸಂಜಯನಾಯಕ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು