ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತಮ ಮಳೆ: ತಂಪಾದ ಇಳೆ

Published 19 ಮೇ 2024, 6:29 IST
Last Updated 19 ಮೇ 2024, 6:29 IST
ಅಕ್ಷರ ಗಾತ್ರ

ತುಮಕೂರು: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶನಿವಾರ ಸಾಧಾರಣ ಮಳೆ ಸುರಿಯಿತು.

ಶುಕ್ರವಾರ ರಾತ್ರಿಯೂ ಹಲವೆಡೆ ಉತ್ತಮ ಮಳೆಯಾಗಿತ್ತು. ರಾತ್ರಿ 7 ಗಂಟೆಗೆ ಶುರುವಾದ ಮಳೆ 9 ಗಂಟೆಯ ವರೆಗೆ ಬಿತ್ತು. ಸತತವಾಗಿ ಎರಡು ಗಂಟೆ ಸುರಿಯಿತು. ನಗರದ ಅಂತರಸನಹಳ್ಳಿ ಸೇತುವೆ, ಕುಣಿಗಲ್‌ ಮುಖ್ಯರಸ್ತೆಯಲ್ಲಿನ ಕೆಳ ಸೇತುವೆ ಬಳಿ ನೀರು ನಿಂತು ವಾಹನ ಸವಾರರು ಸೇತುವೆ ದಾಟಲು ಪರದಾಡಿದರು.

ಶನಿವಾರ ಸಂಜೆ 4.15 ಗಂಟೆಗೆ ಶುರುವಾದ ಮಳೆ ನಿರಂತರವಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಕಳೆದ ಎರಡು–ಮೂರು ದಿನಗಳಿಂದ ಮಳೆ ಬಿರುಸು ಪಡೆದುಕೊಂಡಿದ್ದು, ರೈತರ ಮುಖದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ. ಮಳೆಯಿಂದ ಇಳೆಯೂ ತಂಪಾಗಿದೆ. ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನರೂ ಮಳೆಯ ಆಗಮನದಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಗ್ರಾಮೀಣ ಭಾಗದಲ್ಲಿ ಹಲವು ದಿನಗಳಿಂದ ಮಳೆಯಾಗುತ್ತಿದ್ದರೂ ನಗರ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಿರಲಿಲ್ಲ. ಶುಕ್ರವಾರ ರಾತ್ರಿ ಮತ್ತು ಶನಿವಾರ ಸಂಜೆ ಸುರಿದ ಮಳೆಯು ವಾತಾವರಣವನ್ನು ತಂಪಾಗಿಸಿತು.

ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ನಗರದ ವಿವಿಧೆಡೆ ಯುಜಿಡಿ ಸೋರಿಕೆಯಾಗಿ ಜನರು ಪರದಾಡುತ್ತಾರೆ. ಪ್ರಮುಖ ರಸ್ತೆಗಳಲ್ಲಿಯೇ ಯುಜಿಡಿ ಸಮಸ್ಯೆಯಾಗುತ್ತಿದೆ. ವಾಹನಗಳ ಸುಗಮ ಸಂಚಾರಕ್ಕೂ ವ್ಯತ್ಯಯವಾಗುತ್ತಿದೆ. ಶನಿವಾರ ಗುಂಚಿ ವೃತ್ತದ ಬಳಿಯ ಬಿಇಒ ಕಚೇರಿ ಬಳಿ ಯುಜಿಡಿ ಸೋರಿಕೆಯಾಗಿ ಕಲುಷಿತ ನೀರು ಹೊರ ಬರುತ್ತಿದೆ. ಇದರಿಂದ ಕಚೇರಿಯ ಸಿಬ್ಬಂದಿ ಕೆಲಸ ಮಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಾನಗರ ಪಾಲಿಕೆ ಎಂಜಿನಿಯರ್‌ ಹೇಮಂತ್ ಅವರಿಗೆ ಕರೆ ಮಾಡಿದರೂ ಸ್ಪಂದಿಸಲಿಲ್ಲ ಎಂದು ಬಿಇಒ ಕಚೇರಿ ಸಿಬ್ಬಂದಿ ದೂರಿದರು. ಮಳೆ ಬಂದ ಪ್ರತಿ ಸಾರಿಯೂ ನಗರದಲ್ಲಿ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ತುಮಕೂರಿನಲ್ಲಿ ಶನಿವಾರ ಸುರಿದ ಮಳೆಗೆ ಕೆರೆಯಂತಾದ ಕೋತಿತೋಪಿನ‌ ಸರ್ವೋದಯ ವಿದ್ಯಾಸಂಸ್ಥೆ ಮುಂಭಾಗದ ರಸ್ತೆಯಲ್ಲಿ ವಾಹನ ಸವಾರರ ಪರದಾಟ
ತುಮಕೂರಿನಲ್ಲಿ ಶನಿವಾರ ಸುರಿದ ಮಳೆಗೆ ಕೆರೆಯಂತಾದ ಕೋತಿತೋಪಿನ‌ ಸರ್ವೋದಯ ವಿದ್ಯಾಸಂಸ್ಥೆ ಮುಂಭಾಗದ ರಸ್ತೆಯಲ್ಲಿ ವಾಹನ ಸವಾರರ ಪರದಾಟ
ತುಮಕೂರಿನಲ್ಲಿ ಶನಿವಾರ ಸುರಿದ ಮಳೆಯಲ್ಲಿ ಮಹಿಳೆಯರು ಕೊಡೆ ಹಿಡಿದು ಸಾಗಿದರು
ತುಮಕೂರಿನಲ್ಲಿ ಶನಿವಾರ ಸುರಿದ ಮಳೆಯಲ್ಲಿ ಮಹಿಳೆಯರು ಕೊಡೆ ಹಿಡಿದು ಸಾಗಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT