ಕೊರಟಗೆರೆ: ತಾಲ್ಲೂಕಿನ ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸದಸ್ಯರ ಗಮನಕ್ಕೆ ಬಾರದಂತೆ ಸದಸ್ಯತ್ವ ರದ್ದುಪಡಿಸಲಾಗಿದೆ ಎಂದು ಆರೋಪಿಸಿ ಷೇರುದಾರರು ಸಹಕಾರ ಸಂಘದ ಕಚೇರಿ ಎದುರು ಗಲಾಟೆ ನಡೆಸಿದರು.
ಸೆಪ್ಟೆಂಬರ್ 17ರಂದು ಸಹಕಾರಿ ಸಂಘದ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯಲಿದೆ. ಗ್ರಾಮದ ಸಹಕಾರಿ ಸಂಘದಲ್ಲಿ 940 ಮಂದಿ ಮತ ಚಲಾವಣೆ ಮಾಡಬೇಕಿತ್ತು. ಆದರೆ ಈ ಪೈಕಿ 700 ಜನರನ್ನು ಮತದಾರ ಪಟ್ಟಿಯಿಂದ ಕೈ ಬಿಡಲಾಗಿದೆ. ಕೇವಲ 240 ಜನರಿಗೆ ಮಾತ್ರ ಮುಂಬರುವ ಚುನಾವಣೆಯಲ್ಲಿ ಮತ ಚಲಾಯಿಸುವ ಅರ್ಹತೆ ಪಡೆದಿದ್ದಾರೆ. ಸದಸ್ಯರ ಗಮನಕ್ಕೆ ತರದಂತೆ 700 ಜನ ಷೇರುದಾರರನ್ನು ಮತದಾರ ಪಟ್ಟಿಯಿಂದ ಏಕಏಕಿ ತೆಗೆಯಲಾಗಿದೆ ಎಂದು ಆರೋಪಿಸಿ ಷೇರುದಾರರು ಸಹಕಾರಿ ಸಂಘದ ಎದುರು ಅಧಿಕಾರಿಗಳ ವಿರುದ್ಧ ಗಲಾಟೆ ಮಾಡಿದರು.
‘ಪಟ್ಟಿಯಲ್ಲಿ ಹೆಸರು ನೋಂದಾಯಿಸುವುದು, ಕೈ ಬಿಡುವುದು ನಮ್ಮ ಕೈಯಲಿಲ್ಲ. ಚುನಾವಣಾ ಅಧಿಕಾರಿ ವೆಂಕಟೇಶ ಅವರು ಹೆಸರನ್ನು ಕೈಬಿಟ್ಟಿದ್ದಾರೆ’ ಎಂದು ಕಾರ್ಯದರ್ಶಿ ಹೇಳಿದ್ದಾರೆ.
‘ಈ ಬಗ್ಗೆ ಚುನಾವಣೆ ಅಧಿಕಾರಿ ವೆಂಕಟೇಶ ಅವರನ್ನು ವಿಚಾರಿಸಿದರೆ ಮತದಾರರ ಪಟ್ಟಿಗೂ ನಮಗೂ ಸಂಬಂಧ ಇಲ್ಲ ಎಂದು ಉತ್ತರ ನೀಡುತ್ತಿದ್ದಾರೆ. ಈ ಸಮಸ್ಯೆಯನ್ನು ಯಾರಿಗೆ ಕೇಳಬೇಕು’ ಎಂದು ಷೇರುದಾರರು ಪ್ರಶ್ನಿಸಿದರು.
ಪ್ರತಿ ಸಭೆಯಲ್ಲೂ ಭಾಗವಹಿಸಿ ಸಹಿ ಮಾಡಿದ್ದೇನೆ. ಆದರೂ ನನ್ನ ಹೆಸರನ್ನು ಮತದಾರ ಪಟ್ಟಿಯಿಂದ ಕೈ ಬಿಡಲಾಗಿದೆ. ಸೆ. 17ರಂದು ನಡೆಯುವ ಸಹಕಾರಿ ಸಂಘದ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ. ಚುನಾವಣೆ ಮುಂದೂಡಬೇಕು. ಕೈ ಬಿಟ್ಟಿರುವ ಹೆಸರುಗಳನ್ನು ಮತ್ತೆ ಮತದಾರರ ಪಟ್ಟಿಗೆ ಸೇರಿಸಬೇಕು. ರೈತರಿಗೆ ತಿಳಿಸಿದೆ ಬೈಲಾ ಬದಲಾಯಿಸಲಾಗಿದೆ. ಅನೇಕ ಷೇರುದಾರರನ್ನು ಮತದಾರರ ಪಟ್ಟಿಯಿಂದ ಬೇಕೆಂದೇ ಕೈಬಿಡಲಾಗಿದೆ’ ಎಂದು ಷೇರುದಾರ ತಿಮ್ಮರಾಜು ದೂರಿದರು.
ಕಾರ್ಯದರ್ಶಿ ರಮೇಶ್ ಪ್ರತಿಕ್ರಿಯಿಸಿ, ‘ಸರ್ಕಾರದ ಆದೇಶದಂತೆ ಸಹಕಾರಿ ಸಂಘದಲ್ಲಿ ಷೇರುದಾರರು ಬ್ಯಾಂಕ್‌ನಲ್ಲಿ ಇಂತಿಷ್ಟು ವ್ಯವಹಾರ ಮಾಡಬೇಕು. ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಸಹಿ ಹಾಕಬೇಕು ಎಂಬ ನಿಯಮವಿದ್ದು, ಷೇರುದಾರರು ಅದನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಮತದಾರರ ಪಟ್ಟಿಯಿಂದ ಹೆಸರು ಕೈ ಬಿಡಲಾಗಿದೆ. ಈ ಬಗ್ಗೆ ಷೇರುದಾರರಿಗೆ ಅನೇಕ ಬಾರಿ ನೋಟಿಸ್ ನೀಡಲಾಗಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.