ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡ್ಲೇಹಳ್ಳಿ ಮಹಾಸಂಸ್ಥಾನ ಶತಮಾನೋತ್ಸವ: ಸರ್ವರ ಏಳಿಗೆಗೂ ಶ್ರಮಿಸಿದ ಮಠ ಪರಂಪರೆ

ಶತಮಾನೋತ್ಸವದ ಸಂಭ್ರಮದಲ್ಲಿ ಗುರುಕುಲಾನಂದಾಶ್ರಮ
Published 26 ನವೆಂಬರ್ 2023, 8:00 IST
Last Updated 26 ನವೆಂಬರ್ 2023, 8:00 IST
ಅಕ್ಷರ ಗಾತ್ರ

ತಿಪಟೂರು: ರಾಜ್ಯದ ಪ್ರಾಚೀನ ಪರಂಪರೆಯಲ್ಲಿ ಕಲ್ಪತರು ನಾಡಿನ ಸಿಡ್ಲೇಹಳ್ಳಿ ಮಹಾಸಂಸ್ಥಾನವೂ ಒಂದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ, ಆಶ್ರಯ ನೀಡುತ್ತಿರುವ ಗುರುಕುಲಾನಂದಾಶ್ರಮ ಶತಮಾನೋತ್ಸವ ಹೊತ್ತಿನಲ್ಲಿದೆ.

‘ಸಕಲ ಜೀವಾತ್ಮರಿಗೆ ಲೇಸನೇ ಬಯಸುವ’ ಈ ಶರಣರ ಸಾಲು ತನ್ನ ಧ್ಯೇಯ ವಾಕ್ಯ ಮಾಡಿಕೊಂಡಿರುವ ಗುರುಕುಲಾನಂದಾಶ್ರಮ ಜಾತ್ಯತೀತ ಪರಂಪರೆಯ ವಿಶಿಷ್ಟ ಮಠ. ಬಸವಣ್ಣ ಅವರ ತತ್ವ, ಸಿದ್ಧಾಂತ ಹಾದಿಯಲ್ಲೇ ಸಾಗಿರುವ ಮಠ ವೈಚಾರಿಕತೆ, ಧಾರ್ಮಿಕ, ಶೈಕ್ಷಣಿಕ ನೆಲೆಯಲ್ಲಿ ತನ್ನ ಸಾರ್ಥಕತೆ ಕಂಡುಕೊಂಡಿದೆ. ಶಿಡ್ಲೇಹಳ್ಳಿ-ಬಳ್ಳೇಕಟ್ಟೆ ಮಠವೆಂದೂ ಕರೆಯುವ ಇದು ರಾಜ್ಯದ ಪ್ರಾಚೀನ ಮಠಗಳಲ್ಲಿ ಒಂದು. ಈ ಮಠ ಬಗ್ಗೆ ಧಾರ್ಮಿಕ, ಐತಿಹಾಸಿಕ ಗ್ರಂಥಗಳಲ್ಲಿ ಪ್ರಸ್ತಾಪಿಸಲ್ಪಟ್ಟಿದೆ.

ಇತಿಹಾಸದ ಪ್ರಕಾರ 15ನೇ ಶತಮಾನದಲ್ಲಿ ಗುರುಪಾದ ದೇಶಿಕೇಂದ್ರ ಸ್ವಾಮೀಜಿ ಹಾಗಲವಾಡಿ, ಸಂಸ್ಥಾನದ ರಾಜಗುರು ಆಗಿದ್ದರು. ಈ ಮಠದಲ್ಲಿ ಜನಾಕರ್ಷಕ ದೇವಾಲಯ, ಬೆಟ್ಟ, ಜಾತ್ರೆ, ಪವಾಡ ಇಲ್ಲದಿದ್ದರೂ ಮೇಧಾವಿ, ಪಂಡಿತರು, ಉದಾತ್ತರು ಈ ಪೀಠ ಅಲಂಕರಿಸಿ ಜನಸಾಮಾನ್ಯಗೊಳಿಸಿದ್ದಾರೆ. ತತ್ತೋಪದೇಶ, ವಿದ್ಯಾದಾನ ಹಾಗೂ ಅನ್ನ, ಆಶ್ರಯ ನೀಡಿ ಆಯಾ ಕಾಲದಲ್ಲಿ ಸಮಾಜಕ್ಕೆ ಬೆಳಕಾಗಿದ್ದಾರೆ.

19ನೇ ಶತಮಾನದಲ್ಲಿ ಇದೇ ಪರಂಪರೆಯಲ್ಲಿ ಬಂದ ಪಟ್ಟದ ಕರಿಬಸವದೇಶಿ ಕೇಂದ್ರ ಸ್ವಾಮೀಜಿ ಮಠದ ಖ್ಯಾತಿಗೆ ಕಾರಣರಾಗಿದ್ದಾರೆ. ಇವರು ಕಾಶಿಯಲ್ಲಿ ತರ್ಕ, ನ್ಯಾಯ, ತತ್ವಶಾಸ್ತ್ರ ವೇದಾಂತ ಅಭ್ಯಾಸ ಮಾಡಿದ್ದಾರೆ. ಕಾಶಿ ಮತ್ತು ಕೋಲ್ಕತ್ತ ವಿಶ್ವವಿದ್ಯಾಲಯಗಳಲ್ಲಿ ಸಾಹಿತ್ಯ, ಕಾವ್ಯತೀರ್ಥ, ತರ್ಕವಿದ್ವಾನ್ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಶ್ರೀಗಳು ಶಿಕ್ಷಣಕ್ಕೆ ಮಹತ್ವ ನೀಡಿದ್ದರಿಂದ ಮಠವನ್ನು 1922ರಲ್ಲಿ ಶಿಡ್ಲೇಹಳ್ಳಿಯಿಂದ ತಿಪಟೂರಿಗೆ ಸ್ಥಳಾಂತರಿಸಿದರು.

ಆ ಕಾಲದಲ್ಲಿಯೇ ವೀರಶೈವ ಗುರುಕುಲಾನಂದಾಶ್ರಮ ವಿದ್ಯಾರ್ಥಿನಿಲಯ ಆರಂಭಿಸಿ ಗ್ರಾಮೀಣ ಭಾಗದ ರೈತ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿದರು. ಸಾಹಿತಿ ಸಾ.ಶಿ.ಮರುಳಯ್ಯ, ಹಂಪಿ ಅಲ್ಲಮ ಎಂದೇ ಖ್ಯಾತಿ ಪಡೆದ ಸದಾಶಿವಯೋಗಿ, ಕಲ್ಪತರು ವಿದ್ಯಾಸಂಸ್ಥೆ ಸಂಸ್ಥಾಪಕ ಜೆ.ಆರ್.ಮಹಲಿಂಗಯ್ಯ ಕೂಡ ನಿಲಯದ ವಿದ್ಯಾರ್ಥಿಗಳು.

ಶ್ರೀಗಳ ವಿದ್ವತ್ತು ಹಾಗೂ ಜನಪರ ಕಾರ್ಯಕ್ರಮ ಗುರುತಿಸಿ ಅಂದಿನ ಮೈಸೂರು ರಾಜ ಒಡೆಯರು ಶಿಡ್ಲೇಹಳ್ಳಿ ಮಠವನ್ನು ‘ಪ್ರಥಮ ಶ್ರೇಣಿ ಮಠ’ ಎಂದು ಘೋಷಿಸಿ ವಿಶೇಷ ಬಿರುದು ನೀಡಿದ್ದರು. ಮಠದ ಅಂದಿನ ಭಕ್ತರಾದ ಕಂಬಿ ಸಿದ್ದರಾಮಣ್ಣ ಸಮಾನ ಮನಸ್ಕರೊಂದಿಗೆ ಸೇರಿ ವೀರಶೈವ ವಿದ್ಯಾಪ್ರಚಾರಕ ಸಂಘ ಸ್ಥಾಪಿಸಿದರು. ಎಲ್ಲ ಜಾತಿ, ವರ್ಗಗಳ ಶಿಕ್ಷಣಕ್ಕೆ ಕಾರಣರಾದರು. ಶಿಡ್ಲೇಹಳ್ಳಿ ಮಠಕ್ಕೆ ಸೇರಿದ ಬಳ್ಳೇಕಟ್ಟೆ ಮಠದ ಶ್ರೀಗಳು ಮೇಧಾವಿ, ತತ್ವಜ್ಞಾನಿ, ಸಾಮಾಜಿಕ ಹರಿಕಾರರಾಗಿದ್ದರು.

ಅಲ್ಲಿನ ಚನ್ನಮಲ್ಲಿಕಾರ್ಜುನ ದೇಶಿ ಕೇಂದ್ರ ಸ್ವಾಮೀಜಿ ತಾತ್ವಿಕತೆ ಸಾರಿದರು. ಬಿಳಿಗೆರೆ, ಕುಪ್ಪಾಳು, ತುಮಕೂರಿನಲ್ಲಿ ಸಂಸ್ಥೆ ವಿದ್ಯಾರ್ಥಿನಿಲಯ, ಸಂಸ್ಕೃತ ಶಾಲೆ, ಪ್ರೌಢಶಾಲೆ ತೆರೆದರು. ಇವರ ನಂತರ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ ಬಳ್ಳೇಕಟ್ಟೆ ಮಠಕ್ಕೆ ಉತ್ತರಾಧಿಕಾರಿಯಾದರು. 1996ರಲ್ಲಿ ಬಳ್ಳೇಕಟ್ಟೆ ಮಠ ಸಿಡ್ಲೇಹಳ್ಳಿ ಸಂಸ್ಥಾನದೊಂದಿಗೆ ಏಕೀಕೃತಗೊಂಡಿತು.

ಇಮ್ಮಡಿ ಕರಿಬಸವದೇಶಿ ಕೇಂದ್ರ ಸ್ವಾಮೀಜಿ ಪೀಠಾಧಿಪತಿಯಾಗಿ ಅಲ್ಪ ಅವಧಿಯಲ್ಲಿಯೇ ಹಿರಿಯ ಸ್ವಾಮೀಜಿ ಆಶಯ ಸಾಕಾರಗೊಳಿಸಲು ಮುಂದಾದರು. ಹಲವು ಶಿಕ್ಷಣ ಸಂಸ್ಥೆಗಳನ್ನು ತೆರೆದರು. ನಗರದಲ್ಲಿ ಸುಸಜ್ಜಿತ ಗುರುಕುಲ ಶಾಲಾ ಸಂಕೀರ್ಣ ನಿರ್ಮಿಸಲು ಅಡಿಪಾಯ ಹಾಕಿದರು. ಆತ್ಮದ ಅರಿವು, ನೈತಿಕತೆ, ರಾಷ್ಟ್ರ ಭಕ್ತಿ, ಶಿಸ್ತು, ಸಂಸ್ಕಾರಕ್ಕೆ ಒತ್ತು ನೀಡಿ ಸಮಾಜದ ಸರ್ವತೋಮುಖ ಏಳಿಗೆಗೆ ಒತ್ತುಕೊಟ್ಟ ಮಠ ಪರಂಪರೆಯನ್ನು ಬೆಳೆಸಿದ್ದಾರೆ.

ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ
ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ
 ಗುರುಕುಲಾನಂದಾಶ್ರಮ
 ಗುರುಕುಲಾನಂದಾಶ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT