ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಅಂಗನವಾಡಿ ಕಟ್ಟಡ ಬಾಡಿಗೆ ಬಾಕಿ: 8 ತಿಂಗಳಿಂದ ಪಾವತಿಯಾಗದ ಹಣ

Published 2 ಆಗಸ್ಟ್ 2023, 5:33 IST
Last Updated 2 ಆಗಸ್ಟ್ 2023, 5:33 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಕಳೆದ ಎಂಟು ತಿಂಗಳಿನಿಂದ ಬಾಡಿಗೆ ಹಣ ಪಾವತಿಯಾಗಿಲ್ಲ. ಜಿಲ್ಲೆಯ 1,217 ಕೇಂದ್ರಗಳಿಗೆ ಇದುವರೆಗೆ ಸ್ವಂತ ಸೂರಿಲ್ಲ.

ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳು ಕಳೆಯುತ್ತಾ ಬಂದರೂ ಅಂಗನವಾಡಿಗಳ ಸಮಸ್ಯೆ ಬಗೆಹರಿದಿಲ್ಲ. ಈ ಹಿಂದಿನ ಸರ್ಕಾರ ಬಾಕಿ ಉಳಿಸಿಕೊಂಡಿರುವ ಬಾಡಿಗೆ ಹಣದ ಜತೆಗೆ ಹೊಸ ಅನುದಾನ ಬಿಡುಗಡೆಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎದುರು ನೋಡುತ್ತಿದೆ.

ಅಭಿವೃದ್ಧಿ ಕಾರ್ಯಗಳ ಕಡೆ ಸರ್ಕಾರ ಗಮನ ಹರಿಸಬೇಕು. ಅಗತ್ಯ ಅನುದಾನ ಬಿಡುಗಡೆಗೆ ಹೆಚ್ಚಿನ ಒತ್ತು ನೀಡಬೇಕು. ಐದು ‘ಗ್ಯಾರಂಟಿ’ಗಳ ಅನುಷ್ಠಾನದ ಭರದಲ್ಲಿ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸುವುದನ್ನು ಮರೆತಿದೆ ಎಂಬ ಆರೋಪ ಪೋಷಕರಿಂದ ಕೇಳಿ ಬರುತ್ತಿದೆ.

ಜಿಲ್ಲೆಯಲ್ಲಿ ಒಟ್ಟು 4,199 ಅಂಗನವಾಡಿ ಕೇಂದ್ರಗಳಿದ್ದು, 611 ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ. 606 ಕೇಂದ್ರಗಳು ಗ್ರಾಮ ಪಂಚಾಯಿತಿ, ಸಮುದಾಯ ಭವನ, ಸರ್ಕಾರಿ ಶಾಲೆಗಳಲ್ಲಿ ನಡೆಯುತ್ತಿವೆ. ನಗರಕ್ಕಿಂತ ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚಿನ ಕೇಂದ್ರಗಳು ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ನಗರ ಪ್ರದೇಶದಲ್ಲಿ ₹4 ಸಾವಿರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ₹1 ಸಾವಿರ ಬಾಡಿಗೆ ನೀಡಲಾಗುತ್ತಿದೆ.

ತುಮಕೂರು ನಗರದಲ್ಲಿ 105, ಗ್ರಾಮಾಂತರದಲ್ಲಿ 60 ಕೇಂದ್ರಗಳು ಖಾಸಗಿ ಕಟ್ಟಡದಲ್ಲಿವೆ. ಜಿಲ್ಲೆಯ ಶೇ 28ರಷ್ಟು ಕೇಂದ್ರಗಳಿಗೆ ಬಾಡಿಗೆ ಕಟ್ಟಡಗಳೇ ಆಸರೆಯಾಗಿವೆ. ಸ್ವಂತ ಕಟ್ಟಡ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಪ್ರಯತ್ನ ನಡೆಯುತ್ತಿದ್ದರೂ ಸೂಕ್ತ ರೀತಿಯಲ್ಲಿ ಕೆಲಸಗಳು ಆಗುತ್ತಿಲ್ಲ. ನಗರ ಪ್ರದೇಶದಲ್ಲಿ ನಿವೇಶನದ ಸಮಸ್ಯೆಯಿಂದಾಗಿ ಕಟ್ಟಡದ ನಿರ್ಮಾಣ ಸಾಧ್ಯವಾಗುತ್ತಿಲ್ಲ.

ಸರ್ಕಾರದಿಂದ ಅನುದಾನ ಬಿಡುಗಡೆಯಾದರೂ ಜಾಗದ ಕೊರತೆ ಎದುರಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆಯಡಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಚಿಕ್ಕದಾದ ಕೊಠಡಿಗಳಲ್ಲಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ. ಇದರಿಂದ ಮಕ್ಕಳ ಆಟೋಟಕ್ಕೆ ತುಂಬಾ ಸಮಸ್ಯೆಯಾಗುತ್ತಿದೆ. ಕಲಿಕೆಯ ಪ್ರಾರಂಭಿಕ ಹಂತದಲ್ಲಿಯೇ ಮಕ್ಕಳಿಗೆ ಅಗತ್ಯ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.

ವಿಧಾನಸಭಾ ಕ್ಷೇತ್ರ;ಬಾಡಿಗೆ ಕಟ್ಟಡ

ಚಿಕ್ಕನಾಯಕನಹಳ್ಳಿ;20

ಗುಬ್ಬಿ;45

ಕೊರಟಗೆರೆ;44

ಕುಣಿಗಲ್‌;50

ಮಧುಗಿರಿ;61

ಪಾವಗಡ;21

ಶಿರಾ;97

ತಿಪಟೂರು;62

ತುಮಕೂರು ಗ್ರಾಮಾಂತರ;60

ತುಮಕೂರು ನಗರ;105

ತುರುವೇಕೆರೆ;46

ಒಟ್ಟು;611

ಸರ್ಕಾರದಿಂದ ಅನುದಾನ ಬಿಡುಗಡೆಯಾಗಬೇಕಿದೆ. ಬಂದ ತಕ್ಷಣ ಎಲ್ಲ ಅಂಗನವಾಡಿ ಕೇಂದ್ರಗಳ ಬಾಕಿ ಹಣ ಪಾವತಿಸಲಾಗುವುದು.
- ಎಂ.ಎಸ್‌.ಶ್ರೀಧರ್‌ ಉಪನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT