ತುಮಕೂರು: ಸತತವಾಗಿ ಸುರಿಯುತ್ತಿರುವ ಮಳೆಗೆ ಬುಧವಾರ ನಗರದ ಅಮಾನಿಕೆರೆ ಭರ್ತಿಯಾಗಿ ಕೋಡಿ ಹರಿದಿದ್ದು, ಶಿರಾಗೇಟ್ ಕಡೆಗೆ ಸಂಚರಿಸಲು ನಿರ್ಮಿಸಿದ್ದ ತಾತ್ಕಾಲಿಕ ರಸ್ತೆ ಕೊಚ್ಚಿಕೊಂಡು ಹೋಗಿದೆ.
ತಾತ್ಕಾಲಿಕ ರಸ್ತೆ ಹಾಳಾಗಿರುವುದರಿಂದ ಶಿರಾಗೇಟ್ ಮಾರ್ಗವಾಗಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಗಳು, ಆಟೊ ಹಾಗೂ ಇತರೆ ಲಘು ವಾಹನಗಳು ಹನುಮಂತಪುರ ಮೂಲಕ, ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಸಂಚರಿಸಬೇಕಾಗಿದೆ.
ಅಮಾನಿಕೆರೆ ಕೋಡಿ ನೀರು ಹರಿಯುತ್ತಿರುವುದರಿಂದ ಸದ್ಯಕ್ಕೆ ತಾತ್ಕಾಲಿಕ ರಸ್ತೆ ನಿರ್ಮಾಣ ಸಾಧ್ಯವಾಗುತ್ತಿಲ್ಲ. ರಸ್ತೆ ನಿರ್ಮಿಸಿದರೆ ಕೋಡಿಯಿಂದ ನೀರು ಜೋರಾಗಿ ಬಂದರೆ ಮತ್ತೆ ಕಿತ್ತುಕೊಂಡು ಹೋಗುತ್ತದೆ. ಸದ್ಯಕ್ಕೆ ರಸ್ತೆ ಸರಿಪಡಿಸುವುದು ಅನುಮಾನ. ಸೇತುವೆ ಕಾಮಗಾರಿ ಪೂರ್ಣಗೊಳ್ಳುವವರೆಗೂ ಜನರಿಗೆ ತೊಂದರೆ ತಪ್ಪಿದ್ದಲ್ಲ.
ಅಮಾನಿಕೆರೆ ಕೋಡಿ ನೀರು ಹರಿದು ಹೋಗುವ ಸ್ಥಳದಲ್ಲಿ ಈ ಹಿಂದಿನ ಸೇತುವೆ ಕಿರಿದಾಗಿದ್ದು, ಪದೇಪದೇ ಅಪಘಾತಗಳು ಸಂಭವಿಸುತ್ತಿದ್ದವು. ರಸ್ತೆ ವಿಸ್ತರಿಸುವ ಸಲುವಾಗಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಸಣ್ಣಪುಟ್ಟ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿತ್ತು. ಈಗ ಈ ರಸ್ತೆಯೂ ಕಿತ್ತುಕೊಂಡು ಹೋಗಿದ್ದು, ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ಆ ರಸ್ತೆಯಲ್ಲಿ ಜನರು ನಡೆದುಕೊಂಡು ಶಿರಾಗೇಟ್ ಕಡೆಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಸೇತುವೆ ಕಾಮಗಾರಿ ಆರಂಭಿಸಿದ ಸಮಯದಲ್ಲಿ ರಸ್ತೆ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಜಿಲ್ಲಾ ಆಡಳಿತದ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಮಳೆಗಾಲದಲ್ಲಿ ಕೆಲಸ ಆರಂಭಿಸದಂತೆ ಒತ್ತಾಯಿಸಿದ್ದರು. ಜನರ ಒತ್ತಾಯಕ್ಕೆ ಮಣಿದು ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿತ್ತು. ನಂತರ ಒಂದೇ ಮಳೆಗೆ ರಸ್ತೆ ಹಾಳಾಗಿತ್ತು. ತಾತ್ಕಾಲಿಕವಾಗಿ ಸರಿಪಡಿಸಿ ಕಾರುಗಳ ಸಂಚಾರ ನಿಷೇಧಿಸಿ ದ್ವಿಚಕ್ರ ವಾಹನ, ಆಟೊ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈಗ ರಸ್ತೆ ಕೊಚ್ಚಿಕೊಂಡು ಹೋಗಿದ್ದು, ಹನುಮಂತಪುರದ ಮೂಲಕ ಸುತ್ತಿ ಬಳಸಿಕೊಂಡು ಶಿರಾಗೇಟ್ ತಲುಪಬೇಕಿದೆ.
ಮೇ 2ರಂದು ಶಿರಾಗೇಟ್ ರಸ್ತೆ ಬಂದ್ ಮಾಡಿದ್ದ ಸಮಯದಲ್ಲಿ 120 ದಿನಗಳಲ್ಲಿ ಸೇತುವೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭರವಸೆ ನೀಡಿದ್ದರು. ಅದರಂತೆ ಆಗಸ್ಟ್ ಅಂತ್ಯಕ್ಕೆ ಕೆಲಸ ಪೂರ್ಣಗೊಳ್ಳಬೇಕಿತ್ತು. ಆದರೆ ಇನ್ನೂ ಸಾಕಷ್ಟು ಕಾಮಗಾರಿ ಬಾಕಿ ಉಳಿದಿದ್ದು, ಪೂರ್ಣಗೊಳಿಸಲು ಒಂದೆರಡು ತಿಂಗಳು ಬೇಕಾಗುತ್ತದೆ.
ವಾಹನ ಸಂಚಾರ ನಿಲ್ಲಿಸಿದ್ದರೂ ಕಾಮಗಾರಿ ಬಿರುಸಾಗಿ ನಡೆಯುತ್ತಿಲ್ಲ. ಆಮೆ ವೇಗದಲ್ಲಿ ನಡೆಯುತ್ತಿರುವ ಕಾಮಗಾರಿ ಚುರುಕುಗೊಳಿಸಲು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು. ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅಮಾನಿಕೆರೆ ಕೋಡಿ
ಎರಡು ದಶಕಗಳ ನಂತರ 2021 ನವೆಂಬರ್‌ನಲ್ಲಿ ಅಮಾನಿಕೆರೆ ಭರ್ತಿಯಾಗಿ ಕೋಡಿ ಹರಿದಿತ್ತು. ಈಗ ಎರಡು ವರ್ಷಗಳ ನಂತರ ಮಳೆ ನೀರಿನಿಂದ ಮತ್ತೊಮ್ಮೆ ಭರ್ತಿಯಾಗಿದೆ. ಕಳೆದ ಕೆಲ ದಿನಗಳಿಂದ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು ಕೆರೆಗೆ ನೀರು ಹರಿದು ಬರುವ ಪ್ರಮಾಣವೂ ಹೆಚ್ಚಾಗಿದೆ. ಇದೇ ರೀತಿ ಮಳೆಯಾದರೆ ಕೆರೆ ಕೋಡಿಯಲ್ಲಿ ನೀರಿನ ಹರಿವು ಮತ್ತಷ್ಟು ಹೆಚ್ಚಳವಾಗಲಿದೆ.
ಸೆ. 15ರ ಒಳಗೆ ಸಂಚಾರಕ್ಕೆ ಮುಕ್ತ
ಶಿರಾಗೇಟ್ ರಸ್ತೆಯಲ್ಲಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಸೆ. 15ರ ಒಳಗೆ ಪೂರ್ಣಗೊಳ್ಳಲಿದ್ದು ನಂತರ ಜನರ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಹೇಳಿದರು. ಭರ್ತಿಯಾಗಿರುವ ಅಮಾನಿಕೆರೆಗೆ ಬುಧವಾರ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ‘ಸೇತುವೆ ಕಾಮಗಾರಿ ಪ್ರಗತಿ ಪರಿಶೀಲಿಸಿದ್ದೇನೆ. ನಿಗದಿತ ಸಮಯಕ್ಕೆ ಕೆಲಸ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರ ಹೇಳಿದ್ದಾರೆ. ಮತ್ತೆ ವಿಳಂಬವಾಗುವುದಿಲ್ಲ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.