ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ದ್ವಿತೀಯ ಪಿಯುಸಿ ಪರೀಕ್ಷೆ: ಮೊದಲ ದಿನ 1,067 ಮಂದಿ ಗೈರು

Published 2 ಮಾರ್ಚ್ 2024, 4:59 IST
Last Updated 2 ಮಾರ್ಚ್ 2024, 4:59 IST
ಅಕ್ಷರ ಗಾತ್ರ

ತುಮಕೂರು: ಮೊದಲ ದಿನದ ಕನ್ನಡ ಪ್ರಶ್ನೆ ಪತ್ರಿಕೆ ತುಂಬಾ ಸುಲಭವಾಗಿತ್ತು. ಎಲ್ಲರೂ ಸೂಪರ್‌ ಆಗಿ ಪರೀಕ್ಷೆ ಬರೆದಿದ್ದೇವೆ. ಎಲ್ಲ ಪ್ರಶ್ನೆ ಪತ್ರಿಕೆ ಹೀಗೆ ಇದ್ದರೆ ಚೆಂದ....

ಹೀಗೆಂದು ಹೇಳಿದ್ದು ಸೇಂಟ್‌ ಮೇರಿಸ್‌ ಶಾಲೆಯ ವಿದ್ಯಾರ್ಥಿನಿ ಡಿಂಪನಾ. ನಗರದ ಎಂಪ್ರೆಸ್‌ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಶುಕ್ರವಾರ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಖುಷಿಯಿಂದಲೇ ಹೊರ ಬಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಭಯ, ಆತಂಕದಿಂದ ಪರೀಕ್ಷಾ ಕೇಂದ್ರದ ಒಳಗಡೆ ಹೋಗಿದ್ದ ವಿದ್ಯಾರ್ಥಿಗಳು ನಗುತ್ತಾ ಕೇಂದ್ರದಿಂದ ಹೊರ ಬಂದರು. ಪರೀಕ್ಷೆ ಕುರಿತು ಅವರಲ್ಲಿದ್ದ ದುಗುಡವನ್ನು ಕನ್ನಡ ಪತ್ರಿಕೆ ದೂರ ಮಾಡಿದೆ. ‘ಮುಂದಿನ ಎಲ್ಲ ವಿಷಯಗಳು ಇದೇ ರೀತಿ ಇದ್ದರೆ ಎಲ್ಲರೂ ಒಳ್ಳೆಯ ಅಂಕಗಳನ್ನು ಪಡೆದು, ಉತ್ತೀರ್ಣರಾಗುತ್ತಾರೆ’ ಎನ್ನುವಾಗ ಮುಖದಲ್ಲಿ ನಗು ಮೂಡಿತ್ತು.

ನಗರದ ಎಂಪ್ರೆಸ್‌ ಕಾಲೇಜು, ಜೂನಿಯರ್‌ ಕಾಲೇಜು ಸೇರಿದಂತೆ ತಾಲ್ಲೂಕಿನಲ್ಲಿ 13 ಪರೀಕ್ಷಾ ಕೇಂದ್ರಗಳು ಒಳಗೊಂಡಂತೆ ಜಿಲ್ಲೆಯ 35 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಕನ್ನಡ ಪರೀಕ್ಷೆಗೆ 23,130 ವಿದ್ಯಾರ್ಥಿಗಳು ನೋಂದಣಿಯಾಗಿದ್ದರು. 22,063 ಮಂದಿ ಪರೀಕ್ಷೆ ಬರೆದಿದ್ದು, 1,067 ವಿದ್ಯಾರ್ಥಿಗಳು ಗೈರಾಗಿದ್ದರು.

ಪರೀಕ್ಷೆಯ ಮೊದಲ ದಿನವಾದ್ದರಿಂದ ವಿದ್ಯಾರ್ಥಿಗಳು ಬೆಳಗ್ಗೆ 8 ಗಂಟೆಯಿಂದಲೇ ಪರೀಕ್ಷಾ ಕೇಂದ್ರಗಳತ್ತ ಹೆಜ್ಜೆ ಹಾಕಿದರು. ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ 30 ಮಂದಿ ಅಂಧರು, ಅಂಗವಿಕಲ ಅಭ್ಯರ್ಥಿಗಳು ಪರೀಕ್ಷೆ ಬರೆದರು. ಅವರಿಗೆ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲಾಗಿತ್ತು.

ಜಿಲ್ಲೆಯಾದ್ಯಂತ ಯಾವುದೇ ಗಲಾಟೆ, ಗದ್ದಲಗಳು ಆಗದೆ ಶಾಂತ ರೀತಿಯಲ್ಲಿ ಪಿಯುಸಿ ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಎಂಪ್ರೆಸ್‌ ಕಾಲೇಜು, ಸಿದ್ಧಗಂಗಾ ಮಹಿಳಾ ಕಾಲೇಜಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಒಳಗಡೆ ಪರೀಕ್ಷೆ ಬರೆಯುತ್ತಿದ್ದರೆ, ಪೋಷಕರು ಕೇಂದ್ರದ ಮುಂದೆ ತಮ್ಮ ಮಕ್ಕಳಿಗಾಗಿ ಕಾಯುತ್ತಿದ್ದ ದೃಶ್ಯಗಳು ಕಂಡು ಬಂದವು.

ತುಮಕೂರಿನಲ್ಲಿ ಶುಕ್ರವಾರ ಸಿದ್ಧಗಂಗಾ ಕಾಲೇಜಿನ ಪರೀಕ್ಷಾ ಕೇಂದ್ರದ ಮುಂದೆ ಮಕ್ಕಳಿಗಾಗಿ ಕಾಯುತ್ತಿದ್ದ ಪೋಷಕರು
ತುಮಕೂರಿನಲ್ಲಿ ಶುಕ್ರವಾರ ಸಿದ್ಧಗಂಗಾ ಕಾಲೇಜಿನ ಪರೀಕ್ಷಾ ಕೇಂದ್ರದ ಮುಂದೆ ಮಕ್ಕಳಿಗಾಗಿ ಕಾಯುತ್ತಿದ್ದ ಪೋಷಕರು
ತುಮಕೂರಿನ ಎಂಪ್ರೆಸ್‌ ಕಾಲೇಜು ಬಳಿ ಶುಕ್ರವಾರ ಪರೀಕ್ಷೆ ಆರಂಭಕ್ಕೂ ಮುನ್ನ ಅಭ್ಯಾಸದಲ್ಲಿ ತೊಡಗಿದ್ದ ವಿದ್ಯಾರ್ಥಿನಿಯರು
ತುಮಕೂರಿನ ಎಂಪ್ರೆಸ್‌ ಕಾಲೇಜು ಬಳಿ ಶುಕ್ರವಾರ ಪರೀಕ್ಷೆ ಆರಂಭಕ್ಕೂ ಮುನ್ನ ಅಭ್ಯಾಸದಲ್ಲಿ ತೊಡಗಿದ್ದ ವಿದ್ಯಾರ್ಥಿನಿಯರು
ದ್ವಿತೀಯ ಪಿಯುಸಿ ಪರೀಕ್ಷೆ ಸುಸೂತ್ರ 23,130 ಮಂದಿ ವಿದ್ಯಾರ್ಥಿಗಳು ನೋಂದಣಿ 30 ಮಂದಿ ಅಂಧರು, ಅಂಗವಿಕಲ ಅಭ್ಯರ್ಥಿಗಳು
ಸುಲಭವಾಗಿತ್ತು ಪರೀಕ್ಷೆಗೂ ಮುಂಚೆ ಅಭ್ಯಾಸ ಮಾಡಿದ ಪ್ರಶ್ನೆಗಳೇ ಬಂದಿದ್ದರಿಂದ ಹೆಚ್ಚಿನ ಸಮಸ್ಯೆಯಾಗಲಿಲ್ಲ. ತುಂಬಾ ಸುಲಭವಾಗಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಬರೆದಿದ್ದೇನೆ. ಕಾಲೇಜಿನಲ್ಲಿ ಚೆನ್ನಾಗಿ ಅಭ್ಯಾಸ ಮಾಡಿಸಿದ್ದು ಪರೀಕ್ಷೆಗೆ ನೆರವಾಯಿತು.
ರಾಹುಲ್ ವಿದ್ಯಾನಿಧಿ ಕಾಲೇಜು
ಕನ್ನಡ ತುಂಬಾ ಇಷ್ಟ ಕನ್ನಡ ಪತ್ರಿಕೆ ಯಾರಿಗೂ ಕಷ್ಟ ಆಗುವುದಿಲ್ಲ. ಓದಿದ ಎಲ್ಲ ವಿಷಯಗಳಲ್ಲಿ ಕನ್ನಡ ನಮಗೆ ತುಂಬಾ ಇಷ್ಟ. ಕಷ್ಟ ಅಂತ ಏನೂ ಇಲ್ಲ. ಖುಷಿಯಿಂದಲೇ ಪರೀಕ್ಷೆ ಬರೆದೆ.
ತೇಜಸ್ವಿನಿ ಉಮಾಪ್ರಗತಿ ಕಾಲೇಜು
ಚೆನ್ನಾಗಿ ಓದಿದ್ದೆ ಹಲವು ದಿನಗಳಿಂದ ಪರೀಕ್ಷೆಗೆ ತಯಾರಿ ನಡೆಸಿದ್ದೆ. ಹೀಗಾಗಿ ಮೊದಲ ದಿನ ಕಷ್ಟ ಅನ್ನಿಸಲಿಲ್ಲ. ಪರೀಕ್ಷೆಯ ಆರಂಭದ ದಿನ ಅಂತ ಸ್ವಲ್ಪ ಭಯ ಇತ್ತು. ಅದು ಬಿಟ್ಟರೆ ತುಂಬಾ ಖುಷಿಯಿಂದ ಪರೀಕ್ಷೆ ಬರೆದಿದ್ದೇನೆ.
ಗಗನ್‌ ದೀಪ್‌ ಶ್ರೀಚೈತನ್ಯ ಕಾಲೇಜು
ಸಮಯ ಕೊಟ್ಟಿದ್ದು ನೆರವಾಯಿತು ಪರೀಕ್ಷೆಯ ಸಿದ್ಧತೆಗಾಗಿ ಸಮಯ ಕೊಟ್ಟಿದ್ದು ಸಹಾಯಕವಾಯಿತು. ತಯಾರಿ ನಡೆಸಲು ಹೆಚ್ಚಿನ ಸಮಯ ಇತ್ತು. ಇದರಿಂದ ಪರೀಕ್ಷೆ ಸುಲಭವಾಯಿತು. ಕನ್ನಡದ ಜತೆಗೆ ಎಲ್ಲ ಪತ್ರಿಕೆಗಳಿಗೂ ಅಭ್ಯಾಸ ನಡೆಯುತ್ತಿದೆ.
ಸಂಜುಶ್ರೀ ಸಿದ್ಧಗಂಗಾ ಪಿಯು ಕಾಲೇಜು
ಎಲ್ಲ ಪತ್ರಿಕೆ ಹೀಗೆ ಇರಲಿ ಮುಂದಿನ ಎಲ್ಲ ಪ್ರಶ್ನೆ ಪತ್ರಿಕೆಗಳು ಕನ್ನಡ ಪತ್ರಿಕೆಯಂತೆ ಸುಲಭವಾಗಿ ಇದ್ದರೆ ಚೆನ್ನ. ನಮ್ಮ ಮುಂದಿನ ಪರೀಕ್ಷೆ ಇತಿಹಾಸ. ಯಾವುದೇ ತೊಂದರೆಯಾಗದಂತೆ ಎಲ್ಲವೂ ಇದೇ ರೀತಿ ನಡೆಯಬೇಕು.
ಡಿಂಪನಾ ಸೇಂಟ್ ಮೇರಿಸ್‌ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT