ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ | ಬಿಸಿಯೂಟ ನೌಕರರ ವೇತನ ₹12 ಸಾವಿರಕ್ಕೆ ಹೆಚ್ಚಿಸಲು ಮನವಿ

Published 11 ಜುಲೈ 2023, 14:14 IST
Last Updated 11 ಜುಲೈ 2023, 14:14 IST
ಅಕ್ಷರ ಗಾತ್ರ

ಪಾವಗಡ: ಅಕ್ಷರ ದಾಸೋಹ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಮುಂಭಾಗ ಮಂಗಳವಾರ ನೌಕರರು ಪ್ರತಿಭಟನೆ ನಡೆಸಿದರು.

21 ವರ್ಷಗಳಿಂದ ಅಕ್ಷರ ದಾಸೋಹ ನೌಕರರು ಶಾಲೆಗಳಲ್ಲಿ ಅಡುಗೆ ತಯಾರಿಸುತ್ತಿದ್ದಾರೆ. ಅಡುಗೆ ಕೆಲಸದ ಜೊತೆ ಶಾಲೆಯಲ್ಲಿ ಸ್ವಚ್ಛತೆ, ಕೈತೋಟದ ನಿರ್ವಹಣೆ ಇತ್ಯಾದಿ ಕೆಲಸವನ್ನೂ ನಿರ್ವಹಿಸುತ್ತಿದ್ದಾರೆ. ಆದರೆ ಸರ್ಕಾರ ನೌಕರರಿಗೆ ಅಗತ್ಯ ಸವಲತ್ತು ಕಲ್ಪಿಸದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಪ್ರತಿಭಟನೆ ನಿರತರು ಆರೋಪಿಸಿದರು.

2023ರ ಬಜೆಟ್‌ನಲ್ಲಿ ಹಿಂದಿನ ಸರ್ಕಾರ ಬಿಸಿ ಊಟ ನೌಕರರಿಗೆ ₹1 ಸಾವಿರ ಗೌರವಧನ ಹೆಚ್ಚಳ ಮಾಡುವುದಾಗಿ ಘೋಷಿಸಿತ್ತು. ಆದರೆ ಈವರೆಗೆ ಅನುಷ್ಠಾನವಾಗಿಲ್ಲ. ವೇತನ ಹೆಚ್ಚಳವನ್ನೂ ಮಾಡಿಲ್ಲ. ಸೇವಾ ಭದ್ರತೆ ಸೇರಿದಂತೆ ಯಾವುದೇ ಸವಲತ್ತು ಕಲ್ಪಿಸಿಲ್ಲ ಎಂದು ದೂರಿದರು.

ಈ ಕೂಡಲೇ ವೇತನವನ್ನು ₹12 ಸಾವಿರಕ್ಕೆ ಹೆಚ್ಚಿಸಬೇಕು. ಮಾರ್ಗಸೂಚಿಯಲ್ಲಿ ಕೆಲಸದ ಅವಧಿ ನಾಲ್ಕು ಗಂಟೆ ಎಂದು ಇದ್ದು, ಅದನ್ನು 6 ಗಂಟೆ ಎಂದು ತಿದ್ದುಪಡಿ ಮಾಡಬೇಕು. ನಿವೃತ್ತಿಯಾದ ನೌಕರರಿಗೆ ₹1 ಲಕ್ಷ ನೀಡಬೇಕು. ಜಂಟಿ ಖಾತೆ ಜವಾಬ್ದಾರಿ ಈ ಹಿಂದಿನಂತೆ ಮುಖ್ಯ ಅಡುಗೆಯವರಿಗೆ ನೀಡಬೇಕು ಎಂದರು.

ರಜಾ ಅವಧಿಯಲ್ಲಿಯೂ ವೇತನ ನೀಡಬೇಕು. ಬಿಸಿಯೂಟ ಯೋಜನೆ ಖಾಸಗಿ ಸಂಸ್ಥೆಗಳಿಗೆ ನೀಡಬಾರದು. ಶಾಲೆಗೆ ಕನಿಷ್ಠ ಇಬ್ಬರು ಅಡುಗೆಯವರು ಇರಲೇಬೇಕು ಎಂದು ಆದೇಶ ನೀಡಬೇಕು. ಅಡುಗೆ ಕೆಲಸದ ಜೊತೆ ಶಾಲೆ, ಕೈತೋಟ ನಿರ್ವಹಣೆ ಮಾಡುವ ಬಿಸಿ ಊಟ ನೌಕರರನ್ನು ‘ಡಿ’ ಗ್ರೂಪ್ ನೌಕರರನ್ನಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಶಿವರಾಜಯ್ಯ ಅವರಿಗೆ ನೌಕರರು ಮನವಿ ಪತ್ರ ನೀಡಿದರು.

ಬಿಸಿ ಊಟ ನೌಕರರ ಸಂಘದ ಅಧ್ಯಕ್ಷೆ ಕೆಂಚಮ್ಮ, ಪ್ರಧಾನ ಕಾರ್ಯದರ್ಶಿ ನಾಗರತ್ನಮ್ಮ, ಖಜಾಂಚಿ ಸೌಮ್ಯ, ಮಂಜುಳ, ಸುಶೀಲಮ್ಮ, ಸಾಕಮ್ಮ, ರತ್ನಮ್ಮ, ಗಂಗಮ್ಮ, ಮಲ್ಲಮ್ಮ, ಸರಸ್ವತಿ, ಅರುಂದತಿ, ಗೋವಿಂದಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT