ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಚ್ಚಿದ್ದ ಶಾಲೆಗೆ 10 ವರ್ಷಗಳ ನಂತರ ಮರುಜೀವ

ದಶಕದ ನಂತರ ಚಿಣ್ಣರ ಕಲರವ: 16 ವಿದ್ಯಾರ್ಥಿಗಳು ದಾಖಲು
Last Updated 27 ನವೆಂಬರ್ 2021, 7:20 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಬರಗೂರು ಕ್ಲಸ್ಟರ್‌ ವ್ಯಾಪ್ತಿಯ ಯರೇಕಟ್ಟೆ ಸರ್ಕಾರಿ ಶಾಲೆಗೆ 10 ವರ್ಷಗಳ ನಂತರ ಗ್ರಾಮಸ್ಥರು ಮರುಜೀವ ನೀಡಿದ್ದಾರೆ. ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿದ್ದ ಶಾಲೆಯಲ್ಲಿ ಮತ್ತೆ ಮಕ್ಕಳ ಕಲರವ ಕೇಳುತ್ತಿದೆ.

ಸುಮಾರು 30 ಕುಟುಂಬಗಳಿರುವ ಗ್ರಾಮದಿಂದ ಅಕ್ಕಪಕ್ಕದ ಗ್ರಾಮಗಳ ಶಾಲೆಗೆ ಮಕ್ಕಳು ಹೋಗುತ್ತಿದ್ದರು. ಗ್ರಾಮದಲ್ಲಿ ಶಾಲೆಯೊಂದು ಇರಬೇಕೆಂಬ ಗ್ರಾಮಸ್ಥರ ಬೇಡಿಕೆಯಂತೆ ಮೂರು ದಶಕಗಳ ಹಿಂದೆ ಕಿರಿಯ ಪ್ರಾಥಮಿಕ ಶಾಲೆ ಆರಂಭವಾಗಿತ್ತು. ಆರಂಭದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಉತ್ತಮವಾಗಿತ್ತು. ಕ್ರಮೇಣ ಇಳಿಮುಖವಾಯಿತು.

ವಿದ್ಯಾರ್ಥಿಗಳ ಕೊರತೆಯಿಂದ 10 ವರ್ಷಗಳ ಹಿಂದೆ ಶಿಕ್ಷಣ ಇಲಾಖೆ ಆದೇಶದಂತೆ ಶಾಲೆಯನ್ನು ಮುಚ್ಚಲಾಗಿತ್ತು. ಶಾಲೆ ಮುಚ್ಚುವ ವೇಳೆ ವಿದ್ಯಾರ್ಥಿಗಳ ಹಾಜರಾತಿ 2ಕ್ಕೆ ಇಳಿದಿತ್ತು. ಶಾಲೆಯ ದಾಖಲಾತಿಗಳನ್ನು ಪಕ್ಕದ ಬರಗೂರು ಸರ್ಕಾರಿ ಶಾಲೆಗೆ ವರ್ಗಾವಣೆ ಮಾಡಿ ಶಾಲೆಯನ್ನು ಮುಚ್ಚಲಾಯಿತು. ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿದ್ದ ಕೆಲವು ಪೋಷಕರು ದೂರದ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಿದ್ದರು.ಕೆಲವು ವಿದ್ಯಾರ್ಥಿಗಳು ಮಾತ್ರ ಅಕ್ಕಪಕ್ಕದ ಶಾಲೆಗಳಿಗೆಹೋಗುತ್ತಿದ್ದರು.

ಬೇರೆ ಬೇರೆ ಊರುಗಳಲ್ಲಿ ನೆಲೆ ಕಂಡುಕೊಂಡಿದ್ದ ಗ್ರಾಮಸ್ಥರು, ಕೋವಿಡ್‌ ಸಂಕಷ್ಟದ ನಂತರ ಮತ್ತೆ ಗ್ರಾಮಕ್ಕೆ ಬಂದಿದ್ದಾರೆ. ತಮ್ಮೂರಿನ ಶಾಲೆಯತ್ತ ಗಮನ ಹರಿಸಿದ್ದಾರೆ. ಗ್ರಾಮದ ಕೆಲವು ಯುವಕರು ಗ್ರಾಮದಲ್ಲಿ ಸಭೆ ನಡೆಸಿ, ತಮ್ಮೂರಿನ ಶಾಲೆಯನ್ನು ಮತ್ತೆ ಪ್ರಾರಂಭಿಸುವಪಣತೊಟ್ಟು ಶಾಲೆಯ ಆರಂಭಕ್ಕೆ ಕಾರಣರಾಗಿದ್ದಾರೆ. ಶಾಲೆಗೆ 1ರಿಂದ 4ನೇ ತರಗತಿವರೆಗೆ 16 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಹತ್ತು ವರ್ಷಗಳಿಂದ ಬಣಗುಡುತ್ತಿದ್ದ ಶಾಲೆ ಕಟ್ಟಡದಲ್ಲಿಮತ್ತೆ ಮಕ್ಕಳ ನಗುಚೆಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT