ಭಾನುವಾರ, ಮೇ 22, 2022
21 °C
ಗಾಂಧಿನಗರಕ್ಕೆ ಹೆಚ್ಚುವರಿ ಕಾಮಗಾರಿ ಮಂಜೂರು

ತುಮಕೂರು: ಸ್ಮಾರ್ಟ್ ಸಿಟಿ ಕಾಮಗಾರಿ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ‘ಗಾಂಧಿನಗರದ ವಿವಿಧ ರಸ್ತೆಗಳ ಡಾಂಬರೀಕರಣ ಕಾಮಗಾರಿ ಪೂರ್ಣಗೊಂಡಿದೆ.  ಫುಟ್‌ಪಾತ್, ಮನೆಗಳಿಗೆ ರೋಪ್ ನಿರ್ಮಿಸುವ ಕಾರ್ಯ ಚಾಲ್ತಿಯಲ್ಲಿದೆ. ಮುಂದಿನ 15 ದಿನದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಪಾಲಿಕೆಯ 15ನೇ ವಾರ್ಡ್ ಸದಸ್ಯೆ ಗಿರಿಜಾ ಧನಿಯಾಕುಮಾರ್ ತಿಳಿಸಿದರು.

ನಗರದ ಗಾಂಧಿನಗರದಲ್ಲಿ ನಡೆಯುತ್ತಿರುವ ಫುಟ್‌ಪಾತ್‌ ಕಾಮಗಾರಿ ವೀಕ್ಷಿಸಿದ ನಂತರ ಅವರು ಮಾತನಾಡಿದರು.

ಕಳೆದ ಒಂದೂವರೆ ವರ್ಷದಿಂದ ಸಹಕರಿಸಿದ ಬಡಾವಣೆಯ ನಾಗರಿಕರು, ಶಾಸಕ ಜ್ಯೋತಿ ಗಣೇಶ್, ಸಂಸದ ಜಿ.ಎಸ್. ಬಸವರಾಜು ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಗಾಂಧಿನಗರದ 9 ರಸ್ತೆಗಳ ಜೊತೆಗೆ ಹೊಸದಾಗಿ ನಾಗರಿಕರ ಮತ್ತು ಜನಪ್ರತಿನಿಧಿಗಳ ಆಗ್ರಹದ ಮೇರೆಗೆ 5 ರಸ್ತೆಗಳನ್ನು ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಹೆಚ್ಚುವರಿಯಾಗಿ ಸೇರಿಸಲಾಗಿದೆ. ಶೀಘ್ರವೇ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದರು.

ಒಂದು ಬಾರಿ ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ಯಾವ ಕಾರಣಕ್ಕೂ ರಸ್ತೆ ಅಗೆಯಲು ಅವಕಾಶವಿಲ್ಲ. ಅಗತ್ಯವಿದ್ದರೆ ಫುಟ್‌ಪಾತ್‌‌ನಲ್ಲಿ ಇದಕ್ಕಾಗಿ ಜಾಗ ನೀಡಿದ್ದು, ಅಲ್ಲಿ ಕೆಲಸ ಮಾಡಿಕೊಳ್ಳಬಹುದು. ಈಗಾಗಲೇ 24*7 ಕುಡಿಯುವ ನೀರು, ಗ್ಯಾಸ್ ಪೈಪ್‌ಲೈನ್ ಹಾಗೂ ವಿದ್ಯುತ್ ಕಾಮಗಾರಿ ಪೂರ್ಣಗೊಂಡಿದೆ ಎಂದು ವಿವರಿಸಿದರು.

ಆರ್.ಎಂ.ಎನ್. ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ ಚಲ್ಲದೊರೈ ಕುಮಾರ್, ‘ಚಿಕ್ಕಪೇಟೆ, ಗಾಂಧಿನಗರ, ಎಂ.ಜಿ. ರಸ್ತೆಯ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ರಸ್ತೆಯ ಮಧ್ಯದಲ್ಲಿ ಡಕ್ಕಿಂಗ್ ನಿರ್ಮಿಸುತ್ತಿರುವ ಬಗ್ಗೆ ಭವಿಷ್ಯದಲ್ಲಿ ತೊಂದರೆಯಾಗಬಹುದು ಎಂದು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ದೂರಿದ್ದರು. ಈ ಹಿನ್ನೆಲೆಯಲ್ಲಿ ರಸ್ತೆಯ ಒಂದು ಬದಿಯಲ್ಲಿ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ಬಡಾವಣೆಯ ನಾಗರಿಕ ಎಲ್.ಐ.ಸಿ ಮಹೇಶ್, ಇಇ ಚಂದನವೀರಯ್ಯ, ಮ್ಯಾನೇಜರ್ ಓಂಪ್ರಕಾಶ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.