ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನರೇಗಾ ಕೂಲಿ ಹಣ ಬಿಡುಗಡೆ ಮಾಡಲು ₹1 ಸಾವಿರ ಲಂಚ: ಪಿಡಿಒಗೆ 3 ವರ್ಷ ಜೈಲು

Published : 22 ಸೆಪ್ಟೆಂಬರ್ 2024, 6:11 IST
Last Updated : 22 ಸೆಪ್ಟೆಂಬರ್ 2024, 6:11 IST
ಫಾಲೋ ಮಾಡಿ
Comments

ತುಮಕೂರು: ನರೇಗಾ ಕೂಲಿ ಹಣ, ಸಾಮಗ್ರಿ ವೆಚ್ಚ ಬಿಡುಗಡೆ ಮಾಡಲು ₹1 ಸಾವಿರ ಲಂಚ ಪಡೆದಿದ್ದ ಶಿರಾ ತಾಲ್ಲೂಕಿನ ರಾಮಲಿಂಗಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಓಂಕಾರಪ್ಪಗೆ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ, ₹5 ಸಾವಿರ ದಂಡ ವಿಧಿಸಿದೆ.

ಜಾನಕಲ್‌ ಗ್ರಾಮದ ಕೋದಂಡರಾಮು ತಮ್ಮ ಜಮೀನಿನಲ್ಲಿ ನರೇಗಾ ಯೋಜನೆಯಡಿ ಕೃಷಿಹೊಂಡ ನಿರ್ಮಿಸಿದ್ದರು. ಕಾಮಗಾರಿಗೆ ₹43,550 ಕೂಲಿ ಹಣ, ₹6,448 ಸಾಮಗ್ರಿ ವೆಚ್ಚ ಸೇರಿ ಒಟ್ಟು ₹50 ಸಾವಿರ ಮಂಜೂರು ಮಾಡಲು ಓಂಕಾರಪ್ಪ ₹1 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 2020ರ ಸೆ. 16ರಂದು ಮುಂಗಡವಾಗಿ ₹500 ಪಡೆದಿದ್ದರು. ನಂತರ ಕೋದಂಡರಾಮು ಹಣ ನೀಡಲು ಇಷ್ಟವಿಲ್ಲದೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದಲ್ಲಿ ದೂರು ಸಲ್ಲಿಸಿದ್ದರು.

ಸೆ. 22ರಂದು ಮಧ್ಯಾಹ್ನ 3 ಗಂಟೆಗೆ ಶಿರಾ ನಗರದ ಹಳೆಯ ತಾಲ್ಲೂಕು ಕಚೇರಿ ಮುಂಭಾಗ ಬಾಕಿ ಹಣ ತೆಗೆದುಕೊಳ್ಳುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಇನ್‌ಸ್ಪೆಕ್ಟರ್‌ ಇಮ್ರಾನ್‌ಬೇಗ್‌ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಎಸಿಬಿ ರದ್ದಾದ ನಂತರ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಕೆ.ರಾಮರೆಡ್ಡಿ ಪ್ರಕರಣದ ತನಿಖೆ ಪೂರ್ಣಗೊಳಿಸಿ, ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 

ಶನಿವಾರ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ಪ್ರಕರಣದ ವಿಚಾರಣೆ ನಡೆಸಿ ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಎನ್‌.ಬಿ.ಬಸವರಾಜು ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT