ಪಾವಗಡ: ಪಟ್ಟಣದ ಶನೈಶ್ಚರ ದೇಗುಲದಲ್ಲಿ ಕೊನೆಯ ಶ್ರಾವಣ ಶನಿವಾರ ನಡೆದ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಸಹಸ್ರಾರು ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.
ಮಡಕಶಿರಾ, ಹಿಂದೂಪುರ ಸೇರಿದಂತೆ ವಿವಿಧೆಡೆಯಿಂದ ಭಕ್ತಾದಿಗಳು ಪಾದಯಾತ್ರೆ ಮೂಲಕ ದೇಗುಲಕ್ಕೆ ಬಂದರು.
ಕಳೆದ ವಾರಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರಿಂದ ದಿನವಿಡಿ ಪಟ್ಟಣದಲ್ಲಿ ವಾಹನ ದಟ್ಟಣೆ ಹೆಚ್ಚಿತ್ತು. ತುಮಕೂರು, ಬಳ್ಳಾರಿ, ಶಿರಾ ರಸ್ತೆ ವಾಹನಗಳಿಂದ ಕಿಕ್ಕಿರಿದಿದ್ದವು. ಪಟ್ಟಣದ ಒಂದೆಡೆಯಿಂದ ಮತ್ತೊಂದೆಡೆಗೆ ಸಂಚರಿಸುವುದು ಕಷ್ಟಸಾಧ್ಯವಾಗಿತ್ತು.
ವಿವಿಧೆಡೆಯಿಂದ ದೇಗುಲಕ್ಕೆ ಬರಲು ವಿಶೇಷ ಬಸ್ ಸೌಕರ್ಯ ಕಲ್ಪಿಸಲಾಗಿತ್ತು.
ಬೆಳಗಿನ ಜಾವ 4 ಗಂಟೆಯಿಂದಲೇ ಅಭಿಷೇಕ, ತೈಲಾಭಿಷೇಕ, ಕುಂಕುಮಾರ್ಚನೆ, ಸರ್ವಸೇವೆ, ತಾಳಿ ಪೂಜೆಗಳು ನಡೆದವು.
ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಕ್ತರಿಗೆ ಈ ವಾರವೂ ಉಪಹಾರ ವಿತರಿಸಿದರು. ದೇಗುಲದ ಎಸ್‌ಎಸ್‌ಕೆ ಅನ್ನದಾಸೋಹ ಭವನದಲ್ಲಿ ಶುಕ್ರವಾರದಿಂದ ಸಹಸ್ರಾರು ಸಂಖ್ಯೆಯ ಭಕ್ತರು ಉಚಿತವಾಗಿ ಪ್ರಸಾದ ವಿತರಿಸಲಾಯಿತು.
ಬೆಳಿಗಿನ ಜಾವದಿಂದ ಸಂಜೆಯವರೆಗೆ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆದರು. ತರಹೇವಾರಿ ಹೂವುಗಳಿಂದ ದೇಗುಲವನ್ನು ಅಲಂಕರಿಸಲಾಗಿತ್ತು.
ಶನೈಶ್ಚರ ದೇಗುಲ ಸುತ್ತಮುತ್ತಲ ಸುಮಾರು ಅರ್ಧ ಕಿ.ಮೀ ರಸ್ತೆ, ಪಾದಾಚಾರಿ ರಸ್ತೆ, ವಿಭಜಕಗಳು, ಪೂಜಾ ಸಾಮಗ್ರಿ, ಅಂಗಡಿ ಮಳಿಗೆಗಳಿಂದ ತುಂಬಿತ್ತು. ಸಾವಿರಾರು ಮಂದಿ ಕೇಶ ಮುಂಡನ ಮಾಡಿಸಿಕೊಂಡು ಹರಿಕೆ ತೀರಿಸಿದರು.
ಪಾವಗಡ ಶನೈಶ್ಚರ ದೇಗುಲದಲ್ಲಿನ ಸೀತಲಾಂಬ ದೇವಿಗೆ ವಿಶೇಷ ಅಲಂಕಾರ ಮಾಡಿರುವುದು.
ಪಾವಗಡ ಶನೈಶ್ಚರ ದೇಗುಲಕ್ಕೆ ಆಗಮಿಸಿದ್ದ ಭಕ್ತಾದಿಗಳು ಶನಿವಾರ ಸರದಿಯಲ್ಲಿ ನಿಂತು ದರ್ಶನ ಪಡೆದರು.
ಪಾವಗಡ ಶನೈಶ್ಚರ ದೇಗುಲಕ್ಕೆ ಆಗಮಿಸಿದ್ದ ಭಕ್ತಾದಿಗಳು ಶನಿವಾರ ತೈಲಾಭಿಷೇಕ ಕುಂಕುಮಾರ್ಚನೆ ವಿವಿಧ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.