ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಇಡೀ ದಿನ ಸೋನೆ ಮಳೆ

ತೋವಿನಕೆರೆಯಲ್ಲಿ 11 ಮಿ.ಮೀ ಮಳೆ
Last Updated 23 ಜುಲೈ 2021, 6:51 IST
ಅಕ್ಷರ ಗಾತ್ರ

ತುಮಕೂರು: ಕಳೆದ ಒಂದು ವಾರದಿಂದ ಆಗಾಗಬಿಟ್ಟುಬಿಟ್ಟು ಬೀಳುತ್ತಿದ್ದ ಜಿಡಿ ಮಳೆ ಗುರುವಾರ ಇಡೀ ದಿನ ಬಿತ್ತು. ಸ್ವಲ್ಪ ಜೋರು ಅಲ್ಲ,
ಅತ್ತ ತೀರ ಸಣ್ಣ ಹನಿಯೂ ಬೀಳಲಿಲ್ಲ. ಬಟ್ಟೆ ಒದ್ದೆಯಾಗುವಷ್ಟು ಪ್ರಮಾಣದಲ್ಲಿ ದಿನ ಪೂರ್ತಿ ಬೀಳುತ್ತಲೇ ಸಾಗಿತ್ತು.

ಬುಧವಾರ ರಾತ್ರಿ ಆಗಾಗ ಬಂದು ಹೋಗಿತ್ತು. ಗುರುವಾರ ಬೆಳಿಗ್ಗೆಯೂ ಕೆಲ ಸಮಯ ಇದೇ ರೀತಿಯ ಕಣ್ಣಾ ಮುಚ್ಚಾಲೆ ಮುಂದುವರಿಸಿತ್ತು. ನಂತರ ಕೆಲ ಸಮಯ ಬೀಳುವುದು, ನಿಂತಂತೆ ಮಾಡುವುದು, ಮತ್ತೆ ಆರಂಭವಾಗುವುದು ನಡೆದೇ ಇತ್ತು.

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮಕ್ಕಳು ಸೋನೆ ಮಳೆಯಲ್ಲೇ ಬಂದರು. ಕೆಲವರು ಛತ್ರಿ ಮೊರೆ ಹೋಗಿದ್ದರೆ, ಮತ್ತೆ ಕೆಲ ವಿದ್ಯಾರ್ಥಿಗಳು ನೆನೆದುಕೊಂಡೇ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದರು. ಮಕ್ಕಳು ಜಿಡಿ ಮಳೆಯಲ್ಲೂ ಉತ್ಸಾಹ ತುಂಬಿಕೊಂಡವರಂತೆ ಪರೀಕ್ಷೆ ಬರೆದು ಮುಗಿಸಿದರು.

ಸಣ್ಣಗೆ ಕುಟುಕುತ್ತಲೇ ಇದೆ. ಇದರಿಂದ ಕೆಲಸ ಕಾರ್ಯಗಳು ಹಾಳು. ಯಾವ ಕೆಲಸ ಮಾಡಲೂ ಮನಸ್ಸಾಗುತ್ತಿಲ್ಲ, ಓಡಾಡಲೂ ಆಗುತ್ತಿಲ್ಲ, ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಜೋರಾಗಿ ಸುರಿಯದೆ ಮಳೆ ಬಿದ್ದಂತೆ ಮಾಡಿ ಎಲ್ಲಾ ಕೆಲಸ ಕೆಡಿಸಿತು ಎಂದು ಚಿಲ್ಲರೆ ಅಂಗಡಿಗಳಿಗೆ ಸಾಮಾನು ಸಾಗಿಸುವ ರಮೇಶ್ ಪ್ರತಿಕ್ರಿಯಿಸಿದರು.

ಜಿಲ್ಲೆಯಲ್ಲಿ ಮಳೆ ವಿವರ: ಜಿಲ್ಲೆಯ ವಿವಿಧೆಡೆ ಕಳೆದ ಕೆಲ ದಿನಗಳಿಂದ ಸೋನೆ ಮಳೆಯಾಗುತ್ತಿದ್ದು, ಬುಧವಾರವೂ ಕೆಲವೆಡೆ ಬಿದ್ದಿದೆ. ಆದರೆ ಕುಣಿಗಲ್, ತುರುವೇಕೆರೆ, ತಿಪಟೂರು, ಮಧುಗಿರಿ ತಾಲ್ಲೂಕಿನ ಕೆಲವು ಹೋಬಳಿಗಳಲ್ಲಿ ತುಂತುರು ಹನಿ ಬಿದ್ದಿರುವುದು ಬಿಟ್ಟರೆ ಸಮರ್ಪಕವಾಗಿ ಮಳೆಯಾಗಿಲ್ಲ.

ವಿವಿಧೆಡೆ ಕಳೆದ 24 ಗಂಟೆಗಳಲ್ಲಿ (ಗುರುವಾರ ಬೆಳಿಗ್ಗೆ ವರೆಗೆ) ಬಿದ್ದ ಮಳೆ ವಿವರ (ಮಿ.ಮೀ).

ತುಮಕೂರು 6.2 ಮಿ.ಮೀ, ಹೆಬ್ಬೂರು 1, ಊರ್ಡಿಗೆರೆ 8.3, ಬೆಳ್ಳಾವಿ 1, ಹಿರೇಹಳ್ಳಿ 1.2. ಗುಬ್ಬಿ ತಾಲ್ಲೂಕು ಸಿ.ಎಸ್.ಪುರ 1.4, ಹಾಗಲವಾಡಿ 4, ಚೇಳೂರು 6.4, ಅಂಕಸಂದ್ರ 4. ಚಿಕ್ಕನಾಯಕನಹಳ್ಳಿ 2.6, ಮತ್ತಿಘಟ್ಟ 4.6, ದೊಡ್ಡಎಣ್ಣೆಗೆರೆ 5.2, ಹುಳಿಯಾರು 9.8, ಬೋರನಕಣಿವೆ 9.4, ಶೆಟ್ಟಿಕೆರೆ 2.4, ಸಿಂಗದಹಳ್ಳಿ 5.3 ಮಿ.ಮೀ.

ಪಾವಗಡ 5 ಮಿ.ಮೀ, ವೈ.ಎನ್.ಹೊಸಕೋಟೆ 10, ತಿರುಮಣಿ 6, ನಾಗಲಮಡಿಕೆ 8.8. ಕೊರಟಗೆರೆ 6, ಹೊಳವನಹಳ್ಳಿ 5, ಮಾವತ್ತೂರು 4.2, ತೋವಿನಕೆರೆ 11.6. ಮಧುಗಿರಿ 3, ತಿಪಟೂರು ತಾಲ್ಲೂಕು ಹೊನ್ನವಳ್ಳಿ 3.3, ಹಾಲ್ಕುರಿಕೆ 10.2, ತುರುವೇಕೆರೆ ತಾಲ್ಲೂಕು ಸಂಪಿಗೆ 1.4, ಮಾಯಸಂದ್ರ 3.6, ಶಿರಾ 2.2, ಕಳ್ಳಂಬೆಳ್ಳ 1.4, ಬುಕ್ಕಾಪಟ್ಟಣ 2.1, ಬರಗೂರು 5.8, ಹುಣಸೇಹಳ್ಳಿ 6.8 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT