ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಸ್ಥರಿಗೆ ಏಳು ತಾಸು ಠಾಣೆಯಲ್ಲಿ ದಿಗ್ಬಂಧನ

ಹಾಸನ ಎಸ್‌.ಪಿ ತಾಯಿ ಅಜೀಜಾ ದೂರು
Published 3 ಜನವರಿ 2024, 0:27 IST
Last Updated 3 ಜನವರಿ 2024, 0:27 IST
ಅಕ್ಷರ ಗಾತ್ರ

ಕುಣಿಗಲ್ (ತುಮಕೂರು): ರಸ್ತೆಬದಿ ನಿಂತಿದ್ದ ವ್ಯಕ್ತಿಗೆ ತಾಕಿದ ತಮ್ಮ ಕಾರನ್ನು ತಡೆದು ನಿಲ್ಲಿಸಿದ ಗ್ರಾಮಸ್ಥರ ವಿರುದ್ಧ ಹಾಸನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಎಸ್‌.ಮಹಮ್ಮದ್ ಸುಜೀತಾ ಅವರ ತಾಯಿ ಅಜೀಜಾ ಅವರು ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.

ಘಟನೆ ನಂತರ ದೂರು ನೀಡಲು ಪೊಲೀಸ್‌ ಠಾಣೆಗೆ ತೆರಳಿದ ಗ್ರಾಮಸ್ಥರನ್ನು ಏಳು ತಾಸು ಠಾಣೆಯಲ್ಲಿಯೇ ಕೂರಿಸಲಾಗಿತ್ತು. ಬೆಂಗಳೂರಿಗೆ ತೆರಳಿ ಅಜೀಜಾ ಅವರಿಂದ ಮಾಹಿತಿ ಪಡೆದು ಪೊಲೀಸರು ಬಂದ ನಂತರ ಗ್ರಾಮಸ್ಥರನ್ನು ಬಿಟ್ಟು ಕಳಿಸಲಾಗಿತ್ತು. ಆದರೆ, ಮಂಗಳವಾರ ನಾಲ್ವರು ಗ್ರಾಮಸ್ಥರನ್ನು ಬಂಧಿಸಲಾಗಿದೆ. 

ಕಾರಿನ ಕನ್ನಡಿ ತಾಗಿದ್ದೇ ಕಾರಣ:

ಅಜೀಜಾ ಹಾಗೂ ಇತರರು ಹಾಸನದಿಂದ ಸೋಮವಾರ ಕಾರಿನಲ್ಲಿ ಕುಣಿಗಲ್‌ ಮೂಲಕ ಬೆಂಗಳೂರಿಗೆ ಹೊರಟಿದ್ದರು. ಕಾರಿನ ಕನ್ನಡಿ ತಾಕಿ ರಸ್ತೆ ಬದಿ ನಿಂತಿದ್ದ ಕುಮಾರ್‌ ಎಂಬುವರು ರಸ್ತೆಗೆ ಬಿದ್ದಿದ್ದಾರೆ. ಅಪಘಾತದ ನಂತರ ಕಾರು ನಿಲ್ಲಿಸದೆ ಹೊರಟವರನ್ನು ತಡೆದ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದರು.  

ಆಗ ಅಜೀಜಾ ಹಾಗೂ ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಗ್ರಾಮದ ಹಿರಿಯರೊಬ್ಬರು ಕೈಯಲ್ಲಿ ಹಿಡಿದಿದ್ದ ಕೊಡೆ ಅಜೀಜಾ ಅವರಿಗೆ ತಗುಲಿ ತರಚಿದ ಗಾಯವಾಗಿತ್ತು. ಕುಣಿಗಲ್‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು ಬೆಂಗಳೂರಿಗೆ ತೆರಳಿದ್ದರು.

ಘಟನೆ ನಂತರ ದೂರು ನೀಡಲು ತೆರಳಿದ ಗ್ರಾಮಸ್ಥರನ್ನು ಠಾಣೆಯಲ್ಲಿ ಕೂರಿಸಿದ ಪೊಲೀಸರು ಮಾಹಿತಿ ಪಡೆದುಕೊಂಡು ಬರಲು ಬೆಂಗಳೂರಿಗೆ ತೆರಳಿದ್ದರು. ಅಜೀಜಾ ಅವರಿಂದ ಮಾಹಿತಿ ಪಡೆದು ವಾಪಸ್ ಬರುವವರೆಗೂ (ಮಧ್ಯಾಹ್ನ 3ರಿಂದ ರಾತ್ರಿ 10 ಗಂಟೆ ವರೆಗೆ) ಗ್ರಾಮಸ್ಥರನ್ನು ಠಾಣೆಯಲ್ಲೇ ಕೂರಿಸಿ
ಕೊಳ್ಳಲಾಗಿತ್ತು.

‘ಬಿದನಗೆರೆ ಹತ್ತಿರ ವಾಹನವೊಂದು ವ್ಯಕ್ತಿಗೆ ಡಿಕ್ಕಿ ಹೊಡೆದು ಹೋಗಿತ್ತು. ನಾವು ಕಾರು ನಿಲ್ಲಿಸಿ ವಿಚಾರಿಸಿದೆವು. ಸ್ಥಳಕ್ಕೆ ಬಂದ ಹತ್ತು ಜನರ ಗುಂಪು ನಮ್ಮನ್ನು ಸುತ್ತುವರೆದು ಗಲಾಟೆ ಮಾಡಿತು. ನಾವೇ ಅಪಘಾತ ಮಾಡಿದ್ದೇವೆ ಎಂದು ನಿಂದಿಸಿ ಹಣಕ್ಕೆ ಬೇಡಿಕೆ ಇಟ್ಟರು. ನಮ್ಮ ಮೇಲೆ ಹಲ್ಲೆಗೆ ಯತ್ನಿಸಿ,
ಕೊಲ್ಲುವ ಬೆದರಿಕೆ ಹಾಕಿದರು. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಅಜೀಜಾ ಅವರು ಕುಣಿಗಲ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ದೂರಿನ ಮೇರೆಗೆ ನಾಗರಾಜ್‌, ಕುಮಾರ್‌ ಸೇರಿದಂತೆ ಒಂಬತ್ತು ಗ್ರಾಮಸ್ಥರ ವಿರುದ್ಧ ಐಪಿಸಿ 307
(ಕೊಲೆ ಯತ್ನ) ಹಾಗೂ ಇತರ ಕಾಲಂ ಅಡಿ ಪ್ರಕರಣ ದಾಖಲಾಗಿದೆ. ಇದಕ್ಕೆ ಪ್ರತಿಯಾಗಿ ಗ್ರಾಮಸ್ಥರು ಅಜೀಜಾ ಅವರ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಮನವೊಲಿಕೆ ವಿಫಲ

ಈ ಮಧ್ಯೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಸನ ಎಸ್‌.ಪಿ ಸುಜೀತಾ ಜತೆಗೆ ಮಾತುಕತೆ ನಡೆಸಿದ್ದರು. ‘ಸಣ್ಣ ವಿಷಯವನ್ನು ದೊಡ್ಡದು ಮಾಡುವುದು ಬೇಡ’ ಎಂದು ಸಲಹೆ ನೀಡಿದ್ದರು. ಅವರು ಪಟ್ಟು ಹಿಡಿದಿದ್ದರಿಂದ ದೂರು ದಾಖಲಿಸಿಕೊಳ್ಳಲಾಯಿತು ಎಂದು ಮೂಲಗಳು ತಿಳಿಸಿವೆ. ‘ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ಕುಮಾರ್‌ ಎಂಬುವರ ತಲೆಗೆ ಗಾಯವಾಗಿದೆ. ಘಟನೆ ನಂತರ ಕಾರು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದು ತಡೆದು ನಿಲ್ಲಿಸಿ ವಿಚಾರಿಸಲಾಯಿತು. ನಮ್ಮನ್ನು ಬೈದು ಕಾರಿನಲ್ಲಿ ತೆರಳಿದರು. ಚಾಲಕ ಮತ್ತು ಕಾರಿನಲ್ಲಿದ್ದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ದೂರಿನಲ್ಲಿ ತಿಳಿಸಿದ್ದಾರೆ. ‘ಅಪಘಾತ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಪೊಲೀಸರು ಗ್ರಾಮಸ್ಥರ ವಿರುದ್ಧ ದರ್ಪ ತೋರುತ್ತಿದ್ದಾರೆ. ಅಪಘಾತ ಮಾಡಿ ಅವರೇ ದೂರು ನೀಡಿದ್ದಾರೆ. ಇದರಿಂದ ಅಮಾಯಕರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಬಿದನಗೆರೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT