ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ ಉಳಿತಾಯಕ್ಕೆ ಪ್ರತಿಜ್ಞೆ

‘ಸಕ್ಷಮ್‌’ ಅಂಗವಾಗಿ ವಿದ್ಯಾವಾಹಿನಿ ಕಾಲೇಜಿನಲ್ಲಿ ರಸಪ್ರಶ್ನೆ ಕಾರ್ಯಕ್ರಮ
Last Updated 12 ಫೆಬ್ರುವರಿ 2020, 8:54 IST
ಅಕ್ಷರ ಗಾತ್ರ

ತುಮಕೂರು: ಪೆಟ್ರೋಲಿಯಂ ಕನ್ಸ್‌ರ್ವೇಷನ್‌ ರಿಸರ್ಚ್‌ ಅಸೋಸಿಯೇಷನ್‌ (ಪಿಸಿಆರ್‌ಎ) ನಡೆಸುತ್ತಿರುವ ಇಂಧನ ಸುರಕ್ಷತಾ ಅಭಿಯಾನ ‘ಸಕ್ಷಮ್‌’ ಅಂಗವಾಗಿ, ಭಾರತೀಯ ತೈಲ ನಿಗಮ (ಐಒಸಿಎಲ್)ದಿಂದ ನಗರದ ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಇಂಧನ ಸಂರಕ್ಷಣಾ ಅಭಿಯಾನದ ಕುರಿತು ರಸಪ್ರಶ್ನೆ ಕಾರ್ಯಕ್ರಮ ನಡೆಯಿತು.

ಅಭಿಯಾನದಲ್ಲಿ ಇಂಧನ ಮಿತವ್ಯಯದ ಬಳಕೆಗೆ ಸಂಬಂಧಿಸಿದಂತೆ ಪಿಪಿಟಿ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು. ಜಾಹೀರಾತುಗಳನ್ನು ಪ್ರದರ್ಶಿಸಲಾಯಿತು. ಇಂಧನ ಮಿತವ್ಯಯದ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ನಿಮ್ಮ ಕಾಲೇಜಿನಲ್ಲಿ ಪ್ರತಿದಿನವೂ ಉಪಯೋಗಿಸುವ ನವೀಕರಿಸಬಹುದಾದ ಇಂಧನ ಯಾವುದು? ಎನ್ನುವ ಪ್ರಶ್ನೆಗೆ ವಿದ್ಯಾರ್ಥಿಗಳು ತಡವರಿಸಿದರು. ಇದಕ್ಕೂ ಮೊದಲು ಅನೇಕ ಪ್ರಶ್ನೆಗಳಿಗೆ ನಾ ಮುಂದು ತಾ ಮುಂದು ಎಂದು ಉತ್ತರಿಸಿದ್ದರು. ಅನೇಕ ಸುಳುಹುಗಳ ನಂತರ ‘ಮನುಷ್ಯನ ಮೆದುಳು’ ಎನ್ನುವ ಉತ್ತರ ಬಂದಿತು.

ಇಂಧನ ಮಿತವ್ಯಯ ಹಾಗೂ ಉಳಿತಾಯಕ್ಕೆ ವಿದ್ಯಾರ್ಥಿಗಳು ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ಕೆಎಸ್‌ಆರ್‌ಟಿಸಿ ತಾಂತ್ರಿಕ ವಿಭಾಗದ ಎಂಜಿನಿಯರ್‌ ಆಸಿಫುಲ್ಲಾ ಷರೀಫ್‌ ಸಂವಾದ ನಡೆಸಿದರು.

ಮಹಾನಗರ ಪಾಲಿಕೆ ಮೇಯರ್‌ ಫರೀದಾ ಬೇಗಂ ಇಂಧನ ಉಳಿತಾಯಕ್ಕೆ ಸ್ಥಳೀಯ ಆಡಳಿತದಿಂದ ಯೋಜನೆ ರೂಪಿಸುವ ಕುರಿತು ಆಲೋಚಿಸುವುದಾಗಿ ಭರವಸೆ ನೀಡಿದರು.

ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ವಾಹನಗಳ ಎಂಜಿನ್‌ ಬಂದ್‌ ಮಾಡಬೇಕು. ಬಿಸಿಲಿನಲ್ಲಿ ಹೆಚ್ಚುಹೊತ್ತು ವಾಹನಗಳನ್ನು ನಿಲ್ಲಿಸಬಾರದು, 45ರಿಂದ 55ರ ವೇಗದ ಮಿತಿಯಲ್ಲಿ ವಾಹನಗಳನ್ನು ಓಡಿಸುವುದರಿಂದ ಶೇ 30 ರಷ್ಟು ಇಂಧನ ಉಳಿತಾಯವಾಗುತ್ತದೆ. ನಮ್ಮ ದೇಹದ ಆರೋಗ್ಯವನ್ನು ಆಗಾಗ್ಗೆ ಪರೀಕ್ಷಿಸುವಂತೆ ವಾಹನಗಳ ಆರೋಗ್ಯ ಸಹ ಪರೀಕ್ಷಿಸುತ್ತಿರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆಗಳನ್ನು ನೀಡಲಾಯಿತು.

ಅಡುಗೆ ಮಾಡಲು ಪ್ರೆಶರ್‌ ಕುಕ್ಕರ್‌ಗಳನ್ನು ಬಳಸಬೇಕು. ವೈಯಕ್ತಿಕ ವಾಹನಗಳ ಬದಲಿಗೆ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸುವಂತೆ ಜಾಗೃತಿ ಮೂಡಿಸಲಾಯಿತು.

ಉಪಮೇಯರ್‌ ಶಶಿಕಲಾ ಗಂಗಹನುಮಯ್ಯ, ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಬಿ.ಜಯಣ್ಣ, ಕಾರ್ಯದರ್ಶಿ ಎನ್‌.ಬಿ.ಪ್ರದೀಪ್‌ ಕುಮಾರ್‌, ಪ್ರಾಂಶುಪಾಲ ಪ್ರವೀಣ್‌ ಕುಮಾರ್‌ ಇದ್ದರು.

ತಿಂಗಳಿಗೊಮ್ಮೆ ಸೈಕಲ್ ದಿನ

ಕಾಲೇಜಿನಲ್ಲಿ ತಿಂಗಳಿಗೆ ಒಮ್ಮೆ ‘ಸೈಕಲ್‌ ದಿನ’ ಆಚರಿಸುವುದಾಗಿ ವಿದ್ಯಾರ್ಥಿಗಳು, ಅಧ್ಯಾಪಕರು ಭರವಸೆ ನೀಡಿದರು. ನಂತರ ಜಾಗೃತಿ ಕಾರ್ಯಕ್ರಮವನ್ನು ಆಧರಿಸಿ ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ಸರಿ ಉತ್ತರ ನೀಡಿದ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT