ತುಮಕೂರು: ಆಸ್ತಿ ಅಕ್ರಮ ಸಂಪಾದನೆ ದೃಢಪಟ್ಟ ತುಮ ಕೂರಿನ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ (ಹಿಂದಿನ) ಆರ್.ಸುಬ್ರಹ್ಮಣ್ಯ ಎಂಬುವವರಿಗೆ ₹2.32 ಕೋಟಿ ದಂಡ ಹಾಗೂ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.
2016ರಲ್ಲಿ ಅಂದಿನ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರು ತುಮಕೂರಿನ ಕುವೆಂಪು ನಗರದ ಮನೆ, ಕಚೇರಿ ಹಾಗೂ ಮತ್ತಿತರ ಕಡೆಗಳಲ್ಲಿ ದಾಳಿ ನಡೆಸಿದ್ದರು. ಸುಬ್ರಹ್ಮಣ್ಯ ಹಾಗೂ ಅವರ ಕುಟುಂಬದವರ ಹೆಸರಿನಲ್ಲಿ ₹1.21ಕೋಟಿ ಆಸ್ತಿಯನ್ನು ಅಕ್ರಮವಾಗಿ ಹೊಂದಿರುವುದನ್ನು ಪತ್ತೆ ಮಾಡಿದ್ದರು. ನಂತರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು.
7ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ (ಲೋಕಾಯುಕ್ತ ವಿಶೇಷ ನ್ಯಾಯಾಲಯ) ನ್ಯಾಯಾಧೀಶರಾದ ಟಿ.ಪಿ.ರಾಮಲಿಂಗೇಗೌಡ ಅವರು ವಿಚಾರಣೆ ನಡೆಸಿದರು. ಆರೋಪಿ ಸುಬ್ರಹ್ಮಣ್ಯ ಹಾಗೂ ಕುಟುಂಬದವರು ನಿಗದಿತ ಆದಾಯಕ್ಕಿಂತ ₹1.16ಕೋಟಿ ಆಸ್ತಿಯನ್ನು ಅಕ್ರಮವಾಗಿ ಸಂಪಾದಿಸಿರುವುದು ವಿಚಾರಣೆ ಸಮಯದಲ್ಲಿ ದೃಢಪಟ್ಟಿರುವುದಾಗಿ ಪ್ರಕಟಿಸಿದರು. ಅಕ್ರಮವಾಗಿ ಸಂಪಾದಿಸಿರುವ ಆಸ್ತಿಯ ಎರಡು ಪಟ್ಟು ₹2.32 ಕೋಟಿ ವಸೂಲಿ ಮಾಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ಲೋಕಾಯುಕ್ತರ ಪರವಾಗಿ ಎನ್.ಬಿ.ಬಸವರಾಜು ವಾದ ಮಂಡಿಸಿದರು. ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಹಾಲಪ್ಪ, ಜೆ.ರಮೇಶ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಸುಬ್ರಹ್ಮಣ್ಯ ಅವರನ್ನು ವಶಕ್ಕೆ ಪಡೆದು ಜೈಲಿಗೆ ಕಳುಹಿಸಲಾಗಿದೆ. ಪ್ರಸ್ತುತ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.